ಮಾರ್ಕೆಟ್‍ನಲ್ಲಿ ಸುಮಲತಾ ಪ್ರಚಾರ
ಮೈಸೂರು

ಮಾರ್ಕೆಟ್‍ನಲ್ಲಿ ಸುಮಲತಾ ಪ್ರಚಾರ

April 6, 2019

ಮಂಡ್ಯ: ಸುಮಲತಾ ಪರ ಪ್ರಚಾರದಲ್ಲಿ ಹಾರಾಡಿದ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಬಾವುಟ… ಸುಮಲತಾಗೆ ಅಂಬಿಗೆ ಪ್ರಿಯವಾದ ಮಿಠಾಯಿ ನೀಡಿದ ಅಭಿಮಾನಿ… ಚುನಾವಣಾ ಖರ್ಚಿಗಾಗಿ ಹಣ ಸಹಾಯ ಮಾಡಿದ ವೃದ್ದೆ ವ್ಯಾಪಾರಿ… ಮುಸ್ಲಿಂ ಮುಖಂಡರು, ಮತದಾರರೊಂದಿಗೆ ಉರ್ದುವಿನಲ್ಲಿಯೇ ಮತ ಯಾಚನೆ..! ಇವಿಷ್ಟು ಮಂಡ್ಯ ಲೋಕ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮ ಲತಾ ಅಂಬರೀಶ್ ಅವರು ಮಂಡ್ಯ ಸಿಟಿ ಸೇರಿದಂತೆ ವಿವಿಧೆಡೆ ನಡೆಸಿದ ಪ್ರಚಾ ರದ ವೇಳೆ ಕಂಡು ಬಂದ ವಿಶೇಷತೆ ಗಳು. ಕಳೆದೊಂದು ವಾರದಿಂದ ಚಿತ್ರ ನಟರಾದ ದರ್ಶನ್ ಮತ್ತು ಯಶ್ ಜೋಡಿಯ ಪ್ರಚಾರದಿಂದ ರಂಗು ರಂಗಾ ಗಿದ್ದ ಮಂಡ್ಯದಲ್ಲಿ ಇವತ್ತೂ ಸುಮಲತಾ ಅವರ ಪ್ರಚಾರದಲ್ಲಿ ವಿಶೇಷತೆ ಕಂಡು ಬಂದಿತು. ಜೆಡಿಎಸ್ ಭದ್ರಕೋಟೆ ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇರಲು ಕಾರಣವಾಗಿರುವ ಪಕ್ಷೇ ತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಅಬ್ಬರದ ಪ್ರಚಾರ ಶುಕ್ರವಾರವೂ ಮುಂದುವರೆಯಿತು.

ಸುಮಲತಾ ಪರ ಜೆಡಿಎಸ್ ಬಾವುಟ ಹಾರಾಟ; ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಷ್‍ಗೆ ಕಾಂಗ್ರೆಸ್, ಬಿಜೆಪಿ, ರೈತಸಂಘ ಆಯ್ತು. ಈಗ ಜೆಡಿಎಸ್ ಬಾವುಟವೂ ಬೆಂಬಲಕ್ಕೆ ಬಂದದ್ದು ಅಚ್ಚರಿಯುಂಟು ಮಾಡಿತು.

ಇಂದು ಬೆಳಿಗ್ಗೆ ಪ್ರಚಾರಕ್ಕೆ ಆಗಮಿಸಿದ ಸುಮಲತಾ ಅಂಬರೀಶ್ ಅವರನ್ನು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮಂಡ್ಯ ತಾಲೂಕಿನ ಹನಿಯಂಬಾಡಿ ಗ್ರಾಮದಲ್ಲಿ ಬಿಜೆಪಿ, ಕಾಂಗ್ರೆಸ್ ಜತೆಗೆ ಜೆಡಿಎಸ್ ಕಾರ್ಯಕರ್ತರು ಜತೆಗೂಡಿ ಸ್ವಾಗತಿಸಿದ್ದು ಚರ್ಚೆಗೆ ಗ್ರಾಸವಾಯಿತು. ಮೆರವಣಿಗೆಯಲ್ಲಿ ಕಾಂಗ್ರೆಸ್, ಬಿಜೆಪಿ ಜೊತೆಗೆ ಕಾರ್ಯಕರ್ತ ನೋರ್ವ ಜೆಡಿಎಸ್ ಬಾವುಟವನ್ನಿಡಿದು ಸುಮಲತಾ ಪರ ಘೋಷಣೆ ಕೂಗುತ್ತಿದ್ದುದನ್ನು ಗಮನಿಸಿದ ಅಂಬರೀಶ್ ಬೆಂಬಲಿಗರು ಜೆಡಿಎಸ್ ಬಾವುಟವನ್ನು ಕಿತ್ತುಕೊಂಡು ಹಾರಿಸದಂತೆ ಹೇಳಿ, ಆತನನ್ನು ತಮ್ಮ ಜೊತೆಯಲ್ಲಿಯೇ ಬರುವಂತೆ ಕರೆದೊಯ್ದರು.

ಮಾರ್ಕೆಟ್‍ನಲ್ಲೂ ಪ್ರಚಾರ; ಹನಿಯಂಬಾಡಿ ಮಾರ್ಗ ತೆರಳುವುದಕ್ಕೂ ಮುನ್ನಾ ಇಂದು ಬೆಳ್ಳಂಬೆಳಿಗ್ಗೆ ಮಂಡ್ಯದ ಮಾರುಕಟ್ಟೆಯಲ್ಲಿಯೂ ಸುಮಲತಾ ಅಂಬರೀಶ್ ಪ್ರಚಾರ ನಡೆಸಿದರು. ಮತದಾರರು ಸುಮಲತಾರನ್ನು ಪ್ರೀತಿಯಿಂದ ಹೂವಿನ ಹಾರಹಾಕಿ ಸ್ವಾಗತಿಸಿದರು. ಅಲ್ಲಿ ಕೆಲ ವೃದ್ಧೆಯರೂ ಸೇರಿದಂತೆ ಮಹಿಳಾ ವ್ಯಾಪಾ ರಸ್ಥರು ಹಾಗೂ ಅಂಬಿ ಅಭಿಮಾನಿಗಳು ಪ್ರೀತಿಯಿಂದ ಪ್ರಚಾರದ ಖರ್ಚಿಗೆ 100, 500 ರೂ. ನಂತೆ ಹಣ ನೀಡಿದರು. ಅಷ್ಟೇ ಅಲ್ಲದೆ ಸೌತೆಕಾಯಿ, ಕಿತ್ತಳೆ ಹಣ್ಣು, ಮಿಠಾಯಿ ನೀಡಿ ಅಭಿಮಾನ ಮೆರೆದರು. ಇದೇ ವೇಳೆ ಪ್ರತಿಕ್ರಿಯಿಸಿದ ವೃದ್ಧ ಮಹಿಳಾ ವ್ಯಾಪಾರಿ, ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದ ನಾವು ಸಂತೋಷದಿಂದ ಹಣ ಕೊಟ್ಟಿದ್ದೇವೆ. ಸುಮಲತಾರಿಗೆ ಪ್ರಚಾರದ ಖರ್ಚಿಗೆ ಅನುಕೂಲವಾಗಲೆಂದು ಕೈಲಾದಷ್ಟು ಹಣ ಸಹಾಯ ನೀಡಿದ್ದೇವೆ, ಅವರು ಗೆಲ್ಲಲಿ ಎಂದು ಹಣ ಕೊಟ್ಟಿದ್ದೇವೆ. ನಮಗೆ ಏನು ಮಾಡಬೇಕೋ ಅದನ್ನು ಅವರು ಗೆದ್ದ ನಂತರ ಮಾಡಲಿ. ನಮ್ಮಂಥ ಬಡವರನ್ನು ಕಾಪಾಡಲಿ ಎಂದು ಹೇಳಿದರು.

ಅಂಬಿ ಪ್ರಿಯ ಮಿಠಾಯಿ ಕೊಟ್ಟ ಅಭಿಮಾನಿ; ಅಂಬರೀಶ್ ಅವರು ಮಾರುಕಟ್ಟೆಗೆ ಬಂದಾಗ ಚಿಕ್ಕ ಮಂಡ್ಯ ರಸ್ತೆಯಲ್ಲಿ ಇರುವ ಮಿಠಾಯಿ ಅಂಗಡಿಗೆ ಹೋಗಿ ಮಿಠಾಯಿಯನ್ನು ಇಷ್ಟಪಟ್ಟು ತಿನ್ನುತ್ತಿದ್ದರು. ಆದ್ದರಿಂದ ಪ್ರಚಾರದ ವೇಳೆ ಮಿಠಾಯಿ ಅಂಗಡಿ ಮಾಲೀಕ ಚಂದ್ರು, ಅಂಬಿ ಅವರ ಇಷ್ಟದ ಮಿಠಾಯಿಯನ್ನು ಸುಮಲತಾರಿಗೆ ನೀಡಿ, ಖುಷಿಪಟ್ಟರು.

ಅಂಬರೀಶ್ ಅವರು ಮಾರುಕಟ್ಟೆಗೆ ಬಂದಾಗ ತಾವೇ ಖುದ್ದಾಗಿ ಚಂದ್ರು ಅವರ ಮಿಠಾಯಿ ಅಂಗಡಿಗೆ ಹೋಗಿ ಬೆಲ್ಲದ ಮಿಠಾಯಿ ಖರೀದಿಸಿ ತಿನ್ನುತ್ತಿದ್ದರು. ಅಲ್ಲದೆ ಅಂಬರೀಶ್‍ರನ್ನು ಭೇಟಿ ಮಾಡಲು ಬೆಂಗಳೂರಿಗೆ ಹೋಗುವವರು ಕೂಡ ಚಂದ್ರು ಅಂಗಡಿಯಿಂದ ಬೆಲ್ಲದ ಮಿಠಾಯಿ ತೆಗೆದುಕೊಂಡು ಹೋಗಿ ಕೊಡುತ್ತಿದ್ದರು. ಹೀಗಾಗಿ ಸುಮಲತಾ ಅವರು ಮಾರ್ಕೆಟ್‍ಗೆ ಬಂದ ವಿಷಯ ತಿಳಿದ ಚಂದ್ರು, ಅಭಿಮಾನದಿಂದ ಅವರಿಗೆ ಮಿಠಾಯಿ ತಂದುಕೊಟ್ಟರು. ಬಳಿಕ ಅಭಿಮಾನಿ ಪ್ರೀತಿಗೆ ಸೋತ ಸುಮಲತಾ, ಅಂಬರೀಶ್ ನೆನಪಿಗಾಗಿ ಮಾರುಕಟ್ಟೆಗೆ ಬಂದಾಗ ನಿಮ್ಮ ಅಂಗಡಿಗೆ ನಾನೇ ಬಂದು ಮಿಠಾಯಿ ತಿನ್ನುತ್ತೇನೆ ಎಂದು ಖುಷಿಯಿಂದ ಹೇಳಿಕೊಂಡರು.

ತ್ರಿಶೂಲ ನೀಡಿದ ಪುರೋಹಿತ: ಸುಮಲತಾ ಅವರು ಪ್ರಚಾರ ನಡೆಸುವ ವೇಳೆ ಅಲ್ಲಿಗೆ ಬಂದ ಕೆಂಗೇರಿ ದೇವಸ್ಥಾನದ ಪುರೋಹಿತರೊಬ್ಬರು ಸುಮಲತಾ ಅವರಿಗೆ ತ್ರಿಶೂಲವನ್ನು ನೀಡಿ ಹಾರೈಸಿದರು.

ಉರ್ದುವಿನಲ್ಲೇ ಭಾಷಣ: ಇಂದು ಬೆಳಿಗ್ಗೆ ಮಂಡ್ಯದ ಗುತ್ತಲು ಬಡಾವಣೆಯ ಲ್ಲಿರುವ ಮುಸಲ್ಮಾನ್ ಮುಖಂಡರ ಮನೆಗಳಿಗೆ ಭೇಟಿ ನೀಡಿದ ಸುಮಲತಾ ಅಂಬರೀಶ್, ಮುಸಲ್ಮಾನ್ ಸಮುದಾಯದ ಜನರ ಜೊತೆ ಚರ್ಚೆ ಮಾಡಿದರು. ಉರ್ದು ಭಾಷೆಯಲ್ಲಿಯೇ ಮಾತನಾಡಿ, ಮತ ಯಾಚನೆ ಮಾಡಿದರು.

ಕಾಂಗ್ರೆಸ್ ಮುಸ್ಲಿಂ ಸಮುದಾಯದ ನಾಯಕರ ಜೊತೆ ಸಮಾಲೋಚನೆಯ ವೇಳೆ ಸುಮಲತಾಗೆ ರಾಕ್‍ಲೈನ್ ವೆಂಕಟೇಶ್, ದೊಡ್ಡಣ್ಣ, ಬಿ.ವಿವೇಕಾನಂದ, ಅರವಿಂದ್, ಬೇಲೂರು ಸೋಮಶೇಖರ್ ಮತ್ತಿತರರು ಸಾಥ್ ನೀಡಿದರು.

ಸುಮಲತಾ-ಶ್ರೀನಿವಾಸ್ ಮುಖಾಮುಖಿ: ಬಾಬು ಜಗಜೀವನ ರಾಂ ಜಯಂತಿ ವೇಳೆ ಮಂಡ್ಯ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಮತ್ತು ಸುಮಲತಾ ಅಂಬರೀಶ್ ಮುಖಾಮುಖಿಯಾದರು. ಜಿಲ್ಲಾಧಿಕಾರಿ ಕಚೇರಿ ಎದುರಿರುವ ಬಾಬು ಜಗಜೀವನ ರಾಂ ಪ್ರತಿಮೆ ಮಾಲಾರ್ಪಣೆ ಮಾಡಿ ವಾಪಸ್ಸಾಗುವಾಗ ದೂರದಿಂದಲೇ ಸುಮಲತಾ ಮತ್ತು ಎಂ.ಶ್ರೀನಿವಾಸ್ ಪರಸ್ಪರ ಕೈ ಮುಗಿದು ಮುನ್ನಡೆದರು.

ಮಂಡ್ಯದ ವಿನಾಯಕ ಬಡಾವಣೆ, ಕಾರಸವಾಡಿ, ಸಂತೆಕಸಲಗೆರೆ, ಮಂಗಲ, ಹೆಬ್ಬಕವಾಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸುಮಲತಾ ಮತ ಯಾಚಿಸಿದರು. ಮಹಿಳೆ ಎಂಬ ಕಾರಣದಿಂದ ಹಲವರು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನಾನು ಅಧಿಕಾರದ ಆಸೆಯಿಂದ ರಾಜಕೀಯಕ್ಕೆ ಬಂದಿಲ್ಲ. ಅಂಬರೀಷ್ ಅವರ ಮೇಲೆ ನೀವು ತೋರಿದ ಪ್ರೀತಿ, ಜಿಲ್ಲೆಯ ಅಭಿವೃದ್ಧಿಗೆ ಅವರು ಕಂಡಿದ್ದ ಕನಸನ್ನು ನನಸು ಮಾಡುವ ಸಲುವಾಗಿ ಜನರ ಒತ್ತಡದಿಂದ ಅಭ್ಯರ್ಥಿಯಾಗಿದ್ದೇನೆ. ಆದ್ದರಿಂದ ನನಗೂ ಒಮ್ಮೆ ಅವಕಾಶ ಕಲ್ಪಿಸಬೇಕೆಂದು ಸುಮಲತಾ ಮತದಾರರಲ್ಲಿ ಕೋರಿದರು.

ಜೋಡೆತ್ತುಗಳಿಗೆ ವಿಶ್ರಾಂತಿ; ಮಂಡ್ಯ ಲೋಕಸಭಾ ಸಮರದಲ್ಲಿ ಸುಮಲತಾ ಅಂಬರೀಶ್ ಪರ ಭರ್ಜರಿ ಪ್ರಚಾರ ನಡೆಸಿದ ಚಿತ್ರ ನಟರಾದ ದರ್ಶನ್ ಮತ್ತು ಯಶ್ ಅವರಿಗೆ ಮೂರು ದಿನಗಳ ಕಾಲ ವಿಶ್ರಾಂತಿ ನೀಡಲಾಗಿದೆ. ಯುಗಾದಿ ಹಬ್ಬದ ಹಿನ್ನೆಲೆ ದರ್ಶನ್, ಯಶ್ ವಿಶ್ರಾಂತಿ ಮೊರೆ ಹೋಗಿದ್ದಾರೆ. ಏ.8 ರಿಂದ ಮತ್ತೆ ಪ್ರಚಾರಕ್ಕೆ ಬರಲಿದ್ದಾರೆ ಎಂದು ಅಂಬರೀಶ್ ಬೆಂಬಲಿಗ ತಾಪಂ ಮಾಜಿ ಅಧ್ಯಕ್ಷ ತ್ಯಾಗರಾಜು ತಿಳಿಸಿದ್ದಾರೆ.

Translate »