ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ ಸತ್ತವರ ಸಂಖ್ಯೆ 24 ಅಲ್ಲ 28
ಚಾಮರಾಜನಗರ

ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ ಸತ್ತವರ ಸಂಖ್ಯೆ 24 ಅಲ್ಲ 28

May 5, 2021
  • ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ 
  • ಡಿ.ಕೆ. ಶಿವಕುಮಾರ್ ಅವರೊಂದಿಗೆ ಆಸ್ಪತ್ರೆಗೆ ಭೇಟಿ; ಪರಿಶೀಲನೆ, ಅಧಿಕಾರಿಗಳಿಂದ ಮಾಹಿತಿ ಸಂಗ್ರಹ
  • ಆರೋಗ್ಯ ಸಚಿವ ಡಾ.ಸುಧಾಕರ್ ಶುದ್ಧ ಸುಳ್ಳುಗಾರ

ಚಾಮರಾಜನಗರ, ಮೇ 4(ಎಸ್‍ಎಸ್)-ಚಾಮರಾಜನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೆ ಸಂಭವಿಸಿದ ಸಾವು 24 ಅಲ್ಲ 28. ಪ್ರಕರಣದ ಸಂಬಂಧ ನ್ಯಾಯಾಂಗ ತನಿಖೆ ಯಾಗಬೇಕು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ವಿಪಕ್ಷ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.

ಚಾಮರಾಜನಗರದಲ್ಲಿ 24 ಗಂಟೆಯಲ್ಲಿ 24 ಮಂದಿ ಕೋವಿಡ್ ಸೋಂಕಿತರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿದ ಅವರು, ಜಿಲ್ಲಾಧಿಕಾರಿ, ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆ ಉಂಟಾಗಿ ಕೋವಿಡ್ ಸೋಂಕಿತರು ಮೃತಪಟ್ಟ ಹಿನ್ನೆಲೆಯಲ್ಲಿ ನಾನು ಮತ್ತು ಡಿ.ಕೆ.ಶಿವಕುಮಾರ್ ಇಲ್ಲಿಗೆ ಭೇಟಿ ನೀಡಿ, ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದಿದ್ದೇವೆ. ಆರೋಗ್ಯ ಸಚಿವ ಡಾ.ಸುಧಾಕರ್, ನಿನ್ನೆ(ಸೋಮವಾರ) ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿದ ನಂತರ ಮೂವರು ಮಾತ್ರ ಆಮ್ಲಜನಕ ಕೊರತೆ ಯಿಂದ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಆದರೆ 28 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇವರೆಲ್ಲರೂ ಸಹ ಆಮ್ಲಜನಕ ಕೊರತೆಯಿಂದಲೇ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ವೈದ್ಯಾಧಿಕಾರಿಗಳೇ ಒಪ್ಪಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು. ಡಾ. ಸುಧಾಕರ್, ಮೂವರು ಸೋಂಕಿತರು ಮಾತ್ರ ಆಕ್ಸಿಜನ್ ಕೊರತೆಯಿಂದ ಮೃತರಾಗಿದ್ದಾರೆ ಎಂದು ಹೇಳಿರುವುದು ಶುದ್ಧಸುಳ್ಳು. ಸಾವಿನ ವಿಚಾರದಲ್ಲೂ ಸಹ ಸುಳ್ಳು ಹೇಳಿರುವು ದನ್ನು ನಾನು ಖಂಡಿಸುತ್ತೇನೆ. ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಿದ್ದರಾಮಯ್ಯ ದೂರಿದರು. ನವೆಂಬರ್ ತಿಂಗಳಲ್ಲಿ ಕೊರೊನಾ ಎರಡನೇ ಅಲೆ ಪ್ರಾರಂಭವಾಗುತ್ತದೆ ಎಂಬ ಮಾಹಿತಿ ಸರ್ಕಾರಕ್ಕೆ ದೊರೆತಿತ್ತು. ಆದರೂ ನಿರ್ಲಕ್ಷ್ಯ ಮಾಡಿದ ಪರಿಣಾಮ ಇಂತಹ ದುರಂತ ಸಂಭವಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೋವಿಡ್ ಸಭೆ ನಡೆಸಿಲ್ಲ. ಬೆಂಗಳೂರಿನಲ್ಲಿ ಕುಳಿತು ಮಜಾ ಮಾಡುವುದಕ್ಕಾಗಿ ಇವರಿಗೆ ಜಿಲ್ಲೆಯ ಜವಾಬ್ದಾರಿ ವಹಿಸಿರುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವರಿಗೆ ಮಾನ, ಮರ್ಯಾದೆ ಇದ್ದರೆ ಅಧಿಕಾರದಲ್ಲಿ ಇರಬಾರದು ಎಂದು ಸಚಿವರ ವಿರುದ್ಧ ಕಿಡಿಕಾರಿದರಲ್ಲದೆ, ಈ ಸರ್ಕಾರಕ್ಕೆ ಅಧಿಕಾರದಲ್ಲಿರುವ ನೈತಿಕತೆ ಇಲ್ಲ. ಈ ಕೂಡಲೇ ಜಿಲ್ಲೆಯಲ್ಲಿನ ಕೋವಿಡ್ ಆಸ್ಪತ್ರೆಗೆ ಅಗತ್ಯ ಇರುವಷ್ಟು ಆಕ್ಸಿಜನ್ ಪೂರೈಸಲು ಕ್ರಮ ಕೈಗೊಳ್ಳಬೇಕು. ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆ ನಡೆದು, ಸತ್ಯಾಂಶ ಹೊರಬರಬೇಕು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು. ಚಾಮರಾಜನಗರದಲ್ಲಿ ನಡೆದಿರುವ ಈ ದುರ್ಘಟನೆಯ ನಿಜಾಂಶ ಹೊರಬರಬೇಕು ಎಂದು ಆಗ್ರಹಿಸಿದರು. ಆಕ್ಸಿಜನ್ ಕೊರತೆಯಿಂದ ದುಡಿಯುವವರೇ ಹೆಚ್ಚಾಗಿ ಸಾವನ್ನಪ್ಪಿದ್ದು, ಅವರ ಕುಟುಂಬ ಬೀದಿ ಪಾಲಾಗಿವೆ. ಸರ್ಕಾರ ಮೃತರ ಕುಟುಂಬದವರಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರೂ ಆದ ಮಾಜಿ ಸಂಸದ ಧ್ರುವನಾರಾಯಣ್, ಶಾಸಕರಾದ ಪುಟ್ಟರಂಗಶೆಟ್ಟಿ, ಆರ್.ನಾಗೇಂದ್ರ, ರಿಜ್ವಾನ್‍ಹರ್ಷದ್, ಧರ್ಮಸೇನಾ, ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಸ್.ಜಯಣ್ಣ, ಎಸ್.ಬಾಲರಾಜು, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಪಿ.ಮರಿಸ್ವಾಮಿ, ಮೈಸೂರು ಜಿಲ್ಲಾ ಅಧ್ಯಕ್ಷ ಡಾ.ವಿಜಯ್‍ಕುಮಾರ್ ಇತರರಿದ್ದರು.

Translate »