ಖಾಸಗಿ, ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ ಬೋಧಕ-ಬೋಧಕೇತರ ಸಿಬ್ಬಂದಿಗೆ ಶೀಘ್ರ ವೇತನ ಪಾವತಿಸಲು ಕ್ರಮ ವಹಿಸಿ
ಮೈಸೂರು

ಖಾಸಗಿ, ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ ಬೋಧಕ-ಬೋಧಕೇತರ ಸಿಬ್ಬಂದಿಗೆ ಶೀಘ್ರ ವೇತನ ಪಾವತಿಸಲು ಕ್ರಮ ವಹಿಸಿ

November 10, 2020

ಉನ್ನತ ಶಿಕ್ಷಣ ಸಚಿವರಿಗೆ ಎಂಎಲ್‍ಸಿ ಮರಿತಿಬ್ಬೇಗೌಡ ಆಗ್ರಹ
ಮೈಸೂರು,ನ.9(ಪಿಎಂ)- ರಾಜ್ಯದ ಖಾಸಗಿ, ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಕಳೆದ ಮೂರು ತಿಂಗಳಿಂದ ವೇತನ ಬಿಡುಗಡೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಶೀಘ್ರವೇ ವೇತನ ಪಾವತಿಸಲು ಸೂಕ್ತ ಕ್ರಮ ವಹಿಸಬೇಕೆಂದು ಉಪಮುಖ್ಯಮಂತ್ರಿಗಳೂ ಆದ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಆಗ್ರಹಿಸಿದ್ದಾರೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಪರಿಷತ್ ಸದಸ್ಯ ಮರಿತಿಬ್ಬೇಗೌಡ, 3 ತಿಂಗಳಿಂದ ವೇತನವಿಲ್ಲದೆ ಖಾಸಗಿ ಮತ್ತು ಅನುದಾನಿತ ಇಂಜಿನಿಯರಿಂಗ್ ಕಾಲೇಜು ಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಜೀವನ ತೊಂದರೆಗೆ ಸಿಲುಕಿದೆ. ವೇತನ ಬಿಡುಗಡೆಗೊಳಿಸುವಲ್ಲಿ ಇಲಾಖೆಯ ಉನ್ನತಾಧಿಕಾರಿಗಳ ನಿರ್ಲಕ್ಷ್ಯ ಖಂಡನಾರ್ಹ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ 10 ವರ್ಷಗಳಿಂದ ಇದೇ ರೀತಿ ಸಮಸ್ಯೆ ಗಮನಿಸುತ್ತಿದ್ದೇನೆ. ಸದರಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಪ್ರತಿ ತಿಂಗಳು ನಿಗದಿತ ಸಮಯದಲ್ಲಿ ವೇತನ ಬಿಡುಗಡೆಗೊಳಿಸಲು ಈವರೆವಿಗೂ ಸಾಧ್ಯವೇ ಆಗಿಲ್ಲ. ಸರ್ಕಾರದಲ್ಲಿ ಹಣದ ಕೊರತೆ ಇಲ್ಲವಾದರೂ ಸಕಾಲದಲ್ಲಿ ಹಣ ಬಿಡುಗಡೆಗೆ ಕ್ರಮ ವಹಿಸದಿರುವ ಅಧಿಕಾರಿಗಳ ಬೇಜವಾಬ್ದಾರಿತನದಿಂದ ನನಗೆ ಬೇಸರ ಉಂಟಾಗಿದೆ. ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲೂ ಕಳೆದ 3 ತಿಂಗಳಿಂದ ಇವರಿಗೆ ವೇತನ ನೀಡದೇ ಇರುವುದು ದುರದೃಷ್ಟಕರ ಸಂಗತಿ. ಕೂಡಲೇ ಸದರಿಯ ವರಿಗೆ ವೇತನ ಪಾವತಿಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

Translate »