ಮೈಸೂರು, ನ.4(ಪಿಎಂ)- ಏಳು ವರ್ಷಗಳ ಬಳಿಕ ತಲಕಾಡು ಪಂಚಲಿಂಗ ದರ್ಶನ ಮಹೋತ್ಸವ ಪ್ರಸಕ್ತ ಸಾಲಿನಲ್ಲಿ ಡಿ.14 ರಿಂದ ಆರಂಭವಾಗಲಿದ್ದು, ಕೊರೊನಾ ಹಿನ್ನೆಲೆಯಲ್ಲಿ ಸರಳ ದಸರಾ ಮಹೋತ್ಸವ ಮಾದರಿ ಈ ಬಾರಿಯ ಪಂಚಲಿಂಗ ದರ್ಶನ ವನ್ನು ಆಚರಿಸಿ, ಕಾರ್ಯಕ್ರಮಗಳನ್ನು ವಚ್ರ್ಯುಯಲ್ ಮೂಲಕ ಪ್ರಸಾರ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳ ಮಾಹಿತಿ ಹಾಗೂ ಅಭಿ ಪ್ರಾಯ ಆಧಾರದಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಸರಳ ಪಂಚಲಿಂಗ ದರ್ಶನ ಮಹೋತ್ಸವ ಆಚರಣೆಯ ನಿರ್ಣಯ ಪ್ರಕಟಿಸಿದರು. ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿ ಅಂತಿಮ ವಾಗಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಪ್ರತಿ ವರ್ಷ ಪಂಚಲಿಂಗ ದರ್ಶನ ಮಹೋತ್ಸವ ಆಚರಣೆ ಮಾಡು ವುದಿದ್ದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಧಾರ್ಮಿಕ ವಿಧಾನಗಳಿಗೆ ಸೀಮಿತಗೊಳಿಸಿ ಉಳಿದಂತೆ ಎಲ್ಲಾ ಕಾರ್ಯ ಕ್ರಮಗಳನ್ನು ಕೈಬಿಡಬಹುದಿತ್ತು. ಆದರೆ 13 ಅಥವಾ 7 ವರ್ಷ ಕ್ಕೊಮ್ಮೆ ನಡೆಯುವ ಉತ್ಸವವಾಗಿರುವ ಹಿನ್ನೆಲೆಯಲ್ಲಿ ಆಚರಣೆ ಮಾಡುವುದು ಅನಿವಾರ್ಯವಾಗಿದೆ ಎಂದರು. ನೆನ್ನೆಯಷ್ಟೇ ಮುಖ್ಯಮಂತ್ರಿಗಳ ಜೊತೆಗೆ ಪಂಚಲಿಂಗ ದರ್ಶನ ಮಹೋತ್ಸವ ಆಚರಣೆ ಸಂಬಂಧ
ಚರ್ಚೆ ಮಾಡಿದ್ದೇನೆ. ಈ ವೇಳೆ ಅವರು ದಸರಾ ಮಾದರಿ ಸರಳ ಮಹೋತ್ಸವ ಆಚರಿ ಸುವಂತೆ ಸೂಚನೆ ನೀಡಿದ್ದಾರೆ. ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದಿನ ಸಭೆಗೆ ಬರಬೇಕಿತ್ತು. ಆದರೆ ಮುಖ್ಯಮಂತ್ರಿಗಳು ಮಂಗಳೂರಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಅವರಿಂದು ಬರಲಾಗಲಿಲ್ಲ. ಮುಂದಿನ ವಾರ ಅವರು ಮೈಸೂರಿಗೆ ಭೇಟಿ ನೀಡುವ ಭರವಸೆ ನೀಡಿದ್ದಾರೆ. ಈ ವೇಳೆ ತಲಕಾಡಿಗೆ ಅವರು ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರ ಇಲಾಖೆಯಿಂದ ಆಗಬೇಕಿರುವ ಕಾರ್ಯಗಳ ಬಗ್ಗೆ ಅವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಕೋವಿಡ್ ತಾಂತ್ರಿಕ ಸಲಹಾ ಸಮಿತಿ: ಕೋವಿಡ್ ಹಿನ್ನೆಲೆಯಲ್ಲಿ ಮಹೋತ್ಸವದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತಂತೆ ಪರಿಶೀಲಿಸಿ ಮಾರ್ಗಸೂಚಿ ನೀಡುವಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿಗೆ ಮನವಿ ಸಲ್ಲಿಸಲಾಗುವುದು. ಯಾವ್ಯಾವ ಕಾರ್ಯಕ್ರಮಗಳಲ್ಲಿ ಎಷ್ಟು ಜನರು ಸೇರಬೇಕೆಂಬುದೂ ಸೇರಿದಂತೆ ಹಲವು ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಮಿತಿಯು ಮಾರ್ಗಸೂಚಿ ನೀಡಲಿದೆ. ಅದರಂತೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ವಚ್ರ್ಯುಯಲ್ ಪ್ರಸಾರ: 7 ಲಕ್ಷಕ್ಕೂ ಅಧಿಕ ಸಂಖ್ಯೆಯ ಜನತೆ ವಚ್ರ್ಯುಯಲ್ ಮೂಲಕ ದಸರಾ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಿದ್ದಾರೆ. ಇದೇ ಮಾದರಿಯಲ್ಲಿ ಪಂಚಲಿಂಗ ದರ್ಶನದ ಕಾರ್ಯಕ್ರಮಗಳನ್ನು ವಚ್ರ್ಯುಯಲ್ ಮೂಲಕ ಪ್ರಸಾರ ಮಾಡಲು ಕ್ರಮ ವಹಿಸಲಾಗುವುದು. ನಾಳೆ (ನ.5) ಬೆಳಿಗ್ಗೆ ಟಿ.ನರಸೀಪುರದಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಮಧ್ಯಾಹ್ನ 3ರ ಬಳಿಕ ತಲಕಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇನೆ ಎಂದರು.
ತಲಕಾಡು ಅಭಿವೃದ್ಧಿ: ಪಂಚಲಿಂಗದರ್ಶನ ಮಹೋತ್ಸವಕ್ಕೆ ಬೇಕಾದ ತಯಾರಿಗಳು ನಡೆಯಲಿ. ರಸ್ತೆ, ಚರಂಡಿ ಕಾಮಗಾರಿಯಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಳ್ಳುವ ಮೂಲಕ ದೀರ್ಘಾವಧಿ ಬಾಳಿಕೆಗೆ ಆದ್ಯತೆ ನೀಡುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಸರಳ ಉತ್ಸವಕ್ಕೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಉತ್ಸವದ ನಂತರ ತಲಕಾಡು ಅಭಿವೃದ್ಧಿಗೆ ಸರ್ಕಾರದ ಅನುದಾನ ಕಲ್ಪಿಸಲು ಪ್ರಯತ್ನ ಮಾಡಲಾಗುವುದು. ತಲಕಾಡು ಅಭಿವೃದ್ಧಿ ಸಂಬಂಧ ಸ್ಥಳೀಯ ಜನಪ್ರತಿನಿಧಿಗಳು ಮನವಿ ಕೊಟ್ಟಿದ್ದಾರೆ. ಇವುಗಳನ್ನು ಕ್ರೂಢೀಕರಿಸಿ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವನ್ನು ಜಿಲ್ಲಾಡಳಿತದ ಮೂಲಕ ಸರ್ಕಾರವನ್ನು ಕೋರಲಾಗುವುದು ಎಂದು ಹೇಳಿದರು.
ಡಿ.14ಕ್ಕೆ ಸಿಎಂ ಬರಲಿದ್ದಾರೆ: ಪಂಚಲಿಂಗ ಮಹೋತ್ಸವದ ಮಹಾಭಿಷೇಕ ಡಿ.14ರಂದು ನಡೆಯಲಿದೆ. ಇದಕ್ಕೆ ಮುಖ್ಯಮಂತ್ರಿಗಳು ಬರಲಿದ್ದಾರೆ. ಈ ವೇಳೆ ತಲಕಾಡು ಅಭಿವೃದ್ಧಿ ಸಂಬಂಧ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು. ಆ ಮೂಲಕ ತಲಕಾಡು ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚು ಅನುದಾನ ಪಡೆದುಕೊಳ್ಳಲು ಪ್ರಯತ್ನ ಮಾಡಲಾಗುವುದು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸದಲ್ಲಿ ಹಣಕಾಸು ಪರಿಸ್ಥಿತಿಯೂ ಉತ್ತಮವಾಗಿಲ್ಲ. ಅದಾಗ್ಯೂ ಸಾಧ್ಯವಾದಷ್ಟು ಅನುದಾನ ಪಡೆದು ತಲಕಾಡು ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಲಾಗುವುದು ಎಂದು ಸಚಿವರು ತಿಳಿಸಿದರು.