ಮೈಸೂರಿನ 6 ಕೇಂದ್ರಗಳಲ್ಲಿ ಎಸ್‍ಎಸ್‍ಎಲ್‍ಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯ ಆರಂಭ
ಮೈಸೂರು

ಮೈಸೂರಿನ 6 ಕೇಂದ್ರಗಳಲ್ಲಿ ಎಸ್‍ಎಸ್‍ಎಲ್‍ಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯ ಆರಂಭ

April 11, 2019

ಮೈಸೂರು: ಮಾರ್ಚ್-ಏಪ್ರಿಲ್ ಮಾಹೆಯಲ್ಲಿ ನಡೆದ ಎಸ್‍ಎಸ್ ಎಲ್‍ಸಿ ವಾರ್ಷಿಕ ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಮೈಸೂರಿನ 6 ಕೇಂದ್ರಗಳಲ್ಲಿ ಇಂದಿನಿಂದ ಆರಂಭವಾಯಿತು. ಮೈಸೂರು ಕುವೆಂಪುನಗರದಲ್ಲಿರುವ ಕಾವೇರಿ ಪ್ರೌಢಶಾಲೆ, ಜ್ಞಾನಗಂಗ ಪ್ರೌಢಶಾಲೆ, ಸರಸ್ವತಿ ಪುರಂನಲ್ಲಿರುವ ವಿಜಯವಿಠಲ, ವಿವಿ. ಮೊಹ ಲ್ಲಾದ ನಿರ್ಮಲಾ ಕಾನ್ವೆಂಟ್, ಜಯಲಕ್ಷ್ಮಿ ಪುರಂನ ಚಿನ್ಮಯಿ ಪ್ರೌಢಶಾಲೆ ಹಾಗೂ ಎನ್.ಆರ್.ಮೊಹ ಲ್ಲಾದ ಸೆಂಟ್ ಫಿಲೋಮಿನಾ ಪ್ರೌಢಶಾಲೆಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ.

ಎಲ್ಲಾ 6 ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6ಗಂಟೆವರೆಗೆ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 35ರ ರೀತ್ಯಾ ನಿಷೇಧಾಜ್ಞೆಯನ್ನು ಏಪ್ರಿಲ್ 9 ರಿಂದ 20ರವರೆಗೆ ಜಾರಿಗೆ ಬರುವಂತೆ ಮೈಸೂರು ನಗರ ಪೊಲೀಸ್ ಕಮೀಷ್ನರ್ ಕೆ.ಟಿ.ಬಾಲಕೃಷ್ಣ ಆದೇಶ ಹೊರಡಿಸಿದ್ದಾರೆ. ಈ ಪ್ರದೇಶದಲ್ಲಿ ಮೌಲ್ಯಮಾಪನ ಸಿಬ್ಬಂದಿಯನ್ನು ಹೊರತುಪಡಿಸಿ ಅನಧಿಕೃತ ವ್ಯಕ್ತಿಗಳು ಸಂಚರಿಸುವುದು ಅಥವಾ ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್ ಕಮೀಷ್ನರ್ ತಿಳಿಸಿದರು.

ಪ್ರತೀ ಕೇಂದ್ರಗಳಲ್ಲಿ ಒಂದೊಂದು ವಿಷಯದ ಎಸ್‍ಎಸ್‍ಎಲ್‍ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಡೆಯುತ್ತಿದ್ದು, ಅಸಿಸ್ಟೆಂಟ್ ಎಕ್ಸಾಮಿನರ್‍ಗಳಿಗೆ ದಿನಕ್ಕೆ 10 ಉತ್ತರ ಪತ್ರಿಕೆಗಳನ್ನು ವಿತರಿಸಿ ಉಪ ಮುಖ್ಯ ಪರೀಕ್ಷಕರು ಪರೀಕ್ಷಿಸಿದ ನಂತರ ಚೀಫ್ ಎಕ್ಸಾಮಿನರ್ ವೀಕ್ಷಿಸುವರು. ಸುಮಾರು 7 ದಿನಗಳವರೆಗೆ ಮೌಲ್ಯಮಾಪನ ನಡೆಯಲಿದ್ದು, ಒಂದು ವೇಳೆ ಉತ್ತರ ಪತ್ರಿಕೆಗಳು ಉಳಿದರೆ ಮಾತ್ರ ಒಂದೆರಡು ದಿನ ವಿಸ್ತರಣೆಯಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಾಂಡುರಂಗ `ಮೈಸೂರು ಮಿತ್ರ’ ನಿಗೆ ತಿಳಿಸಿದರು. ಸ್ಥಳದಲ್ಲಿ ಕುಡಿಯುವ ನೀರು, ಆಯಾ ಠಾಣೆಗಳಿಂದ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ನಿಗದಿತ ಅವಧಿಯಲ್ಲಿ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

Translate »