ಮೈಸೂರಲ್ಲೂ ನೀರಸ ಪ್ರತಿಕ್ರಿಯೆ
ಮೈಸೂರು

ಮೈಸೂರಲ್ಲೂ ನೀರಸ ಪ್ರತಿಕ್ರಿಯೆ

December 6, 2020

ಮೈಸೂರು, ಡಿ.5(ಆರ್‍ಕೆ)- ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಲು ನಿರ್ಧರಿ ಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕನ್ನಡಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ‘ಕರ್ನಾಟಕ ಬಂದ್’ಗೆ ಮೈಸೂರಲ್ಲಿ ಯಾವುದೇ ಪ್ರತಿಕ್ರಿಯೆ ಕಂಡುಬರಲಿಲ್ಲ.ಕೆಲ ಕನ್ನಡಪರ ಸಂಘ ಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದನ್ನು ಹೊರತುಪಡಿಸಿ ಉಳಿದಂತೆ ಮೈಸೂರು ನಗರ ಮತ್ತು ಜಿಲ್ಲೆಯಾ ದ್ಯಂತ ಜನಜೀವನ ಸಹಜ ಸ್ಥಿತಿಯಲ್ಲಿತ್ತು

ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿ, ಸಮುದಾಯದ ಸರ್ವಾಂಗೀಣ ಅಭಿ ವೃದ್ಧಿಗಾಗಿ 50 ಕೋಟಿ ರೂ. ಅನುದಾನ ನೀಡಿರುವ ಸರ್ಕಾರವು ತಕ್ಷಣ ನಿರ್ಧಾರ ವನ್ನು ಹಿಂಪಡೆಯಬೇಕು ಎಂದು ಒತ್ತಾ ಯಿಸಿದ ಕನ್ನಡಪರ ಸಂಘಟನೆಗಳ ಪದಾ ಧಿಕಾರಿಗಳು, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಘೋಷಣೆಗಳನ್ನು ಕೂಗಿದರು. ಮೈಸೂರಿನ ಹಲವು ಸಂಘಟನೆಗಳ ಪದಾಧಿಕಾರಿಗಳು,
ಉದ್ದಿಮೆ ಮಾಲೀಕರು, ವರ್ತಕರು, ವಿವಿಧ ವೃತ್ತಿಗಳಲ್ಲಿ ನಿರತರಾಗಿರುವವರು ಕರ್ನಾಟಕ ಬಂದ್‍ಗೆ ನೈತಿಕ ಬೆಂಬಲ ನೀಡಿದರೇ ಹೊರತು, ಉದ್ದಿಮೆಗಳನ್ನು ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಲಿಲ್ಲ. ಕೆಎಸ್‍ಆರ್‍ಟಿಸಿ ಗ್ರಾಮಾಂತರ ಮತ್ತು ನಗರ ಘಟಕಗಳ ಬಸ್ಸುಗಳು, ಖಾಸಗಿ ಬಸ್ಸುಗಳು, ಟ್ಯಾಕ್ಸಿ, ಆಟೋರಿಕ್ಷಾ, ಸರಕು ಸಾಗಣೆ ವಾಹನಗಳು, ರೈಲುಗಳು ಎಂದಿನಂತೆ ಕಾರ್ಯನಿರ್ವಹಿಸಿದವಲ್ಲದೆ, ಪ್ರವಾಸಿ ವಾಹನ, ಗೈಡ್‍ಗಳು, ವಿಮಾನ ಹಾರಾಟವೂ ಸಹಜವಾಗಿದ್ದರಿಂದ ಸಾರ್ವಜನಿಕ ಸಾರಿಗೆ ಮೇಲೆ ಬಂದ್ ಯಾವುದೇ ಪರಿಣಾಮ ಬೀರಲಿಲ್ಲ. ಡಿಆರ್‍ಸಿ ಸಿನಿಮಾ, ಕಲ್ಯಾಣಮಂಟಪ, ಮಾಲ್‍ಗಳು, ವಾಣಿಜ್ಯ ಸಂಕೀರ್ಣ, ದೇವರಾಜ, ವಾಣಿವಿಲಾಸ, ಕೆ.ಆರ್, ಮಂಡಿ ಮಾರ್ಕೆಟ್, ಹಳೇ ಆರ್‍ಎಂಸಿ, ಬಂಡೀಪಾಳ್ಯದ ಎಪಿಎಂಸಿ ಮಾರುಕಟ್ಟೆಗಳು ಎಂದಿನಂತೆ ತೆರೆದಿದ್ದು, ವ್ಯಾಪಾರ-ವಹಿವಾಟು ಸಹಜವಾಗಿ ನಡೆದವು. ಮಕ್ಕಾಜಿ ಚೌಕ, ಓಲ್ಡ್ ಬ್ಯಾಂಕ್ ರೋಡ್, ಗಾಂಧಿ ಸ್ಕ್ವೇರ್, ಸಯ್ಯಾಜಿರಾವ್ ರಸ್ತೆ, ಧನ್ವಂತರಿ ರಸ್ತೆ, ಚಾಮರಾಜ ಡಬಲ್ ರೋಡ್, ಅಶೋಕ ರಸ್ತೆ, ಡಿ.ದೇವರಾಜ ಅರಸು ರಸ್ತೆ, ಶಿವರಾಂಪೇಟೆ ರಸ್ತೆ, ಹಳೇ ಸಂತೇಪೇಟೆಗಳಂ ತಹ ಪ್ರಮುಖ ವಾಣಿಜ್ಯ ಪ್ರದೇಶಗಳ ಮಾಲ್, ಕಮರ್ಷಿಯಲ್ ಕಾಂಪ್ಲೆಕ್ಸ್‍ಗಳ ಅಂಗಡಿ ಮಳಿಗೆಗಳು ತೆರೆದಿದ್ದವು. ಪೆಟ್ರೋಲ್ ಬಂಕ್‍ಗಳು, ಕೈಗಾರಿಕೆಗಳು, ಗಾರ್ಮೆಂಟ್ ಫ್ಯಾಕ್ಟರಿಗಳು, ಪದವಿ ಕಾಲೇಜುಗಳು, ಸರ್ಕಾರಿ ಹಾಗೂ ಖಾಸಗಿ ಕಚೇರಿ, ಸಂಸ್ಥೆಗಳು, ಅಂಗಡಿ ಮುಂಗಟ್ಟು, ದೇವಸ್ಥಾನಗಳು, ಹೋಟೆಲ್, ರೆಸ್ಟೋರೆಂಟ್, ಬೇಕರಿಗಳೂ ಸೇರಿದಂತೆ ಎಲ್ಲಾ ಬಗೆಯ ವ್ಯಾಪಾರ-ವಹಿವಾಟುಗಳಿಗೆ ಬಂದ್ ಬಿಸಿ ತಟ್ಟಲಿಲ್ಲ. ಬ್ಯಾಂಕುಗಳು, ಖಾಸಗಿ ಲೇವಾದೇವಿ ಸಂಸ್ಥೆಗಳು, ಬೀದಿಬದಿ ವ್ಯಾಪಾರ, ಕ್ಲಿನಿಕ್‍ಗಳು, ಡಯಾಗ್ನೋಸ್ಟಿಕ್ ಸೆಂಟರ್, ಮೆಡಿಕಲ್ ಸ್ಟೋರ್, ಲಾಡ್ಜ್‍ಗಳು, ದೇವಸ್ಥಾನಗಳು ಇಂದು ಎಂದಿನಂತೆ ಕಾರ್ಯ ನಿರ್ವಹಿಸಿದ್ದರಿಂದ ಜನಜೀವನದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಲಿಲ್ಲ.

ಬಿ.ಎನ್.ರಸ್ತೆ, ಅಶೋಕ ರಸ್ತೆ, ಕೆ.ಆರ್.ಸರ್ಕಲ್ ಸೇರಿದಂತೆ ಮೈಸೂರಿನ ವಿವಿಧೆಡೆ ಚಿನ್ನ ಮತ್ತು ಬೆಳ್ಳಿ ಆಭರಣ ಅಂಗಡಿ, ಸೀರೆ, ವಸ್ತ್ರಗಳ ಅಂಗಡಿಗಳಲ್ಲಿ ಬಂದ್ ಅನ್ನೂ ಲೆಕ್ಕಿಸದೆ ಗ್ರಾಹಕರು ಖರೀದಿಯಲ್ಲಿ ತೊಡಗಿದ್ದರು. ಆಟೋ ಗ್ಯಾರೇಜ್, ಟೂರ್ಸ್ ಅಂಡ್ ಟ್ರಾವೆಲ್ಸ್, ಗುಜರಿ ವ್ಯಾಪಾರ, ಮಾಂಸದಂಗಡಿ, ಮದ್ಯದಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಿದ ವಲ್ಲದೆ, ಆಟೋಮೊಬೈಲ್, ಹಾರ್ಡ್‍ವೇರ್, ಕಟ್ಟಡ ಸಾಮಗ್ರಿ ವ್ಯಾಪಾರಕ್ಕೂ ಕರ್ನಾಟಕ ಬಂದ್ ಬಿಸಿ ತಟ್ಟಲಿಲ್ಲ. ಮೈಸೂರಿನ ನಗರ ಬಸ್ ನಿಲ್ದಾಣದ ಬಳಿ ಬಸ್ ಸಂಚಾರ ತಡೆಯಲೆತ್ನಿಸಿದ ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠಲಮೂರ್ತಿ, ಬಾಲಕೃಷ್ಣ, ಬಸವರಾಜು ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು. ಉಳಿದಂತೆ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ.ಎ.ಎನ್. ಪ್ರಕಾಶ್‍ಗೌಡರ ನೇತೃತ್ವದಲ್ಲಿ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Translate »