ಕಲಾಮಂದಿರದಲ್ಲಿ ‘ಟಿಪ್ಪು ನಿಜಕನಸುಗಳು’ ಹೌಸ್‍ಫುಲ್
ಮೈಸೂರು

ಕಲಾಮಂದಿರದಲ್ಲಿ ‘ಟಿಪ್ಪು ನಿಜಕನಸುಗಳು’ ಹೌಸ್‍ಫುಲ್

December 2, 2022

ಮೈಸೂರು,ಡಿ.1(ಎಂಕೆ)-ಇತಿಹಾಸ ತಿಳಿಯುವ ಹಂಬಲ… ಸತ್ಯ ಅರಿ ಯುವ ಕುತೂಹಲ… ಹೊಸ ಪ್ರಯತ್ನವನ್ನು ಕಣ್ತುಂಬಿಕೊಳ್ಳುವ ಕಾತುರ…!
ಕಲಾಮಂದಿರದಲ್ಲಿ 7ನೇ ಪ್ರದರ್ಶನ ಕಂಡ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ರಚಿತ ‘ಟಿಪ್ಪು ನಿಜಕನಸುಗಳು’ ನಾಟಕ ವೀಕ್ಷಣೆಗೆ ದೌಡಾಯಿಸಿ ಬಂದ ರಂಗ ಪ್ರೇಕ್ಷಕರಾಡಿದ ಮಾತುಗಳಿವು. 1200ಕ್ಕೂ ಹೆಚ್ಚು ಜನರ ಸಮೂಹದ ನಡುವೆ ಪ್ರದರ್ಶನಗೊಂಡ ‘ಟಿಪ್ಪು ನಿಜಕನಸುಗಳು’ ನಾಟಕ ಅಪಾರ ಜನಮನ್ನಣೆ ಗಳಿಸಿದ್ದು, ಜನಸಮೂಹವನ್ನು ತನ್ನತ್ತ ಸೆಳೆಯುತ್ತಿದೆ.

ಮೈಸೂರಿನ ವಿವಿಧೆಡೆ, ಕೊಡಗು, ಹುಣಸೂರು ಸೇರಿದಂತೆ ಜಿಲ್ಲೆಯ ಸುತ್ತಮುತ್ತಲಿನಿಂದ ನಾಟಕ ವೀಕ್ಷಣೆಗೆ ಆಗಮಿಸುತ್ತಿರುವ ರಂಗಭೂಮಿ ಅಭಿಮಾನಿಗಳು ‘ಟಿಪ್ಪು ನಿಜಕನಸುಗಳ’ ನಾಟಕ ನೋಡುವ ಕುತೂ ಹಲಕ್ಕೆ ಕಾರಣವನ್ನು ‘ಮೈಸೂರು ಮಿತ್ರ’ನಲ್ಲಿ ಹಂಚಿಕೊಂಡಿದ್ದಾರೆ.

ಕೊಡವ ದಂಪತಿಗಳಾದ ಕುಟ್ಟಪ್ಪ ಮತ್ತು ಕಾವ್ಯ ಕುಟ್ಟಪ್ಪ ಮಾತನಾಡಿ, ಮೊದಲಿನಿಂದಲೂ ಅಡ್ಡಂಡ ಸಿ.ಕಾರ್ಯಪ್ಪ ನಿರ್ದೇಶನದ ನಾಟಕ ಗಳನ್ನು ಇಷ್ಟಪಟ್ಟು ನೋಡುತ್ತಿದ್ದೆವು. ಟಿಪ್ಪುವಿನಿಂದ ನಮ್ಮ ಕುಟುಂಬದ 200 ಮಂದಿ ಬಲಿಯಾಗಿದ್ದಾರೆ. 22 ಮಕ್ಕಳ ಮಾರಣಹೋಮ ಮಾಡ ಲಾಗಿತ್ತು. ಇಂದು ಆ ಮಕ್ಕಳ ಸ್ಮರಣಾರ್ಥ ಕಲ್ಲುಗಳನ್ನು ನೆಟ್ಟು ಪೂಜಿಸುತ್ತಿ ದ್ದೇವೆ. ಟಿಪ್ಪು ಆಡಳಿತದ ಸತ್ಯಾಂಶವನ್ನು ತಿಳಿಸುವ ಈ ನಾಟಕ ಪ್ರದರ್ಶನ ಮಾಡುತ್ತಿರುವುದು ಒಳ್ಳೆಯ ಸಂಗತಿಯಾಗಿದೆ ಎಂದು ತಿಳಿಸಿದರು.

ನಾಟಕದ ಬಗ್ಗೆ ತುಂಬಾ ಕೇಳಿದ್ದೇವೆ. ನಾಟಕ ನೋಡಿದ ಸಾಕಷ್ಟು ಜನರು ನೀವು ಒಮ್ಮೆ ನೋಡಿ ಎನ್ನುತ್ತಿದ್ದರು. ಆದ್ದರಿಂದ ಕುತೂಹಲ ಹೆಚ್ಚಾಗಿ ನಾಟಕ ನೋಡಲು ಬಂದಿದ್ದೇವೆ ಎಂದು ಮೈಸೂರು ವಿವಿ ಸಂಶೋಧನಾ ವಿದ್ಯಾರ್ಥಿ ಮೈನಾ ಮತ್ತು ಅವರ ಸ್ನೇಹಿತೆ ಚಂದ್ರಿಕಾ ಹೇಳಿದರೆ, ಟಿಪ್ಪು ಸುಲ್ತಾನ್ ಬಗ್ಗೆ ಪುಸ್ತಕಗಳಲ್ಲಿ ಓದಿದ್ದೇವೆ. ಆದರೆ ನಾಟಕದಲ್ಲಿ ಏನಿದೆ ಎಂಬುದನ್ನು ಅರಿ ಯಲು ಬಂದಿದ್ದೇವೆ. ಸತ್ಯಾಂಶ ತಿಳಿದರೆ ನಾವು ಜಾಗೃತರಾಗಬಹುದು ಎಂದು ಮೈಸೂರಿನ ರಾಧ, 86 ವರ್ಷದ ಅನುಸೂಯಮ್ಮ ತಿಳಿಸಿದರು.

ನಿಜಾಂಶ ತಿಳಿಯಬೇಕು. ಪುಸ್ತಕದಲ್ಲಿ ಓದಿದ್ದೇವೆ. ಆದರೆ ನಾಟಕದಲ್ಲಿ ಇರುವ ಸಂಗತಿಯೇ ಬೇರೆ ಎನ್ನಲಾಗಿದೆ. ಆದ್ದರಿಂದ ‘ಟಿಪ್ಪು ನಿಜಕನಸು ಗಳು’ ನಾಟಕ ನೋಡಲು ಕುಟುಂಬ ಸಮೇತ ಹುಣಸೂರಿನಿಂದ ಬಂದಿದ್ದೇವೆ ಎಂದು ಅರುಣ್ ಚೌಹಾಣ್ ತಿಳಿಸಿದರೆ, ರಂಗಾಯಣದಲ್ಲಿ ನಾಟಕ ನೋಡಬೇಕು ಎಂದು ವೆಬ್‍ಸೈಟ್ ಚೆಕ್ ಮಾಡುತ್ತಿದ್ದೇವು. ಸ್ನೇಹಿತರು ಹೇಳಿದ್ದರಿಂದ ಆನ್‍ಲೈನ್ ಮೂಲಕವೇ ಟಿಕೆಟ್ ಖರೀದಿಸಿ ಬಂದಿದ್ದೇವೆ ಎಂದು ವಿದ್ಯಾರ್ಥಿಗಳಾದ ಬಿಂದು, ಅಮೃತ ಹೇಳಿದರು.

ಇತಿಹಾಸ ಗೊತ್ತಾಗಬೇಕಲ್ಲವೇ: 30 ವರ್ಷ ಅಮೇರಿಕಾದಲ್ಲಿದ್ದು, ಸದ್ಯ ಮೈಸೂರಿನ ವಿಜಯನಗರ 2ನೇ ಹಂತದಲ್ಲಿ ನೆಲೆಸಿರುವ ಪದ್ಮಜ ಹಾಗೂ ವೆಂಕಟೇಶ್ ಪ್ರತಿಕ್ರಿಯಿಸಿ, ನಮ್ಮ ಸ್ನೇಹಿತರು ಈಗಾಗಲೇ ಈ ನಾಟಕ ನೋಡಿ ನೀವು ಒಮ್ಮೆ ನಾಟಕ ನೋಡಿಬನ್ನಿ ಎನ್ನುತ್ತಿದ್ದರು. ಅವರ ಮಾತು ಕೇಳಿದ ನಂತರ ಯೂಟ್ಯೂಬ್‍ನಲ್ಲಿ ಚೆಕ್ ಮಾಡಿದಾಗ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರ ನಾಟಕ ಕುರಿತ ವಿಡಿಯೋ ನೋಡಿ, ನಾಟಕ ನೋಡಲು ನಿರ್ಧರಿಸಿದೆವು. ಟಿಪ್ಪು ಕುರಿತ ಇತಿಹಾಸ ತಿಳಿಯುವುದಕ್ಕೆ ಕಾತುರರಾಗಿದ್ದೇವೆ ಎಂದು ಹೇಳಿದರು.

ಸತ್ಯಾಂಶ ಅರಿಯುವುದು ಮುಖ್ಯ: ಟಿಪ್ಪು ಇತಿಹಾಸ ಕುರಿತು ನಾಟಕ ನಿರ್ಮಿಸಿರುವುದು ಖುಷಿಯ ವಿಚಾರವಾಗಿದೆ. ಸತ್ಯಾಂಶ ಅರಿಯುವುದು ಮುಖ್ಯ. ಟಿಪ್ಪು ಕೆಟ್ಟವನೇ ಆಗಿದ್ದರೆ ಮೈಸೂರು, ಶ್ರೀರಂಗಪಟ್ಟಣದಲ್ಲಿ ಬೇರೆ ಜಾತಿಯವರು ಉಳಿಯುತ್ತಿದ್ದರೆ? ಎಂದ ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರೇಗೌಡ, ಕೇರಳ ಹಾಗೂ ಕೊಡಗಿನಲ್ಲಿ ಟಿಪ್ಪು ದಾಳಿ ಮಾಡಿ ರುವುದು ನಿಜ. ಟಿಪ್ಪುವಿನ ಕುರಿತಾದ ಸತ್ಯ ಇತಿಹಾಸ ತಿಳಿದು ಟೀಕೆ ಮಾಡುವುದು ಒಳ್ಳೆಯದು. ಪಾಳೇಗಾರರು, ಸುಲ್ತಾನರು ರಕ್ಷಣೆ ಮಾಡು ತ್ತಿದ್ದರೆ ಹೊರತು ಅವರಿಗೆ ಸಾಮಾಜಿಕ ಜ್ಞಾನದ ಕೊರತೆಯಿತ್ತು ಎಂಬು ದನ್ನು ಇಂತಹ ನಾಟಕಗಳ ಮೂಲಕ ತಿಳಿಯಬಹುದಾಗಿದೆ ಎಂದರು.

ನೆಲದಲ್ಲೇ ಕುಳಿತರು: ಕಿಕ್ಕಿರಿದು ತುಂಬಿದ ಕಲಾಮಂದಿರದಲ್ಲಿ ಕುಳಿತು ಕೊಳ್ಳಲು ಆಸನವಿಲ್ಲದೆ ಸಾಕಷ್ಟು ಮಂದಿ ನೆಲದಲ್ಲೇ ಕುಳಿತು ನಾಟಕ ವೀಕ್ಷಿಸಿದರು. ಸಣ್ಣ ವಯಸ್ಸಿನ ವಿದ್ಯಾರ್ಥಿಗಳಿಂದ ಹಿಡಿದು 90 ವರ್ಷದ ಹಿರಿಯರು ನಾಟಕ ನೋಡಿದರು. ಎಂದಿನಂತೆ ಭದ್ರತೆ ನೀಡಿದ್ದ ಪೊಲೀಸರು, ಎಲ್ಲರನ್ನು ತಪಾಸಣೆಗೊಳಪಡಿಸಿ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರು.

Translate »