ಮೈಸೂರು: ಮುಡಾದಿಂದ ಕೈಗೊಂಡಿದ್ದ ಮೈಸೂರಿನ ಬನ್ನಿಮಂಟಪದಲ್ಲಿರುವ ದಸರಾ ಪಂಜಿನ ಕವಾಯತು ಮೈದಾನದ (dasara torch light parade grounds) ಆಸನ ಸಾಮಥ್ರ್ಯ ಹೆಚ್ಚಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಈ ಬಾರಿಯ ದಸರಾಗೆ ಬಳಕೆಗೆ ಸಿದ್ಧವಾಗಿದೆ.
ಈ ಹಿಂದೆ ಕೇವಲ 22,000 ಮಂದಿ ಕುಳಿತು ಪಂಜಿನ ಕವಾಯತು ವೀಕ್ಷಿಸುತ್ತಿದ್ದರು. ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮಕ್ಕೆ ಬರುವ ಜನಸಂಖ್ಯೆ ಹೆಚ್ಚಾಗಿದ್ದು, ಬೇಡಿಕೆಯೂ ಜಾಸ್ತಿಯಾದ ಹಿನ್ನೆಲೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ವು ಆಸನ ಸಾಮಥ್ರ್ಯವನ್ನು 22 ಸಾವಿರದಿಂದ 33,500ಕ್ಕೆ ಹೆಚ್ಚಿಸಲು ತೀರ್ಮಾನಿಸಿತ್ತು.
ಯೋಜನೆಗೆ ಅಂದಾಜು ತಯಾರಿಸಿ ಡಿಪಿಆರ್‍ಗೆ ಅನುಮೋಧನೆ ನೀಡಿದ್ದ ಮುಡಾ, 6.5 ಕೋಟಿ ರೂ. ಕಾಮಗಾರಿಗೆ ಸರ್ಕಾರದಿಂದ ಆಡಳಿತಾತ್ಮಕ ಹಾಗೂ ತಾಂತ್ರಿಕ ಅನುಮೋಧನೆ ಪಡೆದು 2016ರಲ್ಲಿ ಟೆಂಡರ್ ಮೂಲಕ ಸ್ಕಿಲ್‍ಟೆಕ್ ಇಂಜಿನಿಯರಿಂಗ್ ಕಂಪನಿಗೆ ಕೆಲಸವನ್ನು ಒಪ್ಪಿಸಿತ್ತು.
ಪ್ರಸ್ತುತ ಇರುವ ಕಲ್ಲುಮೆಟ್ಟಿಲುಗಳಿಗೆ ಹೊಂದಿಕೊಂಡಂತೆ ಎತ್ತರಕ್ಕೆ ಸಿಮೆಂಟ್ ಕಾಂಕ್ರಿಟ್ ಪಿಲ್ಲರ್‍ಗಳು, ಅಡ್ಡಡ್ಡ ಬೀಮ್ ಹಾಗೂ ಸ್ಲ್ಯಾಬ್‍ಗಳನ್ನು ಹಾಕುವ ಮೂಲಕ ಇದೀಗ 11,500 ಹೆಚ್ಚುವರಿ ಆಸನಗಳನ್ನು ಸಿದ್ಧಪಡಿಸಲಾಗಿದೆ. ಈಗ ಏಕ ಕಾಲದಲ್ಲಿ 33,500 ಮಂದಿ ಕುಳಿತು ದಸರಾ ಪಂಜಿನ ಕವಾಯತು ಪ್ರದರ್ಶನ ವೀಕ್ಷಿಸಬಹುದಾಗಿದೆ.
ಸಿವಿಲ್ ಕಾಮಗಾರಿ (700 ಮೀ. ಉದ್ದ) ಸಂಪೂರ್ಣ ಮುಗಿದಿದ್ದು, ಕೇವಲ ಬಣ್ಣ ಬಳಿಯುವುದು ಮಾತ್ರ ಬಾಕಿ ಇದೆ. ಈಗಾಗಲೇ ಯಾವ ಬಣ್ಣ ಹೊಡೆಯಬೇಕೆಂಬುದನ್ನು ನಿರ್ಧರಿಸಲಾಗಿದ್ದು, ಇನ್ನೊಂದು ವಾರದೊಳಗಾಗಿ ಪೇಂಟಿಂಗ್ ಕೆಲಸವೂ ಪೂರ್ಣಗೊಳ್ಳಲಿದೆ ಎಂದು ಮುಡಾ ಸೂಪರಿಂಟೆಂಡಿಂಗ್ ಇಂಜಿನಿಯರ್ ಬಿ.ಕೆ.ಸುರೇಶ್ ಬಾಬು ಅವರು ತಿಳಿಸಿದ್ದಾರೆ.
ಮೈದಾನದ ಒಳ ಸುತ್ತಳತೆ 700 ಮೀಟರ್‍ಗಳಿದ್ದು, ಆ ಪೈಕಿ ಬನ್ನಿಮಂಟಪ ಬಡಾವಣೆ ಮತ್ತು ಸೆಂಟ್ ಫಿಲೋಮಿನಾ ಕಾಲೇಜು ಕಡೆ ಅರ್ಧ ಭಾಗಕ್ಕೆ (350 ಮೀ.) ಮಾತ್ರ 11,500 ಹೆಚ್ಚುವರಿ ಆಸನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ ಮೈದಾನದ ಪೂರ್ಣಭಾಗ (ಆಸನಗಳ ಮುಂದೆ) ಅಂದರೆ 700 ಮೀಟರ್ ಉದ್ದಕ್ಕೂ ಖಾಯಂ ತಂತಿ ಬೇಲಿ ಮತ್ತು ಎಲೆಕ್ರ್ಟಿಕ್ ಕೇಬಲ್‍ಗಳನ್ನು 24 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾಗುತ್ತಿದೆ. ಗುತ್ತಿಗೆದಾರರ ಜಯರಾಮಚಾರಿ ಎಂಬುವರು ಕಾಮಗಾರಿ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಅದೇ ರೀತಿ ಆಸನಗಳಿರುವ ಹಿಂಭಾಗದ ಜಾಗದಲ್ಲಿ ಹಸಿರು ಹುಲ್ಲಿ ಹಾಸು ಹಾಕಿ ನಿರ್ವಹಣೆ ಮಾಡಲಾಗುವುದು. ಹಾಗೂ ಮಳೆ ನೀರು ಹರಿದು ಹೋಗಲು ಕಾಂಕ್ರಿಟ್ ಬಾಕ್ಸ್ ಡ್ರೇನು ನಿರ್ಮಿಸುವ ಕೆಲಸವೂ ಸಹ ತೀವ್ರ ಗತಿಯಿಂದ ನಡೆಯುತ್ತಿದೆ ಎಂದು ಸುರೇಶ್ ಬಾಬು ಅವರು ತಿಳಿಸಿದರು.
ಒಟ್ಟು 86 ಸಿಮೆಂಟ್ ಕಾಂಕ್ರಿಟ್ ಪಿಲ್ಲರ್‍ಗಳು ಹಾಗೂ 14.11 ಮೀಟರ್ ಉದ್ದದ 173 ಬೀಮ್ ಮತ್ತು ಸ್ಲ್ಯಾಬ್‍ಗಳನ್ನು ಹಾಕಿ ಅದರ ಮೇಲೆ ಆಸನಗಳನ್ನು ನಿರ್ಮಿಸಬೇಕಾದ ಕಾರಣ ತಂತ್ರಜ್ಞಾನ ಬಳಕೆ ಅಗತ್ಯವಾದ್ದರಿಂದ ಈ ಕಾಮಗಾರಿ ಪೂರ್ಣಗೊಳ್ಳಲು ವಿಳಂಬವಾಯಿತು ಎಂದು ಅವರು ತಿಳಿಸಿದರು.
ದಸರಾ ಒಳಗಾಗಿ ಸುತ್ತಲಿನ ಕಾಂಪೌಂಡ್‍ಗೆ ಹಾಕಿರುವ ಮಂಗಳೂರು ಹಂಚಿನ ಛಾವಣೆ ತೆಗೆದು ಹಾಕಿ ಅದೇ ಮಾದರಿಯಲ್ಲಿ ಕಾಂಕ್ರಿಟ್ ಹಾಕಿ ಅದಕ್ಕೆ ಹಂಚಿನ ಬಣ್ಣ ಬಳಿಯಲಾಗುವುದು ಎಂದು ಅವರು ತಿಳಿಸಿದರು. ಈಗಿರುವ ಕಾಂಪೌಂಡ್ ಮೇಲಿನ ಹೆಂಚನ್ನು ಅಲ್ಲಲ್ಲಿ ಕಿತ್ತೊಯ್ದಿರುವುದರಿಂದ ಈ ಕ್ರಮ ಅನಿವಾರ್ಯ ಎಂದ ಅವರು, ಇಡೀ ದಸರಾ ಟಾರ್ಚ್ ಲೈಟ್ ಪರೇಡ್ ಗ್ರೌಂಡ್‍ಗೆ ಬಣ್ಣ ಬಳಿದು ಶೃಂಗರಿಸಲಾಗುವುದು ಎಂದರು.