ಅ.17, ತೀರ್ಥೋದ್ಭವ: ತಲಕಾವೇರಿಯಲ್ಲಿ ಸಕಲ ಸಿದ್ಧತೆ
ಕೊಡಗು

ಅ.17, ತೀರ್ಥೋದ್ಭವ: ತಲಕಾವೇರಿಯಲ್ಲಿ ಸಕಲ ಸಿದ್ಧತೆ

October 15, 2018

ಮಡಿಕೇರಿ: ಪವಿತ್ರ ಕಾವೇರಿ ತೀರ್ಥೋದ್ಬವಕ್ಕೆ ದಿನಗಣನೆ ಆರಂಭವಾಗಿದ್ದು, ತಲಕಾವೇರಿ ಮತ್ತು ಭಾಗಮಂಡಲ ದೇವಾಲಯಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ.

ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಹಿಟಾಚಿ ಯಂತ್ರ ಬಳಸಿ ಹೂಳು ತೆಗೆಯಲಾಗುತ್ತಿದೆ. ತ್ರಿವೇಣಿ ಸಂಗಮದಲ್ಲಿ ಮಣ್ಣು ಮಿಶ್ರಿತ ಮರಳು ತುಂಬಿಕೊಂಡಿದ್ದು ನೀರಿನ ಪ್ರಮಾಣ ಕ್ಷೀಣಿಸಲು ಕಾರಣವಾಗಿತ್ತು. ತಲಕಾವೇರಿ ತೀರ್ಥೋದ್ಭವದ ಸಂದರ್ಭ ಸಹಸ್ರ ಸಂಖ್ಯೆಯ ಯಾತ್ರಾರ್ಥಿಗಳು 1 ತಿಂಗಳ ಕಾಲ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಪುಣ್ಯ ಸ್ಥಾನಕ್ಕಾಗಿ ಹೂಳೆತ್ತುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ತಲಕಾವೇರಿ ಭಾಗಮಂಡಲ ದೇವಾಲಯ ವ್ಯವಸ್ಥಾಪನ ಸಮಿತಿ ಹೂಳೆತ್ತುವ ಕಾಮಗಾರಿಯ ಮೇಲ್ವಿಚಾರಣೆ ನಡೆಸುತ್ತಿದ್ದು ಪಿಂಡ ಪ್ರಧಾನ ಮತ್ತು ಕೇಶ ಮುಂಡನ ಸ್ಥಳ ಸೇರಿದಂತೆ ತ್ರಿವೇಣಿ ಸಂಗಮ ವ್ಯಾಪ್ತಿಯಲ್ಲೂ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ.

ತಲಕಾವೇರಿ ಕ್ಷೇತ್ರಕ್ಕೆ ತೆರಳುವ ಹಾದಿಯ ಕೈಲಾಸ ಮಠದ ಮುಂಭಾಗ ಬೃಹತ್ ಗೇಟ್ ಅಳವಡಿಸುವ ಕಾರ್ಯವೂ ನಡೆಯುತ್ತಿದೆ. ರಾತ್ರಿ ವೇಳೆ ಬೀಡಾಡಿ ಜಾನುವಾರುಗಳು ತಲಕಾವೇರಿ ಕ್ಷೇತ್ರಕ್ಕೆ ನುಗ್ಗದಂತೆ ತಡೆಯುವುದು ಮತ್ತು ದೇವಾಲಯದ ಪ್ರವೇಶ ಅವಧಿ ಮುಗಿದ ಬಳಿಕ ಯಾತ್ರಾರ್ಥಿಗಳು ಕೂಡ ಅತ್ತ ಕಡೆ ತೆರಳದಂತೆ ತಡೆಯಲು ಗೇಟನ್ನು ಅಳವಡಿಸಲಾಗುತ್ತಿದೆ ಎಂದು ದೇವಾಲಯ ಆಡಳಿತ ಮಂಡಳಿ ಮೂಲಗಳು ತಿಳಿಸಿದೆ.

ತಲ ಕಾವೇರಿ ಪವಿತ್ರ ತೀರ್ಥೋದ್ಬವನ್ನು ಕಣ್ತುಂಬಿಕೊಳ್ಳಲು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಲಿದ್ದು ಗಣ್ಯರಿಗೆ ತೀರ್ಥೋದ್ಭವ ವೀಕ್ಷಿಸಲು ವಿಶೇಷ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಅದರೊಂದಿಗೆ ಭಕ್ತರ ನೂಕು ನುಗ್ಗಲು ತಡೆಯಲು ಬ್ಯಾರಿಕೇಡ್ ಮತ್ತು ಬಿದಿರಿನ ತಾತ್ಕಾಲಿಕ ತಡೆಗೋಡೆಯನ್ನು ಕೂಡ ನಿರ್ಮಿಸಲಾಗುತ್ತಿದೆ.

Translate »