ಬೆಂಗಳೂರು, ಆ.27-ಮಾದಕ ವಸ್ತುಗಳನ್ನು ವಿದೇಶದಿಂದ ತರಿಸಿ ಸ್ಯಾಂಡಲ್‍ವುಡ್ ನಟ-ನಟಿಯರು, ಶ್ರೀಮಂತ ಕುಟುಂ ಬದ ಯುವಕ-ಯುವತಿಯರು ಹಾಗೂ ಕಾಲೇಜು ವಿದ್ಯಾರ್ಥಿ ಗಳಿಗೆ ಸರಬರಾಜು ಮಾಡುತ್ತಿದ್ದ ಬೃಹತ್ ಜಾಲವೊಂದನ್ನು ಬೆಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದಾರೆ.
ಮುಂಬೈನಲ್ಲಿ ನಡೆಯುತ್ತಿರುವ ಡ್ರಗ್ ಮಾಫಿಯಾ, ಸಿಲಿಕಾನ್ ಸಿಟಿ ಬೆಂಗಳೂರಿಗೂ ಕಾಲಿಟ್ಟಿರುವುದು ಆತಂಕಕಾರಿಯಾಗಿದ್ದು, ದಂಧೆಕೋರರು ಡೆನ್ಮಾರ್ಕ್, ಬೆಲ್ಜಿಯಂ, ಜರ್ಮನಿ ಮುಂತಾದ ದೇಶಗಳಿಂದ ಡಾರ್ಕ್ ವೆಬ್ ಮೂಲಕ ಬುಕ್ ಮಾಡಿ ಕೊರಿ ಯರ್‍ನಲ್ಲಿ ಬೆಂಗಳೂರಿಗೆ ಮಾದಕ ವಸ್ತುಗಳನ್ನು ತರಿಸುತ್ತಿದ್ದರು ಎಂಬ ಆಘಾತಕಾರಿ ವಿಷಯ ಹೊರ ಬಿದ್ದಿದೆ.
ಬೆಂಗಳೂರಿನಲ್ಲಿ `ಲಾಂಗ್ ಡ್ರೈವ್ ರೇವ್’ ಎಂಬ ಹೆಸರಿನಲ್ಲಿ ರೇವ್ ಪಾರ್ಟಿಗಳು ನಡೆಯುತ್ತಿದ್ದು, ಈ ಪಾರ್ಟಿಗಳಲ್ಲಿ `ಸೆಲೆಬ್ರಿಟಿ ಡ್ರಗ್’ ಎಂದೇ ಕರೆಯಲ್ಪಡುವ ಎಲ್‍ಎಸ್‍ಡಿ (ಲೈಸರ್ಜಿಕ್ ಆಸಿಡ್ ಡೈಥೈಲಾಮೈಡ್) ಮಾತ್ರೆಗಳು ಸರಬರಾಜಾಗುತ್ತಿದೆ ಎಂಬ ಖಚಿತ ಮಾಹಿತಿ ಪಡೆದಿದ್ದ ಬೆಂಗಳೂರು ಸಿಸಿಬಿಯ ನಾರ್ಕೋಟಿಕ್ಸ್ ಬ್ಯುರೋ ಪೊಲೀಸರು ತಮ್ಮ ಮಾಹಿತಿ ಜಾಲವನ್ನು ಬೀಸಿದ್ದರು. ತಮಗೆ ದೊರೆತ ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ ಕಲ್ಯಾಣನಗರದಲ್ಲಿರುವ ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್‍ಮೆಂಟ್ ಮೇಲೆ ಆ.21ರಂದು ದಾಳಿ ನಡೆಸಿದ ಪೊಲೀಸರಿಗೆ ಕಿರುತೆರೆ ನಟಿ ಅನಿಕಾ ಸಿಕ್ಕಿಬಿದ್ದಿದ್ದಾಳೆ. ಶೋಧನಾ ಕಾರ್ಯ ಕೈಗೊಂಡಾಗ ಮಾದಕ ವಸ್ತುಗಳಾದ 145 ಎಂಡಿಎಂಎ (ಮಿಥೈಲ್ ಎನಿಡಿಯಾಕ್ಸಿ ಮೆಥಾಂಫೆಥಮೈನ್) ಮಾತ್ರೆಗಳು ಹಾಗೂ 2.20 ಲಕ್ಷ ನಗದು ಸಿಕ್ಕಿದೆ. ಆಕೆ ನೀಡಿದ ಮಾಹಿತಿ ಮೇರೆಗೆ ಬೆಂಗಳೂರಿನ ಲಿಕ್ಕರ್ ಹೌಸ್ ಮೇಲೆ ದಾಳಿ ನಡೆಸಿದಾಗ 96 ಎಂಡಿಎಂಎ ಮಾತ್ರೆಗಳು ಹಾಗೂ 180 ಎಲ್‍ಎಸ್‍ಡಿ ಮಾತ್ರೆಗಳು ಸಿಕ್ಕಿಬಿದ್ದಿವೆ. ಕಿರುತೆರೆ ನಟಿ ಅನಿಕಾ ಈ ದಂಧೆಯ ಕಿಂಗ್‍ಪಿನ್ ಆಗಿದ್ದು, ಈಕೆಗೆ ರಾಜೇಶ್ ಮತ್ತು ಅನೂಪ್ ಎಂಬುವರು ಸಹಕರಿಸುತ್ತಿದ್ದರು ಎಂಬುದು ತಿಳಿದು ಬಂದಿದ್ದು, ಮೂವರನ್ನೂ ಬಂಧಿಸಿದ ಪೊಲೀಸರು, ಅವರ ಮೊಬೈಲ್‍ಗಳನ್ನು ಪರಿಶೀಲಿಸಿದಾಗ ಇವರು ತಿಂಗಳಿಗೆ ಸುಮಾರು ಎರಡು ಸಾವಿರ ಗ್ರಾಹಕರನ್ನು ಸಂಪರ್ಕಿಸಿ ಡ್ರಗ್ ಸರಬರಾಜು ಮಾಡು ತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ.
ಕಿಕ್ ಮಾತ್ರೆಗಳು: ಎಲ್‍ಎಸ್‍ಡಿ ಮಾತ್ರೆಗಳು ಸೇವಿಸಿದಾಗ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ. ನಿಧಾನವಾಗಿ ಅರ್ಧ ಗಂಟೆ ಯಲ್ಲಿ ಕಿಕ್ ಕೊಡಲಾರಂಭಿಸಿ ಉನ್ಮಾದಕ್ಕೆ ಕೊಂಡೊಯ್ಯುತ್ತದೆ. ಈ ಮಾತ್ರೆಗಳನ್ನು ನಾಲಿಗೆಯ ಕೆಳಗಿಟ್ಟುಕೊಳ್ಳಲಾಗುತ್ತದೆ. ಹಲವಾರು ದೇಶಗಳಲ್ಲಿ ಎಲ್‍ಎಸ್‍ಡಿ ಮಾತ್ರೆಗಳನ್ನು ನಿಷೇಧಿಸಲಾಗಿದೆ. ಈ ಮಾತ್ರೆಗಳನ್ನೇ ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೂ ಪೂರೈಕೆ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಎಂಡಿಎಂಎ ಮಾತ್ರೆಗಳು ಎಲ್‍ಎಸ್‍ಡಿಗಿಂತ ಹೆಚ್ಚಿನ ಮಾದಕತೆ ಹೊಂದಿದ್ದು, ಇದನ್ನು ಹಲವಾರು ಶ್ರೀಮಂತ ಯುವಕ-ಯುವತಿಯರು ಮತ್ತು ವಿದೇಶಿ ವಿದ್ಯಾರ್ಥಿಗಳಿಗೆ ಪೂರೈಸಲಾಗುತ್ತಿತ್ತು. ವಾರಾಂತ್ಯದಲ್ಲಿ ನಡೆಯುವ ಪಾರ್ಟಿಗಳಲ್ಲಿ ಈ ಮಾತ್ರೆಗಳನ್ನು ಬಳಸಲಾಗುತ್ತಿತ್ತು ಎಂದು ಹೇಳಲಾಗಿದೆ. ಎಂಡಿಎಂಎ ಒಂದು ಮಾತ್ರೆಯನ್ನು 1500 ರೂ.ಗಳಿಂದ 2500 ರೂ.ವರೆಗೆ ಮಾರಾಟ ಮಾಡುತ್ತಿದ್ದ ಈ ದಂಧೆಕೋರರು ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳನ್ನೇ ಹೆಚ್ಚು ಟಾರ್ಗೆಟ್ ಮಾಡುತ್ತಿದ್ದರು. ಮೊಬೈಲ್ ಮತ್ತು ಇಂಟರ್‍ನೆಟ್ ಮೂಲಕವೇ ತಮ್ಮ ಗ್ರಾಹಕರನ್ನು ಸಂಪರ್ಕಿಸುತ್ತಿದ್ದ ಈ ದಂಧೆಕೋರರು ವ್ಯವಸ್ಥಿತವಾಗಿ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದರು. ಮಾತ್ರವಲ್ಲದೇ ಪಾರ್ಟಿಗಳನ್ನು ಏರ್ಪಾಡು ಮಾಡುವ ಕೆಲವು ಖಾಸಗಿ ಸಂಸ್ಥೆಗಳ ಜೊತೆಯೂ ಇವರು ನಂಟು ಹೊಂದಿದ್ದು, ಅವರ ಮೂಲಕ ಡ್ರಗ್ಸ್ ಅನ್ನು ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಲಾಕ್‍ಡೌನ್ ವೇಳೆಯಲ್ಲಿ ಮದ್ಯ ಮಾರಾಟ ನಿಷೇಧಿಸಲ್ಪಟ್ಟ ಕಾರಣ ಈ ಮಾದಕ ವಸ್ತುಗಳು ಬಹಳಷ್ಟು ಬೇಡಿಕೆ ಬಂದಿತ್ತು. ಮದ್ಯ ವ್ಯಸನಿಗಳಾಗಿದ್ದ ಕೆಲ ನಟ-ನಟಿಯರು ಹಾಗೂ ಪ್ರತಿಷ್ಠಿತ ಕುಟುಂಬದ ಯುವಕ-ಯುವತಿಯರು ಹೊಸದಾಗಿ ಇವರಿಗೆ ಗ್ರಾಹಕರಾದರು ಎಂದು ತಿಳಿದು ಬಂದಿದೆ. ಲಾಕ್‍ಡೌನ್ ವೇಳೆಯಲ್ಲೇ ಈ ದಂಧೆಕೋರರು ಸುಮಾರು 3 ಕೋಟಿ ರೂ.ಗಳಿಗೂ ಹೆಚ್ಚು ವ್ಯವಹಾರ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಡೆನ್ಮಾರ್ಕ್, ಬೆಲ್ಜಿಯಂ, ಜರ್ಮನಿ ಮುಂತಾದ ದೇಶಗಳಿಂದ ಡಾರ್ಕ್ ವೆಬ್ ಮೂಲಕ ಅನಿಕಾ ಡ್ರಗ್ಸ್ ಅನ್ನು ಬುಕ್ ಮಾಡಿದಾಗ ಕೊರಿಯರ್ ಮೂಲಕ ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿತ್ತು. ಹಾಗೆ ಬರುವ ವಸ್ತುಗಳನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ. ಈಕೆಗೆ ನಿರಂತರವಾಗಿ ವಿದೇಶಗಳಿಂದ ಮಾದಕ ವಸ್ತುಗಳು ಬರುತ್ತಿದ್ದರೂ ಕೂಡ ಅದು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿ ಬೀಳದೇ ಇರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕೆಲವೊಮ್ಮೆ ಅಂಚೆ ಮೂಲಕವೂ ಡ್ರಗ್ಸ್‍ಗಳು ವಿಲೇವಾರಿ ಆಗಿದೆ. ವಿದೇಶದಿಂದ ಬರುವ ಅಂಚೆಗಳನ್ನು ಬಟವಾಡೆ ಮಾಡಲು ಅಂಚೆ ಇಲಾಖೆ ಸಿಬ್ಬಂದಿ ಯಾರಿಗೆ ಪಾರ್ಸಲ್ ತಲುಪಬೇಕಾಗಿದೆಯೋ ಅವರಿಗೆ ಫೋನ್ ಮಾಡುತ್ತಾರೆ, ಅವರು ಪಾರ್ಸಲ್ ಸಂಗ್ರಹಿಸಲು ಬಂದಾಗ ಪಾರ್ಸಲ್ ಬಂದ ವಸ್ತುಗಳನ್ನು ಸ್ಕ್ಯಾನ್ ಮಾಡುತ್ತಾರೆ. ಹೀಗಿದ್ದರೂ ಅಂಚೆ ಮೂಲಕ ಬಂದ ಮಾದಕ ವಸ್ತುಗಳು ಸಿಕ್ಕಿ ಬೀಳದೇ ಇರುವುದೂ ಕೂಡ ಅನುಮಾನಕ್ಕೆ ಎಡೆ ಮಾಡಿದೆ. ಈ ವ್ಯವಹಾರದ ಹಿಂದೆ ಬೃಹತ್ ಜಾಲವೇ ಇರಬಹುದು ಎಂದು ಹೇಳಲಾಗಿದ್ದು, ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ದಂಧೆಕೋರರ ಮೊಬೈಲ್‍ಗಳಲ್ಲಿ ಇರುವ ನಟ-ನಟಿಯರನ್ನು ಪೊಲೀಸರು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.