ಕೊರೊನಾ 2ನೇ ಅಲೆ ನಮ್ಮ ತಾಳ್ಮೆ ಪರೀಕ್ಷಿಸುತ್ತಿದೆ ಮನ್ ಕೀ ಬಾತ್‍ನಲ್ಲಿ ಪ್ರಧಾನಿ ಮೋದಿ ಕಳವಳ
News

ಕೊರೊನಾ 2ನೇ ಅಲೆ ನಮ್ಮ ತಾಳ್ಮೆ ಪರೀಕ್ಷಿಸುತ್ತಿದೆ ಮನ್ ಕೀ ಬಾತ್‍ನಲ್ಲಿ ಪ್ರಧಾನಿ ಮೋದಿ ಕಳವಳ

April 26, 2021

ನವದೆಹಲಿ,ಏ.25- ಈ ಎರಡನೇ ಕೊರೊನಾ ಅಲೆ ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದೆ. ಧೈರ್ಯಗುಂದ ಬೇಡಿ. ವದಂತಿ, ಊಹಾಪೆÇೀಹಗಳನ್ನು ನಂಬಬೇಡಿ. ಇಂತಹ ಸಂದರ್ಭದಲ್ಲಿ ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಪಡೆಯುವುದು ಬಹಳ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಕರೆ ನೀಡಿದ್ದಾರೆ.

ಪ್ರಧಾನಿ ಮೋದಿ ಭಾನುವಾರ ತಮ್ಮ ಮಾಸಿಕ ರೇಡಿಯೋ ಭಾಷಣ ‘ಮನ್ ಕೀ ಬಾತ್’ನ 76ನೇ ಸಂಚಿಕೆಯಲ್ಲಿ ಕೋವಿಡ್ ಕುರಿತಾಗಿ ಮಾತನಾಡಿದರು. ದೇಶಾದ್ಯಂತ ಪ್ರಸ್ತುತ ಇರುವ ಪರಿಸ್ಥಿತಿಯ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವಂತೆ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರನ್ನು(ಫ್ರಂಟ್ ಲೈನ್ ವರ್ಕರ್ಸ್- ವೈದ್ಯರು, ನರ್ಸ್‍ಗಳು ಮತ್ತು ಆಂಬುಲೆನ್ಸ್ ಚಾಲಕರು) ಆಹ್ವಾನಿಸಿದರು.

ಕೋವಿಡ್-19 ನಮ್ಮ ತಾಳ್ಮೆ ಮತ್ತು ನೋವು ಸಹಿ ಸುವ ಸಾಮರ್ಥ್ಯವನ್ನು ಪರೀಕ್ಷಿಸುತ್ತಿದೆ. ಈ ಸಂದರ್ಭ ದಲ್ಲಿ ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ನಮ್ಮ ಪ್ರೀತಿಪಾತ್ರರು ನಮ್ಮನ್ನು ಬಿಟ್ಟುಹೋಗಿದ್ದಾರೆ. ಅವರ ಅಕಾಲಿಕ ಮರಣ ನಮಗೆ ನೋವು ತರಿಸಿದೆ. ಕೋವಿಡ್ ಮೊದಲ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸಿದ ನಂತರ, ದೇಶದ ಮನೋಸ್ಥೈರ್ಯ ಹೆಚ್ಚಿತ್ತು. ಆದರೆ ಕೊರೊನಾ 2ನೇ ಅಲೆ ಇಡೀ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದೆ ಎಂದು ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದರು.

ಭಾರತವು ಎಲ್ಲಾ ಆಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿದೆ. ಆ್ಯಂಟಿ-ವೈರಲ್ ಡ್ರಗ್ ರೆಮ್ಡಿಸಿವಿರ್ ಬಗ್ಗೆ ಇದ್ದ ಹಲವು ತಪ್ಪು ಕಲ್ಪನೆಗಳ ಬಗ್ಗೆ ವೈದ್ಯರು ಸ್ಪಷ್ಟನೆ ನೀಡಿದ್ದಾರೆ. ಕಳೆದ ಕೆಲ ವಾರಗಳಿಂದ ರೆಮ್ಡಿಸಿವಿರ್ ಲಸಿಕೆಗೆ ಇಡೀ ದೇಶಾದ್ಯಂತ ಬೇಡಿಕೆ ಹೆಚ್ಚಾಗಿದೆ ಎಂದರು.
ಹಗಲಿರುಳೆನ್ನದೆ ತಮ್ಮ ಪ್ರಾಣವನ್ನು ಲೆಕ್ಕಿಸದೆ ಜನ ರಿಗೆ ಸೇವೆ ನೀಡುತ್ತಿರುವ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರದ ಉಚಿತ ಲಸಿಕಾ ಅಭಿಯಾನ ಮುಂದುವರೆಯುತ್ತದೆ ಎಂದು ಭರವಸೆ ನೀಡಿದರು. ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತದೆ. ಈ ಮೂಲಕ ಭಾರತ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಹೇಳಿದರು.
ಕೊರೊನಾ ಲಸಿಕೆ ಕುರಿತಾಗಿ ಜನರು ಯಾವುದೇ ವದಂತಿಗಳಿಗೆ ಬಲಿಯಾಗದಂತೆ ನಾನು ಮನವಿ ಮಾಡು ತ್ತೇನೆ. ಭಾರತ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಗಳಿಗೆ ಉಚಿತ ಲಸಿಕೆ ಕಳುಹಿಸಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿರಬೇಕು. 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಇದರ ಲಾಭ ಪಡೆಯಬಹುದು. ಮೇ 1ರಿಂದ 18 ವರ್ಷ ಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ ಈ ಕೊರೊನಾ ಲಸಿಕೆ ಲಭ್ಯವಿರುತ್ತದೆ ಎಂದು ಮೋದಿ ಹೇಳಿದರು.
ಕೇಂದ್ರ ಸರ್ಕಾರದ ಉಚಿತ ಲಸಿಕೆ ಯೋಜನೆ ಗರಿಷ್ಠ ಜನರನ್ನು ತಲುಪುವಂತೆ ನಾನು ರಾಜ್ಯಗಳಿಗೆ ಮನವಿ ಮಾಡುತ್ತೇನೆ. ಮೇ 1ರಿಂದ ಲಸಿಕೆ ತಯಾರಕರು ತಾವು ಉತ್ಪಾದಿಸುವ ಶೇ.50ರಷ್ಟು ಲಸಿಕೆಯನ್ನು ನೇರವಾಗಿ ರಾಜ್ಯಗಳು ಮತ್ತು ಖಾಸಗಿಯವರಿಗೆ ಮಾರಾಟ ಮಾಡ ಬಹುದು. ಉಳಿದವರು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸೀಮಿತವಾಗಿ ಉಳಿಯುವ ಸರ್ಕಾರಿ ಪಾಯೋಜಿತ ಅಭಿಯಾನಕ್ಕಾಗಿ ಕೇಂದ್ರಕ್ಕೆ
ನೀಡಬೇಕಾಗುತ್ತದೆ ಎಂದರು. ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಈಗಾಗಲೇ ನಾನು ಸಾಕಷ್ಟು ತಜ್ಞರು ಹಾಗೂ ಹಲವಾರು ವಲಯಗಳ ಅಧಿಕಾರಿಗಳೊಂದಿಗೆ, ಔಷಧೀಯ ಉದ್ಯಮ, ಆಕ್ಸಿಜನ್ ಉತ್ಪಾದಕರು ಸೇರಿದಂತೆ ಹಲವರೊಂದಿಗೆ ಸಬೆ ನಡೆಸಿ ಮಾತುಕತೆ ನಡೆಸಿದ್ದೇನೆ. ಕೊರೊನಾ ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ನಮ್ಮ ಆರೋಗ್ಯ ಕಾರ್ಯಕರ್ತರು, ವೈದ್ಯರು ಉತ್ತಮವಾಗಿ ಹೋರಾಟ ನಡೆಸುತ್ತಿದ್ದೇನೆ. ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಅನುಭವಗಳನ್ನು ಪಡೆದುಕೊಂಡಿದ್ದಾರೆ.

ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಕೊರೊನಾ ಪರಿಸ್ಥಿತಿ ಕುರಿತು ಮಾಹಿತಿ ಪಡೆಯಿರಿ ಎಂದು ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತಿದ್ದೇನೆ. ಕೊರೋನಾ ಕುರಿತು ಸಾಕಷ್ಟು ವೈದ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಅಲ್ಲದೆ, ರೋಗಿಗಳೊಂದಿಗೆ ಸಮಾಲೋಚನೆಗಳನ್ನೂ ನಡೆಸುತ್ತಿದ್ದಾರೆ. ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಭಾರತ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳೊಂದಿಗೆ ಒಗ್ಗೂಡಿ ಶ್ರಮಪಡುತ್ತಿದೆ ಎಂದು ಅವರು ಹೇಳಿದರು.

Translate »