ಚಿರತೆ ಸೆರೆಗೆ ಅರಣ್ಯ ಇಲಾಖೆ ಹರಸಾಹಸ
ಮೈಸೂರು

ಚಿರತೆ ಸೆರೆಗೆ ಅರಣ್ಯ ಇಲಾಖೆ ಹರಸಾಹಸ

January 24, 2023

ಮೈಸೂರು,ಜ.23(ಎಂಟಿವೈ)- ತಿ.ನರಸೀಪುರ ತಾಲೂ ಕಿನ ವಿವಿಧ ಗ್ರಾಮಗಳಲ್ಲಿ ನಾಲ್ವರನ್ನು ಬಲಿ ಪಡೆದ ಚಿರತೆ ಸೆರೆಗೆ ಅರಣ್ಯ ಇಲಾಖೆ, ಗೂಗಲ್ ಮ್ಯಾಪ್ ನೆರವಿ ನೊಂದಿಗೆ ವಿವಿಧೆಡೆ ಕ್ಯಾಮರಾ ಟ್ರಾಪ್ ಅಳವಡಿಸಿ, ಚಿರತೆಯ ಜಾಡು ಪತ್ತೆಹಚ್ಚಲು ಕಾರ್ಯಾ ಚರಣೆ ಆರಂಭಿಸಿದೆ.

ಕಳೆದ ಮೂರು ತಿಂಗಳಲ್ಲಿ ನಾಲ್ವರು ಚಿರತೆ ದಾಳಿಗೆ ಬಲಿ ಯಾಗಿದ್ದು, ತಾಲೂಕಿನ ಜನ ಭಯಭೀತರಾಗಿದ್ದಾರೆ. ಪದೇ ಪದೆ ದಾಳಿ ನಡೆಸಿ ಕಣ್ಮರೆಯಾಗುತ್ತಿರುವ ಚಿರತೆ ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದ್ದು, ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಅವರು ಚಿರತೆ ಸೆರೆಗೆ ವಿಶೇಷ ಟಾಸ್ಕ್‍ಫೋರ್ಸ್ ರಚಿಸುವಂತೆ ಸೂಚನೆ ನೀಡಿದ್ದಾರೆ. ಜನರ ಕೋಪ ಶಮನ ಮಾಡಲು ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ವೈಲ್ಡ್‍ಲೈಫ್ ಪಿಸಿಸಿಎಫ್‍ರೊಂದಿಗೆ ಚರ್ಚಿಸಿ, ಜನರ ಮೇಲೆರಗುತ್ತಿ ರುವ ಚಿರತೆಗೆ ಕಂಡಲ್ಲಿ ಗುಂಡಿಕ್ಕುವಂತೆ ಆದೇಶ ನೀಡಿ ದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ವಿವಿಧ ತಂತ್ರ ಗಾರಿಕೆ ಮೂಲಕ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ನಾಲ್ಕರಲ್ಲಿ ಮೂರು ಪ್ರಕರಣದಲ್ಲಿ ಒಂದೇ ಚಿರತೆ ಶಂಕೆ: ತಿ.ನರಸೀಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ 3 ತಿಂಗಳಲ್ಲಿ ನಾಲ್ಕು ಪ್ರಕರಣದಲ್ಲಿ ಮೂವರನ್ನು ಒಂದೇ ಚಿರತೆ ಬಲಿ ಪಡೆದಿರುವ ಶಂಕೆ ದಟ್ಟವಾಗಿದೆ. 2022ರ ಅ.31ರಂದು ತಾಲೂಕಿನ ಎಂ.ಎಲ್.ಹುಂಡಿಯಲ್ಲಿ ಚಿರತೆಗೆ ಬಲಿಯಾದ 20 ವರ್ಷದ ಮಂಜುನಾಥ್ ಪ್ರಕರಣ ಹೊರತುಪಡಿಸಿದರೆ, ಡಿ.1ರಂದು ಎಂ.ಕೆಬ್ಬೆಹುಂಡಿ ಮೇಘನ(22), 2023ರ ಜ.20ರಂದು ಕನ್ನನಾಯಕನ ಹಳ್ಳಿಯ ಸಿದ್ದಮ್ಮ(60), ಜ.21ರಂದು ಹೊರಳಹಳ್ಳಿ ಗ್ರಾಮದ 11 ವರ್ಷದ ಬಾಲಕ ಜಯಂತ್ ಮೇಲೆ ದಾಳಿ ನಡೆಸಿದ ಚಿರತೆ ಒಂದೇ ಆಗಿರುವ ಅನುಮಾನ ದಟ್ಟವಾಗಿದೆ. ಕಳೆದ ರಾತ್ರಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ವನ್ಯಜೀವಿ ತಜ್ಞರೊಂದಿಗೆ ನಡೆದ ಸಭೆಯಲ್ಲಿ ಚಿರತೆ ದಾಳಿಯ ನಾಲ್ಕು ಪ್ರಕರಣದಲ್ಲಿ ಕೊನೆಯ ಮೂರರಲ್ಲಿ ಒಂದೇ ಚಿರತೆಯಿಂದ ಸಂಭವಿ ಸಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

ಅ.31ರಂದು ನಡೆದ ಮೊದಲ ಪ್ರಕರಣದಲ್ಲಿ ಮಂಜು ನಾಥ್ ಎಂಬ ಯುವಕನ ಬಲಿ ಪಡೆದ ಚಿರತೆಯನ್ನು ಈಗಾಗಲೇ ಸೆರೆ ಹಿಡಿದು ಬನ್ನೇರುಘಟ್ಟಕ್ಕೆ ಸ್ಥಳಾಂತರಿಸ ಲಾಗಿದೆ. ಮೊದಲ ಪ್ರಕರಣ ನಡೆದ ಸ್ಥಳದ ಹಲವೆಡೆ ಅಳವಡಿಸಿದ್ದ ಕ್ಯಾಮರಾ ಟ್ರಾಪ್‍ನಲ್ಲಿ ಚಿರತೆಯ ಚಲನ ವಲನದ ದೃಶ್ಯ ಸೆರೆಯಾಗಿತ್ತು. ಆದರೆ, 2, 3 ಹಾಗೂ 4ನೇ ಪ್ರಕರಣದ ಸ್ಥಳದ ಸುತ್ತ ಅಳವಡಿಸಿರುವ ಕ್ಯಾಮರಾ ಟ್ರ್ಯಾಪ್‍ನಲ್ಲಿ ಚಿರತೆ ಸುಳಿವು ಪತ್ತೆಯಾಗಿರಲಿಲ್ಲ. ಗೂಗಲ್ ಮ್ಯಾಪ್ ಮೂಲಕ ಪರಿಶೀಲನೆ ನಡೆಸಿದ ವೇಳೆ ಕೊನೆಯ ಮೂರು ಪ್ರಕರಣಗಳು ಒಂದೂವರೆ ಕಿ.ಮಿ ಅಂತರ ದಲ್ಲೇ ನಡೆದಿರುವುದರಿಂದ ಒಂದೇ ಚಿರತೆ ಈ ಮೂರು ಪ್ರಕರಣದಲ್ಲಿ ಬಲಿ ಪಡೆದಿದೆ ಎಂದು ಅಂದಾಜಿಸಲಾಗಿದೆ. ಹಾಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಚಿರತೆ ಸೆರೆಗೆ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಚಹರೆ ಪತ್ತೆಹಚ್ಚಲು ಸೂಚನೆ: ಮೂರು ತಿಂಗಳಲ್ಲೇ ನಾಲ್ಕು ಮಂದಿ ಬಲಿಯಾದ ಹಿನ್ನೆಲೆಯಲ್ಲಿ ಜನರ ಮೇಲೆರಗುತ್ತಿರುವ ಚಿರತೆ ಚಹರೆ ಪತ್ತೆಗೆ ಸೂಚನೆ ನೀಡಲಾಗಿದೆ. ಇದರಿಂದ ಸಿದ್ದಮ್ಮ ಬಲಿಯಾದ ಸ್ಥಳದ ಸುತ್ತಮುತ್ತ 12 ಕ್ಯಾಮರಾ ಟ್ರ್ಯಾಪ್, ಜಯಂತ್ ಮೃತದೇಹ ಸಿಕ್ಕಿದ ಸ್ಥಳದ ಆಜುಬಾಜಲ್ಲಿ 4 ಕ್ಯಾಮರಾ ಟ್ರ್ಯಾಪ್ ಅಳವಡಿಸಲಾಗಿದೆ. ಅಲ್ಲದೆ, 5-6 ಬೋನ್ ಇಡಲಾಗಿದೆ. ಮಲ್ಲಿಕಾರ್ಜುನ ಬೆಟ್ಟದ ಚಿರತೆ ಸೆರೆ ಹಿಡಿಯಲು ಅನುಸರಿಸಿದಂತೆ ತುಮಕೂರಿನಿಂದ ದೊಡ್ಡ ಬೋನ್ ತಂದು, ಅದನ್ನು ಕೊಟ್ಟಿಗೆ ಮಾದರಿಯಲ್ಲಿ ಹುಲ್ಲು, ಸೊಪ್ಪಿನಿಂದ ಮುಚಿ,್ಚ ಚಿರತೆ ಸೆಳೆಯಲು ತಂತ್ರ ಹೂಡಲಾಗಿದೆ.

Translate »