ಸ್ನೇಹಿತನ ಬೆಂಕಿ ಹಚ್ಚಿ ಕೊಂದ ಹಂತಕನಿಗೆ ಜೀವಾವಧಿ ಶಿಕ್ಷೆ
ಮೈಸೂರು

ಸ್ನೇಹಿತನ ಬೆಂಕಿ ಹಚ್ಚಿ ಕೊಂದ ಹಂತಕನಿಗೆ ಜೀವಾವಧಿ ಶಿಕ್ಷೆ

May 27, 2018

ಮೈಸೂರು: ಕೊಠಡಿಯಲ್ಲಿ ಮಲಗಿದ್ದ ಸ್ನೇಹಿತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಹಂತಕನಿಗೆ ಮೈಸೂರಿನ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಕುಮಾರ್ ಎಂ.ಆನಂದಶೆಟ್ಟಿ ಅವರು ಜೀವಾವಧಿ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ, ತೀರ್ಪು ನೀಡಿದ್ದಾರೆ.

ಹಂತಕ ಶಿವಕುಮಾರ್ ಶಿಕ್ಷೆಗೊಳಗಾದವನಾಗಿದ್ದು, ಈತ ತನ್ನ 6 ಸ್ನೇಹಿತರು ಮಲಗಿದ್ದ ಕೋಣೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಅವರಲ್ಲಿ ಓರ್ವ ಸಾವನ್ನಪ್ಪಿ, ಐವರು ಗಾಯಗೊಂಡಿದ್ದರು.

ವಿವರ: ಮೈಸೂರಿನ ಎಸ್.ಆರ್.ರಸ್ತೆಯಲ್ಲಿರುವ ಹೋಟೆಲ್‍ವೊಂದರಲ್ಲಿ ನೇಪಾಳದ ಶಿಲ್ಲಾಂಗ್‍ನ ಬೈತೋಡಿ ಜಿಲ್ಲೆಯ ತಟಗೋಡ ಗ್ರಾಮದ ಗಣೇಶ್ ಪಾಂಡೆ, ಡೆಲ್ಲಿ ರಾಜ, ಗಜೇಂದ್ರ, ಸೂರಜ್, ಗೋರಕ್ ಮತ್ತು ರಮೇಶ್ ಎಂಬುವವರು ಕೆಲಸ ಮಾಡುತ್ತಿದ್ದು, ಇವರಿಗೆ ಹೋಟೆಲ್ ಮಾಲೀಕರು ತಿಲಕ್‍ನಗರ 6ನೇ ಮುಖ್ಯ ರಸ್ತೆಯ ಒಂದನೇ ಕ್ರಾಸ್‍ನಲ್ಲಿ ವಾಸ್ತವ್ಯಕ್ಕೆ ರೂಂ ಮಾಡಿಕೊಟ್ಟಿದ್ದರು.

ಇವರ ಜೊತೆ ಸ್ನೇಹ ಸಂಪಾದಿಸಿದ್ದ ಶಿವಕುಮಾರ್, ಇವರಲ್ಲಿ ಓರ್ವನ ಮೊಬೈಲ್ ಕದ್ದು ಸಿಕ್ಕಿಬಿದ್ದಿದ್ದ. ತನ್ನ ಕಳ್ಳತನ ಪತ್ತೆಯಾದ ಕಾರಣ ಅವಮಾನಿತನಾಗಿದ್ದ ಈತ ಈ 6 ಮಂದಿಯನ್ನು ಹತ್ಯೆ ಮಾಡಲು ತೀರ್ಮಾನಿಸಿದ್ದ.

2014ರ ಆ.27ರಂದು ಗಣೇಶ ಹಬ್ಬವಿದ್ದು, ಅಂದು ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ 6 ಕಾರ್ಮಿಕರೂ ಕೋಣೆಯಲ್ಲಿ ಗಾಢ ನಿದ್ದೆಯಲ್ಲಿದ್ದಾಗ ಶಿವಕುಮರ್ ನಾಲ್ಕು ಲೀಟರ್ ಪೆಟ್ರೋಲ್ ಅನ್ನು ಕೋಣೆಯೊಳಗೆ ಸುರಿದು ಬೆಂಕಿ ಹಚ್ಚಿದ್ದ. ಇದರಿಂದಾಗಿ ಕೋಣೆಯೊಳಗೆ ಮಲಗಿದ್ದ ಆರೂ ಕಾರ್ಮಿಕರು ತೀವ್ರವಾಗಿ ಗಾಯಗೊಂಡು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಲ್ಲಿ ಡೆಲ್ಲಿ ರಾಜ ಎಂಬಾತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ.

ಮೈಸೂರಲ್ಲಿ ತೀವ್ರ ಆತಂಕವನ್ನುಂಟು ಮಾಡಿದ್ದ ಈ ಪ್ರಕರಣ ದಾಖಲಿಸಿಕೊಂಡಿದ್ದ ಮಂಡಿ ಪೊಲೀಸ್ ಠಾಣೆ ಪೊಲೀಸರು ಶಿವಕುಮಾರ್‍ನನ್ನು ಬಂಧಿಸಿ, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಹಂತಕ ಶಿವಕುಮಾರ್‍ಗೆ ಜೀವಾವಧಿ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಹೆಚ್.ಡಿ. ಆನಂದಕುಮಾರ್ ವಾದ ಮಂಡಿಸಿದ್ದರು.

Translate »