ಜನತಾ ಕಫ್ರ್ಯೂ ಮೊದಲ ದಿನ ಸಕ್ಕರೆ ನಾಡು ಸ್ತಬ್ಧ
ಮಂಡ್ಯ

ಜನತಾ ಕಫ್ರ್ಯೂ ಮೊದಲ ದಿನ ಸಕ್ಕರೆ ನಾಡು ಸ್ತಬ್ಧ

April 29, 2021
  • ವಿನಾಯಿತಿ ಇದ್ದರೂ ಅಗತ್ಯ ವಸ್ತು ಖರೀದಿಗೆ ಮುಂದಾಗದ ಜನ 
  • ಜಿಲ್ಲಾದ್ಯಂತ ಮದ್ಯದಂಗಡಿಗಳು ಸಹ ಖಾಲಿ ಖಾಲಿ 
  • ಸುಖಾಸುಮ್ಮನೆ ರಸ್ತೆಗಿಳಿದವರಿಗೆ ಪೊಲೀಸರಿಂದ ದಂಡ

ಮಂಡ್ಯ, ಏ.28(ಮೋಹನ್‍ರಾಜ್)- ರಾಜ್ಯ ಸರ್ಕಾರದ ಆದೇಶದಂತೆ ಕೊರೊನಾ ವನ್ನು ಹತೋಟಿಗೆ ತರಲು ಕರೆ ನೀಡಿದ್ದ ಜನತಾ ಕಫ್ರ್ಯೂಗೆ ಸಕ್ಕರೆ ನಾಡು ಮಂಡ್ಯ ದಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನ ಮನೆಯಲ್ಲಿದ್ದು ಕೊಂಡೇ ಬೆಂಬಲ ನೀಡಿದರು.

ಎಲ್ಲಕ್ಕಿಂತ ಹೆಚ್ಚಾಗಿ ಬೆಳಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದರೂ ಹಿಂದಿನ ದಿನವೇ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಸಿದ್ದರಿಂದ ನಿಗದಿತ ಸಮಯದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನ ಆಸಕ್ತಿ ತೋರ ಲಿಲ್ಲ. ಕೆಲವೆಡೆ ಜನ ಸಂಚಾರವಿದ್ದರೂ ದಿನಸಿ, ತರಕಾರಿ, ಹಾಲು, ಮೀನು, ಮಾಂಸ ದಂಗಡಿಗಳ ಮುಂದೆ ಜನರ ಗುಂಪು ವಿರಳವಾಗಿದ್ದ ದೃಶ್ಯ ಕಂಡು ಬಂತು.

ಅಲ್ಲದೆ ವಿಶೇಷವಾಗಿ ಮದ್ಯದಂಗಡಿಗಳು ಸಹ ಖಾಲಿ ಖಾಲಿ ಹೊಡೆಯುತ್ತಿದ್ದ ದೃಶ್ಯಾ ವಳಿಗಳು ಕಂಡು ಬಂತು. ಮದ್ಯದಂಗಡಿ ಗಳು ಸಹ ಕ್ಲೋಸ್ ಆಗುತ್ತವೆ ಎಂಬ ಆತಂಕಕ್ಕೆ ಬಿದ್ದಿದ್ದ ಮದ್ಯಪ್ರಿಯರು ಹಿಂದಿನ ದಿನವೇ ಮದ್ಯ ಶೇಖರಣೆ ಮಾಡಿಕೊಂಡಿ ದ್ದರಿಂದ 6ರಿಂದ 10ರವರೆಗೆ ಸಣ್ಣಪುಟ್ಟ ವೈನ್‍ಸ್ಟೋರ್‍ಗಳು ಸೇರಿದಂತೆ ಶಾಪಿಂಗ್ ಮಾಲ್ ರೀತಿ ಇರುವ ವೈನ್‍ಸ್ಟೋರ್‍ಗಳು ಸಹ ಜನರಿಲ್ಲದೇ ಭಣಗುಡುತ್ತಿದ್ದವು. ಪ್ರಮುಖವಾಗಿ ನಗರದ ನೂರಡಿ ರಸ್ತೆ, ಗುತ್ತಲು ರಸ್ತೆಗಳಲ್ಲಿರುವ ಹತ್ತಾರು ವೈನ್‍ಸ್ಟೋರ್‍ಗಳಲ್ಲಿ ಜನರೇ ಇರಲಿಲ್ಲ.

ನಿಗದಿತ 6ರಿಂದ 10ರವರೆಗೆ ಜನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಆ ಪೈಕಿ ಶೇ.30ರಷ್ಟು ಜನ ಮಾಸ್ಕ್ ಇಲ್ಲದೇ ಸಂಚರಿಸುತ್ತಿದ್ದರು. ಮಂಡ್ಯದಲ್ಲಿ ಕೊರೊನಾ ಅಲೆ ವ್ಯಾಪಕ ವಾಗಿದ್ದು, ನಿತ್ಯ 800ಕ್ಕೂ ಮೀರಿದ ಕೇಸುಗಳು ದೃಢ ಪಡುತ್ತಿವೆ. ಹೀಗಿದ್ದರೂ ಜನ ಯಾವುದೇ ಭಯ ಭೀತಿ ಇಲ್ಲದೇ ರಸ್ತೆಗಳಲ್ಲಿ ಮಾಸ್ಕ್ ಇಲ್ಲದೇ ಸಂಚರಿಸುತ್ತಿದ್ದರು.

10ರ ಬಳಿಕ ಕಫ್ರ್ಯೂ ಇದ್ದು ಅಂಗಡಿ ಮುಗ್ಗಟ್ಟು ಗಳು ಮುಚ್ಚಿದ್ದರೂ ಜನ ಸಂಚಾರ ಮಾತ್ರ ಎಂದಿನಂತೆ ಇತ್ತು. ಕಾರುಗಳು, ಬೈಕುಗಳ ಸಂಚಾರ ತಕ್ಕಮಟ್ಟಿಗಿತ್ತು. ನಗರದ ನಂದ ಚಿತ್ರಮಂದಿರದ ಬಳಿ ಅನಗತ್ಯ ಸಂಚಾರದ ಬಗ್ಗೆ ಪೊಲೀಸರು ಪ್ರಶ್ನಿಸದೇ ಹೆಲ್ಮೆಟ್ ಧರಿಸದ ಪ್ರಯಾಣಿಕ ರನ್ನು ತಪಾಸಣೆ ಮಾಡುತ್ತಿದ್ದರು.

ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಸಂತೆ ಮೈದಾನದಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತಿತ್ತು. ಅಂಗಡಿಗಳನ್ನು ತೆರೆದು ಮಾರಾಟ ಮಾಡಲಾಗುತ್ತಿತ್ತು. ಕೊರೊನಾ ನಿಯಮ ಪಾಲಿಸದಿರುವ ಅಂಗಡಿ ಮಾಲೀ ಕರಿಗೆ ಪೊಲೀಸರು ನಿಯಮ ಪಾಲಿಸು ವಂತೆ ಎಚ್ಚರಿಕೆ ನೀಡಿದರು. ಕೊರೊನೊ ನಿಯಮ ಪಾಲಿಸದೇ ಇರುವ ಕೆಲ ಅಂಗಡಿಗಳ ಮಾಲೀಕರಿಗೆ ಬುದ್ದಿ ಹೇಳಿ, ಬಾಗಿಲು ಮುಚ್ಚಿಸಿ ಎಚ್ಚರಿಕೆ ನೀಡಿದರು.
ಪಟ್ಟಣದಾದ್ಯಂತ ಎಲ್ಲಾ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದರಿಂದ ನಿರ್ಗತಿಕರು ಹಾಗೂ ಭಿಕ್ಷಕರು ಊಟಕ್ಕಾಗಿ ಪರದಾಡು ತ್ತಿದ್ದರು. ರಸ್ತೆಯಲ್ಲಿ ಯಾರೂ ಇಲ್ಲ, ಬಿಕೋ ಎನ್ನುತ್ತಿದ್ದ ಹಿನ್ನೆಲೆಯಲ್ಲಿ ಊಟ ಇಲ್ಲದೆ ಕಷ್ಟಪಡುತ್ತಿದ್ದ ದೃಶ್ಯ ಮನಕಲಕುತ್ತಿತ್ತು.

ಇನ್ನು ನಗರದ ಜಿಲ್ಲಾಧಿಕಾರಿ ಕಚೇರಿ, ಸಬ್ ರಿಜಿಸ್ಟ್ರಾರ್, ಪಿಡಬ್ಲ್ಯೂಡಿ, ಕೃಷಿ ಇಲಾಖೆ, ಜಿಲ್ಲಾ ಪಂಚಾಯ್ತಿ, ಎಸ್ಪಿ ಕಚೇರಿ ಸೇರಿದಂತೆ ಪ್ರಮುಖ ಸರ್ಕಾರಿ ಇಲಾಖೆಯ ಕಚೇರಿಗಳು ಜನರಿಲ್ಲದೇ ಭಣಗುಡುತ್ತಿತು.

ಈ ಮಧ್ಯೆ ಕೋವಿಡ್ ಹಿನ್ನಲೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗಿರುವುದರಿಂದ 20 ಆಕ್ಸಿಜನ್ ಸಿಲಿಂಡರ್‍ಗಳನ್ನು ಶಾಹಿ ಎಕ್ಸ್‍ಪೋರ್ಟ್ ಪ್ರೈವೇಟ್ ಲಿಮಿಟೆಡ್ ವತಿ ಯಿಂದ ಮಂಡ್ಯ ಮಿಮ್ಸ್‍ಗೆ ಹಸ್ತಾಂತರಿ ಸಲಾಯಿತು. ಮಂಡ್ಯ ಮಿಮ್ಸ್ ಹಾಗೂ ಮದ್ದೂರು ತಾಲ್ಲೂಕು ಆಸ್ಪತ್ರೆಗೆ ತಲಾ 20 ಸಿಲಿಂಡರ್ ಗಳನ್ನು ಹಸ್ತಾಂತರಿಸಿದರೆ, 25 ಕಾಟ್, ಬೆಡ್ ಶೀಟ್, 5 ಸ್ಟ್ರೆಚರ್, 3 ವೀಲ್ ಚೇರ್ ಸಹ ಕಂಪನಿ ನೀಡಿದೆ. ಶಾಹಿ ಕಂಪನಿಯ ನೆರವನ್ನು ಜಿಲ್ಲಾಧಿಕಾರಿ ಪ್ರಶಂಸಿಸಿದ್ದಾರೆ.

ಇನ್ನು ಇವತ್ತು ಒಂದೇ ದಿನ 935ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ 28175ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇಂದು 316 ಮಂದಿ ಡಿಸ್ಚಾರ್ಜ್ ಆದರೆ, ಕೊರೊನಾಗೆ 9 ಮಂದಿ ಬಲಿ ಯಾದಂತಾಗಿದೆ. ಮಂಡ್ಯದಲ್ಲಿ 460, ಮದ್ದೂರು 71, ಮಳವಳ್ಳಿ 58, ಪಾಂಡವಪುರ 34, ಶ್ರೀರಂಗಪಟ್ಟಣ 108, ಕೆ.ಆರ್.ಪೇಟೆ 117, ನಾಗಮಂಗಲದಲ್ಲಿ 81 ಪ್ರಕರಣ ದಾಖಲಾಗಿದೆ.

Translate »