ಒತ್ತುವರಿ ತೆರವು, ಮನೆ ಮಂಜೂರು, ಅಧಿಕಾರಿಗಳ ವಿಳಂಬ ನೀತಿಗೆ ಸಾರ್ವಜನಿಕರ ತೀವ್ರ ಆಕ್ಷೇಪ
ಮೈಸೂರು

ಒತ್ತುವರಿ ತೆರವು, ಮನೆ ಮಂಜೂರು, ಅಧಿಕಾರಿಗಳ ವಿಳಂಬ ನೀತಿಗೆ ಸಾರ್ವಜನಿಕರ ತೀವ್ರ ಆಕ್ಷೇಪ

February 22, 2022

ಮೈಸೂರು,ಫೆ.21(ಎಂಟಿವೈ)- ಕೆರೆ ಹಾಗೂ ರಸ್ತೆ ಒತ್ತುವರಿ ತೆರವು ಮಾಡದೇ ಇರುವುದು, ಮನೆ ಮಂಜೂರು, ಚರಂಡಿ ನಿರ್ಮಾಣಕ್ಕೆ ಸತಾಯಿ ಸುವುದು, ಜಮೀನಿಗೆ ಸಂಬಂಧಿಸಿದ ದಾಖಲೆ ಮಾಡಿ ಕೊಡಲು ಸತಾಯಿಸುತ್ತಿರುವ ಬಗ್ಗೆ ಸಾರ್ವಜನಿಕರು ಫೋನ್ ಇನ್ ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ನೇರ ಫೆÇೀನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಯಿಂದ 15 ಮಂದಿ ಕರೆ ಮಾಡಿ ವಿವಿಧ ಸಮಸ್ಯೆ ಹಾಗೂ ಬೇಡಿಕೆ ಗಳ ಮನವಿ ಮಾಡಿದರು. ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎ.ಎಂ.ಯೋಗೀಶ್ ಹಾಗೂ ಉಪ ಕಾರ್ಯದರ್ಶಿ ಪ್ರೇಮ್‍ಕುಮಾರ್ ಸಾರ್ವಜನಿಕರ ದೂರು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಹೆಚ್.ಡಿ.ಕೋಟೆ ತಾಲೂಕಿನ ಕಂಚಮಹಳ್ಳಿ ಗ್ರಾಮಸ್ಥ, ಮನೆ ಮಂಜೂರು ಮಾಡಿಸಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಉಪ ಕಾರ್ಯ ದರ್ಶಿ ಮುಂದಿನ ಆರ್ಥಿಕ ವರ್ಷದಲ್ಲಿ ಮನೆ ನೀಡು ವಂತೆ ಗ್ರಾಪಂಗೆ ಸೂಚಿಸುವುದಾಗಿ ತಿಳಿಸಿದರು. ಪಿರಿಯಾಪಟ್ಟಣ ತಾಲೂಕು ನಂದಿಪುರ ಗ್ರಾಮದ ಚಂದ್ರು ಚರಂಡಿ ನಿರ್ಮಿಸುವಂತೆಯೂ ಮನವಿ ಮಾಡಿದರು. ನಂಜನಗೂಡು ತಾಲೂಕು ನವಿಲೂರು ಗ್ರಾಮದ ಮಹೇಶ್ ರಸ್ತೆ ಅಗಲೀಕರಣಕ್ಕೆ ಮನವಿ ಮಾಡಿದರೆ, ಬನ್ನೂರು ಹೋಬಳಿ ಕೊಡಗಳ್ಳಿ ಗ್ರಾಮದ ರಾಮಕೃಷ್ಣ, ಪಿತ್ರಾರ್ಜಿತ ಆಸ್ತಿಯನ್ನು ತಮ್ಮ ಹೆಸರಿಗೆ ಖಾತೆ ಮಾಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತಿ.ನರಸೀಪುರ ತಾಲೂಕಿನ ಸೋಸಲೆ ಮಹದೇವ ಶೆಟ್ಟಿ, ಜನನ ಮರಣ ಪ್ರಮಾಣಪತ್ರವನ್ನು ಗ್ರಾಪಂ ಗಳಲ್ಲಿಯೇ ನೀಡಿದರೆ ಅನುಕೂಲ ಎಂದು ಮನವಿ ಮಾಡಿದರೆ, ಹಿರಿಯೂರು ಗ್ರಾಮದ ವೀರಪ್ಪಸ್ವಾಮಿ ಹಿರಿಯೂರು-ಕೊತ್ತೇಗಾಲ ರಸ್ತೆ ಅಭಿವೃದ್ಧಿಪಡಿಸಿ, ಸರ್ವೆ ನಂ.9ರ ಕೆರೆ ಏರಿ ಒತ್ತುವರಿಯಾಗಿದೆ. ಅದನ್ನು ತೆರವು ಮಾಡುವಂತೆ ಮನವಿ ಮಾಡಿದರು.

ಅಧಿಕಾರಿಗಳ ಭರವಸೆ: ಮೈಸೂರಿನ ನಿವಾಸಿ ಅನುಪಮ ಎಂಬುವರು ಕರೆ ಮಾಡಿ, ಧನಗಳ್ಳಿ ಗ್ರಾಮದಲ್ಲಿರುವ ತಮ್ಮ ನಿವೇಶನಕ್ಕೆ 11 ಬಿ ನೀಡಲು ಅಧಿಕಾರಿಗಳು ಸಾಕಷ್ಟು ಹಣ ಪಡೆದುಕೊಂಡರು. ಅಲ್ಲದೆ, ಕಚೇರಿಗೆ ಹಲವು ಬಾರಿ ಅಲೆಸಿದರು. ಬಡವರನ್ನು ಈ ಪರಿ ಗೋಳಾಡಿಸುವುದು ನ್ಯಾಯವೇ? ಬಡವರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳ ಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಉಪ ಕಾರ್ಯದರ್ಶಿ ಪ್ರೇಮ್‍ಕುಮಾರ್ ಪ್ರತಿಕ್ರಿಯಿಸಿ, ಲಂಚ ಸ್ವೀಕರಿಸುವುದು ಮಾತ್ರವಲ್ಲ, ಕೊಡುವುದೂ ಅಪರಾಧ. ನಿಮಗೆ ಅನ್ಯಾಯವಾಗಿದ್ದರೆ ಮೇಲಿನ ಸಂಸ್ಥೆಗಳಿಗೆ ದೂರು ನೀಡಬಹುದು. ಜಿಲ್ಲಾ ಪಂಚಾಯಿತಿ ನಿಮ್ಮ ಸಮಸ್ಯೆಯನ್ನು ಸಂಬಂಧಪಟ್ಟವರ ಗಮನಕ್ಕೆ ತರಲಿದೆ ಎಂದು ಆಶ್ವಾಸನೆ ನೀಡಿದರು.

ಮಾನಸಿನಗರದ ನಿವಾಸಿ ವಿಜಯ್‍ಕುಮಾರ್, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ, ಟೆರೆಷಿಯನ್ ಕಾಲೇಜಿನಿಂದ ಮಾನಸಿನಗರಕ್ಕೆ ಬಸ್ ಓಡಿಸುವಂತೆ ಕೋರಿದರು. ಮೈಸೂರಿನ ಶ್ರೀನಗರದ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕೆಂಬ ವಾಣಿ ಅವರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು, ನಿಮ್ಮ ಬಡಾವಣೆ ಮುಡಾ ವ್ಯಾಪ್ತಿಗೆ ಬರುತ್ತದೆ. ಅಲ್ಲಿ ಮನವಿ ಸಲ್ಲಿಸುವಂತೆ ಸಲಹೆ ನೀಡಿದರು.

ಮೈಸೂರು ತಾಲೂಕಿನ ದಡದಹಳ್ಳಿ ಗ್ರಾಮದ ಸುನಿಲ್, ಸಿಂಧುವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 5 ವರ್ಷದ ಹಿಂದೆ 20×30 ನಿವೇಶನ ಖರೀದಿಸಿದ್ದೇವೆ. ಆ ಜಾಗ ಸರ್ವೇ ನಂಬರ್‍ನಲ್ಲಿದೆ. ಅಕ್ರಮ ಸಕ್ರಮದಲ್ಲಿ ಬದಲಾಯಿಸಿ ಕೊಳ್ಳಬಹುದೇ? ಎಂದು ಕೇಳಿದರು. ಇದಕ್ಕೆ, ಉಪ ಕಾರ್ಯ ದರ್ಶಿ ಪ್ರೇಮ್‍ಕುಮಾರ್ ಸರ್ವೆ ನಂಬರ್‍ನಲ್ಲಿರುವ ಆಸ್ತಿ ಕ್ರಮಬದ್ಧವಲ್ಲ. ಸರ್ಕಾರ ಅಕ್ರಮ ಸಕ್ರಮಕ್ಕೆ ಅರ್ಜಿ ಕರೆದಾಗ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.

ಫೋನ್ ಇನ್ ಕಾರ್ಯಕ್ರಮದಲ್ಲಿ ಜಿ.ಪಂ ಸಹಾಯಕ ಕಾರ್ಯದರ್ಶಿ ಕುಲದೀಪ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರುದ್ರೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಸವರಾಜು, ಡಿಡಿಪಿಯು ಶ್ರೀನಿವಾಸ್, ಡಿಡಿಪಿಐ ರಾಮರಾಜೇ ಅರಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಕೆ.ಸುರೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

Translate »