ಮೈಸೂರು, ಜೂ.22 (ಎಂಕೆ)- ಮನೆಗಳ ಸುತ್ತಲೂ ತಿಪ್ಪೆಗುಂಡಿಗಳ ರಾಶಿ ರಾಶಿ, ದುರ್ವಾಸನೆಗೆ ಕಂಗಾ ಲಾಗಿರುವ ನಿವಾಸಿಗಳು, ಜಾರಿಯಾಗದ ಸ್ವಚ್ಛ ಭಾರತ್ ಮಿಷನ್! ಇದೆಲ್ಲವೂ ಮೈಸೂರಿನ ಆಲನಹಳ್ಳಿ ಗ್ರಾಮದ ಬೀದಿಯೊಂದರ ದುಸ್ಥಿತಿ.
ಆಲನಹಳ್ಳಿ ಗ್ರಾಪಂ ಸಮೀಪದ ನೀರಿನ ಟ್ಯಾಂಕ್ ಬಳಿಯ ಬೀದಿಯೊಂದರ ಹತ್ತಾರು ಮನೆಗಳ ನಿವಾಸಿ ಗಳು ನಿತ್ಯ ಅನೈರ್ಮಲ್ಯ, ದುರ್ವಾಸನೆ ನಡುವೆ ಕಾಲ ಕಳೆಯುವಂತಾಗಿದೆ. ಮನೆಗಳ ಸುತ್ತಲು ದನ-ಕರು, ಕುರಿ-ಮೇಕೆಗಳ ಸಗಣಿಯ ತಿಪ್ಪೆಗುಂಡಿಗಳ ಜೊತೆಗೆ ಚರಂಡಿ ನೀರು ಬೆರೆತು ದುರ್ವಾಸನೆ ಬೀರುತ್ತಿದ್ದು, ಉಸಿ ರಾಡುವುದಕ್ಕೂ ಕಷ್ಟ ಪಡುವಂತಾಗಿದೆ.
ಅಡುಗೆ ಮನೆÀಗೆ ಹೊಂದಿಕೊಂಡಂತೆ ಮನೆ ಹಿಂಬದಿ ಮತ್ತು ಅಕ್ಕಪಕ್ಕದಲ್ಲಿಯೂ ತಿಪ್ಪೆಗುಂಡಿಗಳಿವೆ. ಅಲ್ಲಿ ಸಗಣಿ ಯನ್ನಷ್ಟೇ ಅಲ್ಲದೆ ದುರ್ವಾಸನೆ ಬೀರುವ ಕಸವನ್ನು ಸುರಿ ಯುತ್ತಿದ್ದಾರೆ. ಇದರಿಂದ ಮನೆಯೊಳಗೆಲ್ಲಾ ದುರ್ವಾಸನೆ ಹರಡುತ್ತಿರುವುದು ನಮ್ಮನ್ನು ಪೀಡಿಸುತ್ತಿದೆ ಎಂದು ಗ್ರಾಮದ ನಿವಾಸಿ ಮಂಜುಳಾ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.
ಮನವಿ: ಮನೆಗಳ ಸುತ್ತಮುತ್ತಲು ಇರುವ ತಿಪ್ಪೆಗುಂಡಿ ಗಳನ್ನು ತೆರವುಗೊಳಿಸಿ ಎಂದು ಐದಾರು ವರ್ಷಗಳಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಓ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಒಮ್ಮೆ ತೆರವುಗೊಳಿಸುವುದಾಗಿ ಬಂದ ಗ್ರಾಪಂ ಸಿಬ್ಬಂದಿ ಅರ್ಧ ತಿಪ್ಪೆಗುಂಡಿ ಕಸವನ್ನು ಟ್ರ್ಯಾಕ್ಟರ್‍ಗೆ ತುಂಬಿಕೊಂಡು ನಂತರ ಯಾವುದೋ ಕಾರಣಕ್ಕೆ ಮತ್ತೆ ಅಲ್ಲಿಯೇ ಸುರಿದು ಹೋದರು. ಕೇಳಿದರೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಮಾಹಿತಿ ನೀಡಿದರು.
ಮಳೆ ನೀರು ಮತ್ತು ಚರಂಡಿ ನೀರು ಕೂಡ ತಿಪ್ಪೆಗುಂಡಿ ಯಲ್ಲಿ ನಿಂತಿದ್ದು, ಗಿಡ-ಗಂಟಿಗಳು ಬೆಳೆದು ನಿಂತಿವೆ. ವಿಪರೀತ ದುರ್ವಾಸನೆ, ಸೊಳ್ಳೆಗಳ ಕಾಟವೂ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಅತಿಯಾದ ಸೊಳ್ಳೆಗಳ ಕಾಟದಿಂದ ಮನೆಯಲ್ಲಿರುವ ಮಕ್ಕಳು ಕಾಯಿಲೆ ಬೀಳುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು. ಕೆಲ ತಿಂಗಳುಗಳ ಹಿಂದೆಯೇ ಮನೆ ಗಳ ಸುತ್ತಲಿರುವ ತಿಪ್ಪೆಗುಂಡಿಗಳನ್ನು ತೆರವುಗೊಳಿಸಿ ಎಂದು ಮನವಿ ಮಾಡಿದ್ದರು. ಈ ಸಂಬಂಧ ಗ್ರಾಪಂ ಅಧ್ಯಕ್ಷ ರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದೆವು. ಆದರೆ ತೆರವು ಗೊಳಿಸುವ ಕೆಲಸವಾಗಿರಲಿಲ್ಲ. ಮತ್ತೆ ತಿಪ್ಪೆಗುಂಡಿಗಳನ್ನು ತೆರವುಗೊಳಿಸುವಂತೆ ಗ್ರಾಪಂ ಸಿಬ್ಬಂದಿಗಳಿಗೆ ಸೂಚಿಸ ಲಾಗುವುದು ಎಂದು ಗ್ರಾಪಂ ಉಪಾಧ್ಯಕ್ಷೆ ರಾಣಿ ತಿಳಿಸಿದರು.