ಜ.4ರಿಂದ ಕೆ.ಆರ್.ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯೋಗ ನೋಂದಣಿ ಸೃಷ್ಟಿ ಮೇಳ
ಮೈಸೂರು

ಜ.4ರಿಂದ ಕೆ.ಆರ್.ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯೋಗ ನೋಂದಣಿ ಸೃಷ್ಟಿ ಮೇಳ

January 2, 2022

ಮೈಸೂರು, ಜ.1(ಎಂಟಿವೈ)- ನಿರುದ್ಯೋಗಿಗಳಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ಕೌಶಲ್ಯ ತರಬೇತಿ ನೀಡುವುದರೊಂದಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜ.4ರಿಂದ 8ವರೆಗೆ ಮೈಸೂರಿನ ಕೆ.ಆರ್.ಕ್ಷೇತ್ರದ 5 ಸ್ಥಳಗಳಲ್ಲಿ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗ ನೋಂದಣಿ ಸೃಷ್ಟಿ ಮೇಳ ಆಯೋಜಿಸಲಾಗಿದೆ.

ಶಾಸಕ ಎಸ್.ಎ.ರಾಮದಾಸ್ ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಕೇವಲ ಉದ್ಯೋಗ ಮೇಳ ಮಾಡುವುದರಿಂದ ನಿರುದ್ಯೋಗಿಗಳಿಗೆ ಪೂರ್ಣ ಪ್ರಮಾಣದಲ್ಲಿ ಕೆಲಸ ಸಿಗುವುದಿಲ್ಲ. ಸಾಕಷ್ಟು ಹುದ್ದೆ ಖಾಲಿ ಇದ್ದರೂ, ಕೌಶಲ್ಯದ ಕೊರತೆಯಿಂದಾಗಿ ಖಾಲಿಯಿರುವ ಹುದ್ದೆಗಳಿಗೆ ನಿರು ದ್ಯೋಗಿಗಳು ಆಯ್ಕೆಯಾಗುತ್ತಿಲ್ಲ. ಇದನ್ನು ಮನಗಂಡು ಕೌಶಲ್ಯ ವೃದ್ಧಿಸಲು ತರಬೇತಿ ನೀಡಿ ಉದ್ಯೋಗ ಸೃಷ್ಟಿಸುವ ವಿನೂತನ ಮೇಳವನ್ನು ಆಯೋಜಿಸಲಾಗಿದೆ ಎಂದರು.

8ನೇ ತರಗತಿ ಮೇಲ್ಪಟ್ಟು ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಪಡೆದಿರುವವರು ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳು, ಹತ್ತನೇ ತರಗತಿ ಮೊಟಕುಗೊಳಿಸಿರುವವರು, ಸಣ್ಣ-ಪುಟ್ಟ ಉದ್ಯೋಗ ಮಾಡುತ್ತಿರುವವರು, ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ಹಾಗೂ ಆಸಕ್ತಿ ಇರುವ ಸ್ತ್ರೀಶಕ್ತಿ ಸಂಘಗಳು ಈ ಮೇಳದಲ್ಲಿ ಭಾಗವಹಿಸಬಹುದು. ಮೊದಲ 2 ಗಂಟೆಗಳ ಕಾಲ ವಿವಿಧ ಇಲಾಖೆಗಳ ವಸ್ತು ಪ್ರದರ್ಶ ನವನ್ನು ನೋಡಿದ ನಂತರ ಅಭ್ಯರ್ಥಿಗಳಿಗೆÉ ಯಾವ ಕ್ಷೇತ್ರದಲ್ಲಿ ಅಥವಾ ಯಾವ ಉದ್ಯೋಗದಲ್ಲಿ ಆಸಕ್ತಿಯಿದೆ. ಕೌಶಲ್ಯವಿದೆ ಎಂದು ಗುರುತಿಸಲಾಗುತ್ತದೆ. ಆ ನಂತರ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.

ಮೇಳಕ್ಕೆ ಬರುವ ಅಭ್ಯರ್ಥಿಗಳು ನಿಗದಿತ ಅರ್ಜಿ ಯಲ್ಲಿ ಅರ್ಹತೆ, ಬಯಸುವ ಉದ್ಯೋಗ, ಆಸಕ್ತಿಯಿ ರುವ ಕ್ಷೇತ್ರ ಸೇರಿದಂತೆ ಅಗತ್ಯ ಮಾಹಿತಿ ನಮೂದಿಸಿ ಕೊಡಬೇಕು. ತದ ನಂತರ ಆಯಾ ಕ್ಷೇತ್ರದಲ್ಲಿ ಕೌಶಲ್ಯಾ ಭಿವೃದ್ಧಿ ತಾಂತ್ರಿಕ ಅಭಿವೃದ್ಧಿ, ಮಾರುಕಟ್ಟೆಯ ಶಿಕ್ಷಣ, ಹಣಕಾಸಿನ ನೆರವು ಎಲ್ಲವನ್ನೂ ಒದಗಿಸಿ ಉದ್ಯಮ ಶೀಲರನ್ನಾಗಿ ಮಾಡಲಾಗುತ್ತದೆ ಎಂದರು.

ನಿರುದ್ಯೋಗಿಗಳಿಗೆ ನೆರವು: ಕೊರೊನಾ, ಲಾಕ್‍ಡೌನ್ ನಿಂದಾಗಿ ಸಾಕಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಹೊಸ ಉದ್ಯಮ ಮಾಡಲು ಯುವಕರಿಗೆ ಸಾಲ ಸೌಲಭ್ಯ ದೊರೆಯುತ್ತಿಲ್ಲ. ಸ್ತ್ರೀಶಕ್ತಿ ಸಂಘಗಳ ಮೂಲಕ ಮಹಿಳೆಯರು ಮನೆಯಲ್ಲೇ ಕೆಲಸ ಮಾಡಿ ಸಂಪಾದನೆ ಮಾಡಬಹುದು. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಈ ಮೇಳ ಆಯೋಜಿಸಲಾಗಿದೆ. ಈಗಾಗಲೇ 100ಕ್ಕೂ ಹೆಚ್ಚು ಕಂಪನಿಗಳು ಮೇಳ ಬರಲು ಒಪ್ಪಿಗೆ ಸೂಚಿಸಿವೆ. ಅಲ್ಲದೆ, ಸಾಲ ಸೌಲಭ್ಯ ನೀಡಲು 10ಕ್ಕೂ ಹೆಚ್ಚು ಬ್ಯಾಂಕ್ ಗಳು ಮುಂದೆ ಬಂದಿವೆ. ಐದು ಕಡೆ ಈ ಮೇಳ ನಡೆಯ ಲಿದೆ. ಕೇವಲ ಕೆ.ಆರ್.ಕ್ಷೇತ್ರ ಮಾತ್ರವಲ್ಲದೆ, ಮೈಸೂರು ಜಿಲ್ಲೆಯಿಂದಲೂ ಅರ್ಹ ಅಭ್ಯರ್ಥಿಗಳು ಮೇಳದಲ್ಲಿ ಪಾಲ್ಗೊಳ್ಳಬಹುದು. ಶಿಕ್ಷಣ ಇಲಾಖೆ, ಕೈಗಾರಿಕೆ, ಕೌಶಲ್ಯ ಅಭಿವೃದ್ಧಿ, ಕಾರ್ಮಿಕ ಇಲಾಖೆ, ಸಹಕಾರ ಇಲಾಖೆ, ತೋಟಗಾರಿಕೆ ಇಲಾಖೆ, ಪ್ರವಾಸೋದ್ಯಮ, ಪಶು ಸಂಗೋಪನೆ, ನಗರಾಭಿವೃದ್ಧಿ, ಆರೋಗ್ಯ ಮತ್ತು ಕೇಂದ್ರ ಸರ್ಕಾರದ ಒಟ್ಟು 5 ಯೋಜನೆಗಳನ್ನು ಒಟ್ಟು ಮಾಡಿ ಉದ್ಯೋಗ ಸೃಷ್ಟಿ ಮಾಡುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
ಆನ್‍ಲೈನ್ ಮೂಲಕ ಸಿಎಂ ಚಾಲನೆ: ಮೇಳಕ್ಕೆ ಜ.4ರಂದು ಬೆಳಗ್ಗೆ 9 ಗನ್‍ಹೌಸ್ ಬಳಿಯಿರುವ ವಿದ್ಯಾ ಶಂಕರ ಕಲ್ಯಾಣ ಮಂಟಪದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಆನ್‍ಲೈನ್ ಮೂಲಕ ಮೇಳವನ್ನು ಉದ್ಘಾ ಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಮೋದಿ ಯುಗ ಉತ್ಸವದಲ್ಲಿ ಗುರುತಿಸಿರುವ ಕೌಶಲ್ಯ ತರಬೇತಿ ಹೊಂದಿರುವ ಸಂಘಗಳಿಗೆ ಸಾಲ ಸೌಲಭ್ಯ ಮತ್ತು ಸಹಾಯಧನ ನೀಡುವ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಂಸದ ಪ್ರತಾಪಸಿಂಹ, ಮೇಯರ್ ಸುನಂದಾ ಪಾಲನೇತ್ರ, ಶಾಸಕ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಪಾಲಿಕೆ ಆಯುಕ್ತ ಜಿ. ಲಕ್ಷ್ಮಿಕಾಂತರೆಡ್ಡಿ ಸೇರಿದಂತೆ ಇತರರು ಭಾಗವಹಿ ಸಲಿದ್ದಾರೆ. ಕಾರ್ಯಕ್ರಮಕ್ಕೆ ಪ್ರತಿದಿನ 20 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಎರಡು ವರ್ಷದ ಹಿಂದೆ: ಎರಡು ವರ್ಷದ ಹಿಂದೆ 10 ಸಾವಿರ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ನಡೆಸಿದ ಮೇಳದಲ್ಲಿ ಕೇವಲ 1426 ಮಂದಿಗೆ ಕೆಲಸ ಸಿಕ್ಕಿತ್ತು. ನಂತರ 6 ಸಾವಿರ ಉದ್ಯೋಗ ಸೃಷ್ಟಿಸಲು ಮೇಳ ನಡೆಸಿದೆವು. ಆದರೆ, 800 ಜನರಿಗಷ್ಟೇ ಕೆಲಸ ಲಭ್ಯವಾಯಿತು. ಮತ್ತೊಮ್ಮೆ 420 ಜನರಿಗೆ ಉದ್ಯೋಗ ಸಿಕ್ಕಿತು. ಇದಕ್ಕೆ ಕಾರಣ ಹುಡುಕಿದಾಗ ನಮಗೆ ಸಿಕ್ಕಿದ್ದು, ನಮ್ಮಲ್ಲಿ ಕೆಲಸ ಇದೆ. ಆದರೆ, ಅದನ್ನು ಪಡೆಯಲು ಬೇಕಾದ ಕೌಶಲ್ಯ ಯುವಕರಲ್ಲಿ ಇಲ್ಲ ಎಂಬ ಅಂಶ. ಈ ನಿಟ್ಟಿನಲ್ಲಿ ತರಬೇತಿ ನೀಡಿ ಕೌಶಲ್ಯ ವೃದ್ಧಿಸಿ ಉದ್ಯೋಗ ಸೃಷ್ಟಿಸುವ ಮೇಳವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮೇಯರ್ ಸುನಂದಾ ಪಾಲನೇತ್ರ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಶಿವಕುಮಾರ್ ಇದ್ದರು.

Translate »