ಮೈಸೂರು,ಫೆ.6(ಎಸ್‍ಪಿಎನ್)-ಮೈಸೂರಿನ ರಾಮಾನುಜ ರಸ್ತೆಯಲ್ಲಿ ಶ್ರೀ ರಾಮಾ ನುಜಾಚಾರ್ಯರ ಪ್ರತಿಮೆ ಸ್ಥಾಪಿಸಬೇಕು ಎಂದು ಮೈಸೂರು ಜಿಲ್ಲಾ ಮತ್ತು ನಗರ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
10ನೇ ಶತಮಾನದಲ್ಲಿ ಸಮಾನತೆ ಸಾರಿದ ಶ್ರೀ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನಿ ಮೋದಿ ಅವರು ಹೈದರಾಬಾದಿನಲ್ಲಿ ಲೋಕಾರ್ಪಣೆಗೊಳಿಸಿದ ಕಾರ್ಯಕ್ರಮವನ್ನು ಮೈಸೂರಿನ ಶ್ರೀ ವೈಷ್ಣವ ಸಭಾ ಭವನದಲ್ಲಿ ಅಳವಡಿಸಿದ್ದ ಬೃಹತ್ ಎಲ್‍ಇಡಿ ಪರದೆ ಮೇಲೆ ಸಾರ್ವಜನಿಕರ ಜೊತೆ ವೀಕ್ಷಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಶನಿವಾರ ಪ್ರಧಾನಿ ಮೋದಿ ಅವರು, 216 ಅಡಿ ಎತ್ತರದ ಪಂಚಲೋಹದ ಶ್ರೀ ರಾಮಾನುಜಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಿರುವುದು ಉತ್ತಮ ಸಂಗತಿಯಾಗಿದೆ. ಇದನ್ನು ಮೈಸೂರು ಜಿಲ್ಲಾ ಮತ್ತು ನಗರ ಬ್ರಾಹ್ಮಣರ ಸಂಘ ಸ್ವಾಗತಿಸುತ್ತದೆ. ಇದು ಭಾರತೀಯರಾದ ನಮಗೆ ಹೆಮ್ಮೆಯ ವಿಚಾರ ಎಂದರು.
ಈ ಪ್ರತಿಮೆಯು ವಿಶ್ವದಲ್ಲೇ ಎರಡನೇ ದೊಡ್ಡ ಪ್ರತಿಮೆಯಾಗಿದೆ. ರಾಮಾನುಜಾ ಚಾರ್ಯರು ತಮ್ಮ ಜೀವಿತಾವಧಿಯಲ್ಲಿ ಹಿಂದುಳಿದ, ಶೋಷಿತ ಸಮುದಾಯಗಳ ಏಳಿಗೆಗೆ ಮತ್ತು ಸಮಾನತೆಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಅವರ ಆದರ್ಶಗಳು ಇಂದಿನ ಯುವಕರಿಗೆ ಪ್ರೇರಣೆಯಾಗಲಿದೆ. ಅಂತಹ ಮಹಾನ್ ಸಂತರ ಪ್ರತಿಮೆ ಯನ್ನು ಮೈಸೂರಿನ ರಾಮಾನುಜ ರಸ್ತೆಯ ಪ್ರಮುಖ ಸ್ಥಳದಲ್ಲಿ ಸ್ಥಾಪಿಸಬೇಕು ಎಂಬುದು ಬ್ರಾಹ್ಮಣ ಸಂಘದ ಹಲವು ವರ್ಷಗಳ ಬೇಡಿಕೆಯಾಗಿದೆ ಎಂದು ತಿಳಿಸಿದರು.
ಈ ವೇಳೆ ವಿಪ್ರ ಮುಖಂಡರಾದ ಕೆ.ಆರ್.ಸತ್ಯನಾರಾಯಣ್, ಸಿ.ವಿ. ಪಾರ್ಥ ಸಾರಥಿ, ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಯತಿರಾಜ್, ಎಚ್.ಎಲ್.ಎನ್ ಆಚಾರ್ಯ, ಪ್ರಶಾಂತ ತಾತಾಚಾರ್, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಜ್ಯೋತಿ, ಡಾ.ಲಕ್ಷ್ಮಿ, ಸೌಭಾಗ್ಯ ಮೂರ್ತಿ, ಯೋಗಾನರಸಿಂಹ, ಟಿ.ಎಸ್.ಅರುಣ್, ರಾಜಗೋಪಾಲ್, ಸುಚೀಂದ್ರ, ಚಕ್ರಪಾಣಿ, ಶ್ರೀಕಾಂತ್ ಕಶ್ಯಪ್, ಸುಜೀಂದ್ರ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.