ಪಂಚಮಸಾಲಿ ಪಾಂಚಜನ್ಯ
ಮೈಸೂರು

ಪಂಚಮಸಾಲಿ ಪಾಂಚಜನ್ಯ

February 22, 2021

ಬೆಂಗಳೂರು,ಫೆ.21-ತಮ್ಮ ಸಮುದಾಯಕ್ಕೆ ಹಿಂದುಳಿದ ವರ್ಗಗಳ 2-ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಪಂಚಮಸಾಲಿ ಸಮುದಾಯದವರು ಬೆಂಗಳೂರು ಅರಮನೆ ಮೈದಾನದಲ್ಲಿ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಸಿದರು.

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಖಡ್ಗ ಝಳಪಿಸುವ ಮೂಲಕ ಸಮಾವೇಶವನ್ನು ಉದ್ಘಾಟಿಸಿದರು. ಹೋರಾಟ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಕಹಳೆ ಊದಿದರು. ವೇದಿಕೆಯಲ್ಲಿದ್ದ ಸ್ವಾಮೀಜಿಗಳು ಪಾಂಚಜನ್ಯ ಮೊಳಗಿಸಿದರು. ಸಮಾವೇಶಕ್ಕಾಗಿ ಕರ್ನಾಟಕ ಮಾತ್ರವಲ್ಲದೆ, ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿನಿಂದಲೂ ಪಂಚಮ ಸಾಲಿ ಸಮಾಜದವರು ಲಕ್ಷಾಂತರ ಮಂದಿ ಸಾಗರೋಪಾದಿಯಲ್ಲಿ ಆಗಮಿಸಿ ದ್ದರು. ಈ ಸಮಾವೇಶದಲ್ಲಿ ಮಾತನಾಡಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು, ನಮ್ಮ ಸಮುದಾಯಕ್ಕೆ ಪ್ರವರ್ಗ 2-ಎ ಮೀಸಲಾತಿ ಸಿಗುವವರೆಗೂ ಮಠಕ್ಕೆ ಮರಳುವುದಿಲ್ಲ. ಮೌರ್ಯ ಸರ್ಕಲ್‍ನಲ್ಲಿ ಮಾರ್ಚ್ 4ರವರೆಗೆ ಸತ್ಯಾಗ್ರಹ ಮಾಡುತ್ತೇನೆ. ಆಗಲೂ ಬೇಡಿಕೆ ಈಡೇರದಿದ್ದರೆ ಆಮರ ಣಾಂತ ಉಪವಾಸ ಕೈಗೊಳ್ಳುತ್ತೇನೆ ಎಂದು ಘೋಷಿಸಿದರು. ಪಾದಯಾತ್ರೆ ಆರಂಭಿಸುವಾಗ ಭಕ್ತರ ಜೊತೆ ಒಬ್ಬನೇ ಇದ್ದೆ. ದಾವಣಗೆರೆ ತಲುಪಿದಾಗ ವಚನಾನಂದ ಶ್ರೀಗಳು ಜೊತೆಯಾದರು. ವಿಜಯಾನಂದ ಕಾಶಪ್ಪನವರ್ ಪಂಚಮಸಾಲಿಗರ ಬಲಗೈ ಭಂಟ. ನಮ್ಮ ಪರವಾಗಿ

ಸಂಪುಟ ಸಭೆಯಲ್ಲಿ ಸಚಿವರಾದ ಸಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ ಧ್ವನಿ ಎತ್ತಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಯಾವುದೇ ಅಡ-ತಡೆ ಇಲ್ಲದೆ ಪಾದಯಾತ್ರೆ ಮಾಡಿದ್ದೇನೆ. ಭಕ್ತರು ದೇವರ ರೂಪದಲ್ಲಿ ಬಂದಿದ್ದಕ್ಕೆ ಪಾದಯಾತ್ರೆ ಯಶಸ್ವಿಯಾಗಿದೆ. ಸಮಾಜದ ಋಣವನ್ನು ತೀರಿಸಲು ಈ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ. ಈಗ ಮುಖ್ಯಮಂತ್ರಿ ಯಡಿಯೂರಪ್ಪರಿಂದ ನ್ಯಾಯ ಸಿಗಬೇಕು. ನಮ್ಮ ಸಮಾಜಕ್ಕೆ 2-ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ನಾನು ಮಠ ಕಟ್ಟಿಲ್ಲ ಎಂದು ಸಮುದಾಯದವರು ಹೇಳುತ್ತಿದ್ದರು. ನಿಮಗಾಗಿ ಪಾದಯಾತ್ರೆ ಹೋರಾಟ ಮಾಡಿದ್ದೇನೆ. ಮೀಸಲಾತಿ ನೀಡಿದ್ದಕ್ಕೆ ಡಾ. ಅಂಬೇಡ್ಕರ್ ಇತಿಹಾಸದಲ್ಲಿದ್ದಾರೆ. ಇನ್ನು ಮುಂದೆ ಮಠ ಕಟ್ಟುವ ಕೆಲಸವನ್ನೂ ಮಾಡುತ್ತೇನೆ. ಅದಕ್ಕಾಗಿ ಜುಲೈ 23ರಿಂದ ಅಕ್ಟೋಬರ್ 23ರವರೆಗೆ ರಥಯಾತ್ರೆ ಮಾಡುತ್ತೇನೆ ಎಂದು ಘೋಷಿಸಿದರು. ಪಂಚಮಸಾಲಿ ಸಮುದಾಯಕ್ಕೂ ನ್ಯಾಯ ಸಿಗಬೇಕು. ಪಂಚಮಸಾಲಿಗಳು ಒಗ್ಗಟ್ಟಾಗಿ ಇರುವ ಸಂದೇಶ ರವಾನೆ ಆಗಬೇಕಾಗಿದೆ. ಈ ಸಮಾವೇಶದ ಮೂಲಕ ಪ್ರಧಾನಿ ಮೋದಿಯವರಿಗೆ ನಮ್ಮ ಒಗ್ಗಟ್ಟಿನ ಸಂದೇಶ ರವಾನೆಯಾಗಿದೆ ಎಂದರು.

ಬಸವಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಸ್ವಾಮೀಜಿಗಳ ನೇತೃತ್ವದಲ್ಲಿ ಐತಿಹಾಸಿಕ ಹೋರಾಟ ನಡೆದಿದೆ. ನಮ್ಮಲ್ಲೇ ಎರಡು ಗುಂಪು ಮಾಡಿ ಹೋರಾಟ ಒಡೆಯಲು ಸರ್ಕಾರ ಪ್ರಯತ್ನಿಸಿದರೂ ಕೂಡ ನಮ್ಮ ಸಮಾಜ ಒಗ್ಗಟ್ಟು ಕಾಪಾಡಿಕೊಂಡಿದೆ. ಸದನದಲ್ಲಿ ಮೀಸಲಾತಿ ಬಗ್ಗೆ ಸ್ಪಷ್ಟನೆ ನೀಡುವಂತೆ ಆಗ್ರಹಿಸುತ್ತೇವೆ. ಸಿಎಂ ಯಡಿಯೂರಪ್ಪ ಅವರಿಗೆ ಒತ್ತಡ ಹೇರುತ್ತೇವೆ ಎಂದರು. ಮೀಸಲಾತಿ ನೀಡಲು ಯಡಿಯೂರಪ್ಪ ಅವರಿಗೆ ಮನಸ್ಸಿಲ್ಲ. ಹೋರಾಟಕ್ಕೆ ಹೋಗಬೇಡಿ ಎಂದು ಇಬ್ಬರು ಸಚಿವರಿಗೆ ಖುದ್ದು ಅವರೇ ಹೇಳಿದ್ದಾರೆ. ಮುಖ್ಯಮಂತ್ರಿಗಳು ಮತ್ತೆ ಕೇಂದ್ರದತ್ತ ಬೊಟ್ಟು ಮಾಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಇಬ್ಬರು ಸಚಿವರಿಗೂ ಹೇಳಿದ್ದೇವೆ ಎಂದು ಹೇಳಿದರು.

ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಮೀಸಲಾತಿ ಸಿಗುವವರೆಗೆ ಸರ್ಕಾರವನ್ನು ಸುಮ್ಮನೆ ಬಿಡಬಾರದು. ಈ ಹೋರಾಟಕ್ಕೆ 2 ಪಂಚಮಸಾಲಿ ಪೀಠಗಳು ಒಂದಾಗಿವೆ. ಇಂದು ಪೂಜ್ಯರು ಹೇಳಿದಂತೆ ನಾವು ಮುಂದೆ ಸಾಗೋಣ. ವಿಧಾನಸೌಧದ ಮುಂದೆ ಧರಣಿ ಸತ್ಯಾಗ್ರಹ ಮಾಡೋಣ. ಮಾರ್ಚ್ 4ರವರೆಗೆ ಧರಣಿ ಸತ್ಯಾಗ್ರಹ ಮಾಡೋಣ. ನಂತರ ಉಪವಾಸ ಸತ್ಯಾಗ್ರಹ ಮಾಡೋಣ ಎಂದು ಸಮುದಾಯಕ್ಕೆ ಕರೆ ನೀಡಿದರು. ಅಗತ್ಯ ಬಿದ್ದರೆ ರಾಜಕೀಯ ಬೇಕಾದರೂ ತೊರೆಯುತ್ತೇನೆ. ಆದರೆ ಪಂಚಮಸಾಲಿ ಸಮುದಾಯವನ್ನು ಮಾತ್ರ ಬಿಡುವುದಿಲ್ಲ. ಬೇಕೇ ಬೇಕು ನಮಗೆ ಮೀಸಲಾತಿ ಬೇಕು ಎಂದು ಅವರು ಘೋಷಣೆ ಕೂಗಿದರು.

ಸಮಾವೇಶದ ಕೊನೆಗೆ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ವಿಜಯಾನಂದ ಕಾಶಪ್ಪನವರ್ ಹೆಸರು ಘೋಷಣೆಯಾಗಿದೆ. ಬಸವ ಜಯಮೃತ್ಯುಂಜಯ ಸ್ವಾಮೀಜಿ ಈ ವಿಚಾರವನ್ನು ಸಮಾವೇಶದಲ್ಲಿ ಅಧಿಕೃತವಾಗಿ ಘೋಷಿಸಿದರು.

ಪಾದಯಾತ್ರೆ: ಸಮಾವೇಶದ ನಂತರ ಪಂಚಮಸಾಲಿ ಸಮಾಜದವರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ಹೊರಟರು. ಅನಿರೀಕ್ಷಿತವಾಗಿ ನಡೆದ ಈ ಘಟನೆಯಿಂದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೊಂದಲಕ್ಕೊಳಗಾದರು. ಇದಕ್ಕೂ ಮುನ್ನವೇ ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ತಡೆಯಲು ಪೊಲೀಸ್ ಪಡೆ ಸಜ್ಜುಗೊಳಿಸಿದ್ದರು.

ಪಾದಯಾತ್ರೆ ಕಾವೇರಿ ಸರ್ಕಲ್‍ಗೆ ಬಂದಾಗ ಪೊಲೀಸರು ಬ್ಯಾರಿಕೇಡ್‍ಗಳನ್ನು ಹಾಕಿ ಅಡ್ಡಿಪಡಿಸಿದರು. ಈ ವೇಳೆ ಕಮಲ್ ಪಂತ್ ಅವರು ಪಾದಯಾತ್ರೆ ಕೈಬಿಟ್ಟು ವಾಹನದಲ್ಲೇ ಫ್ರೀಡಂ ಪಾರ್ಕ್‍ಗೆ ತೆರಳುವಂತೆ ಸ್ವಾಮೀಜಿಗಳಿಗೆ ಮನವಿ ಮಾಡಿದರು. ಅಷ್ಟರಲ್ಲಾಗಲೇ ಪ್ರತಿಭಟನಾಕಾರರು ಬ್ಯಾರಿಕೇಡ್‍ಗಳನ್ನು ತಳ್ಳಿ ಮುನ್ನುಗ್ಗಿದ್ದರು. ಮತ್ತೆ ಬಿಡಿಎ ಸರ್ಕಲ್‍ನಲ್ಲಿ ಸಹ ಪ್ರತಿಭಟನಾಕಾರರು ಬ್ಯಾರಿಕೇಡ್‍ಗಳನ್ನು ತಳ್ಳಿ ಮುನ್ನುಗ್ಗಿ ಸಾಗಿದರು. ಯಾವುದೇ ಕಾರಣಕ್ಕೂ ಪ್ರತಿಭಟನಾಕಾರರು ಸಿಎಂ ನಿವಾಸದ ಮುಂದೆ ಹೋಗಲು ಬಿಡಬಾರದು ಎಂದು ನಿಶ್ಚಯಿಸಿದ್ದ ಪೊಲೀಸರು, ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಗೂ ವ್ಯಾನ್‍ಗಳನ್ನು ನಿಲ್ಲಿಸಿ ತಡೆಯೊಡ್ಡಿದರು. ಅದೇ ವೇಳೆ ಬಸವ ಜಯಮೃತ್ಯುಂಜಯ ಸ್ವಾಮಿಗಳು, ಪಾದಯಾತ್ರೆ ಶಾಂತಿಯುತವಾಗಿ ನಡೆಯಬೇಕು ಎಂದು ಪ್ರತಿಭಟನಾಕಾರರಿಗೆ ಸಂದೇಶ ರವಾನಿಸಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ರೈಲ್ವೆ ಪ್ಯಾರಲಲ್ ರಸ್ತೆ ಮೂಲಕ ಶಿವಾನಂದ ಸರ್ಕಲ್ ಹಾಗೂ ಆನಂದರಾವ್ ಸರ್ಕಲ್ ಮೂಲಕ ಫ್ರೀಡಂ ಪಾರ್ಕ್ ತಲುಪಿದರು. ಆನಂತರ ಮೌರ್ಯ ಸರ್ಕಲ್‍ನಲ್ಲಿ ಕೆಲ ಸಮಯ ಧರಣಿ ನಡೆಸಿದರು.

Translate »