ಮೂರು ಕೃಷಿ ತಿದ್ದುಪಡಿ ಕಾಯ್ದೆ ರದ್ದತಿಗೆ  ಸಂಸತ್ ಅಂಗೀಕಾರ
News

ಮೂರು ಕೃಷಿ ತಿದ್ದುಪಡಿ ಕಾಯ್ದೆ ರದ್ದತಿಗೆ ಸಂಸತ್ ಅಂಗೀಕಾರ

November 30, 2021

ನವದೆಹಲಿ, ನ.29- ಚಳಿಗಾಲ ಅಧಿವೇಶನದ ಮೊದಲ ದಿನವಾದ ಸೋಮವಾರ ಸಂಸತ್‍ನ ಉಭಯ ಸದನಗಳಲ್ಲಿ ವಿರೋಧ ಪಕ್ಷಗಳ ಭಾರೀ ಗದ್ದಲದ ನಡುವೆಯೇ ವಿವಾದಿತ ಮೂರು ಕೃಷಿ ತಿದ್ದುಪಡಿ ಕಾಯ್ದೆ ಗಳ ರದ್ದತಿಗೆ ಅಂಗೀಕಾರ ಪಡೆಯಲಾಯಿತು.

ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೃಷಿ ತಿದ್ದುಪಡಿ ಕಾಯ್ದೆಗಳ ರದ್ದತಿ ಕುರಿತು ಪ್ರಸ್ತಾವನೆ ಸಲ್ಲಿಸಿ ದರು. ಈ ವೇಳೆ ಈ ಸಂಬಂಧ ಚರ್ಚೆ ನಡೆಸಬೇಕು ಹಾಗೂ ಸರ್ಕಾರದಿಂದ ವಿವರಣೆ ಬೇಕೆಂದು ಪ್ರತಿಪಕ್ಷಗಳು ತೀವ್ರ ಗದ್ದಲ ಎಬ್ಬಿಸಿದವು. ಗದ್ದಲ ದಿಂದಾಗಿ ಕಲಾಪವನ್ನು ಮೂರು ಬಾರಿ ಮುಂದೂ ಡಲಾಯಿತು. ಕೊನೆಗೆ ಮಧ್ಯಾಹ್ನ 2 ಗಂಟೆಗೆ ಕಲಾಪ ಆರಂಭವಾದಾಗ ಪ್ರತಿಪಕ್ಷಗಳು ಮತ್ತೆ ತೀವ್ರ ಗದ್ದಲವನ್ನುಂಟು ಮಾಡಿದ್ದು, ಇದರ ನಡುವೆಯೇ ಕೃಷಿ ಸಚಿವರ ಪ್ರಸ್ತಾ ವನೆಯನ್ನು ಬಹುಮತದೊಂದಿಗೆ ಅಂಗೀಕರಿಸಲಾಯಿತು. ನಂತರ ಲೋಕಸಭಾಧ್ಯಕ್ಷರು ಕಲಾಪವನ್ನು ನಾಳೆಗೆ ಮುಂದೂಡಿದರು. ರಾಜ್ಯಸಭೆಯಲ್ಲೂ ಕೂಡ ಗದ್ದಲದ ನಡುವೆಯೇ ಪ್ರಸ್ತಾವನೆಯನ್ನು ಅಂಗೀಕರಿಸಲಾಯಿತು.

ಈ ಸಂಬಂಧ ಸುದ್ದಿಗಾರರ ಜೊತೆ ಮಾತನಾಡಿದ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನಖರ್ಗೆ, ಆಡಳಿತ ಪಕ್ಷವಾದ ಬಿಜೆಪಿ ಕಳೆದ ವರ್ಷ ಜಾರಿಗೆ ತಂದಿದ್ದ ಮೂರು ಕೃಷಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆದಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಕಳೆದ ವರ್ಷ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಂಭವಿಸಿದ ಹಲವು ಘಟನೆಗಳ ಬಗ್ಗೆ ಚರ್ಚೆ ನಡೆಸಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ. ಕೃಷಿ ಕಾಯ್ದೆ ಹಿಂಪಡೆದ ಬಗ್ಗೆ, ರೈತರ ಪ್ರತಿಭಟನೆ, ಕನಿಷ್ಟ ಬೆಂಬಲ ಬೆಲೆ ಕುರಿತು ಸರ್ಕಾರದ ಬಳಿ ನಾವು ವಿವರಣೆ ಕೇಳುತ್ತಿದ್ದೇವೆ. ಆದರೆ ಸರ್ಕಾರ ತರಾತುರಿ ಯಿಂದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವ ಪ್ರಸ್ತಾವನೆಗೆ ಅಂಗೀಕಾರ ಪಡೆದಿ ರುವುದು ತಾವು ರೈತರ ಪರವಾಗಿದ್ದೇವೆ ಎಂದು ತೋರಿಸಿಕೊಳ್ಳಲು ಅಷ್ಟೇ ಎಂದರು.

ಸಂಸತ್ ಅಧಿವೇಶನ ಪ್ರಾರಂಭಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂದು ಸಂಸತ್ತಿನ ಬಹಳ ಮುಖ್ಯವಾದ ಅಧಿವೇಶನ. ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಆಚರಣೆ ಸಂದರ್ಭ ದೇಶದ ಜನರ, ರಾಷ್ಟ್ರದ ಹಿತಕ್ಕಾಗಿ ರಚನಾತ್ಮಕ ಚರ್ಚೆ ಅಧಿವೇಶನದಲ್ಲಿ ನಡೆಯುವುದು ಮುಖ್ಯವಾಗುತ್ತದೆ. ದೇಶದ ಸಾಮಾನ್ಯ ಜನರಿಗೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಅವರ ಕನಸನ್ನು ನನಸು ಮಾಡಲು ಸಂಸತ್ ಸದಸ್ಯರು ಪಕ್ಷಬೇಧ ಮರೆತು ಕೈಜೋಡಿಸಬೇಕು. ಸರ್ಕಾರದ ನೀತಿಗಳ ವಿರುದ್ಧ ಧ್ವನಿ ಬಲವಾಗಿರಬೇಕು. ಆದರೆ ಘನತೆಯನ್ನು ಎತ್ತಿಹಿಡಿಯಬೇಕು. ಕಲಾಪ ಹೇಗೆ ಸಾಗಿದೆ ಎಂಬುದು ಮುಖ್ಯವಾಗಬೇಕೇ ಹೊರತು, ಅಡ್ಡಿಪಡಿಸಿದ್ದು ಅಲ್ಲ. ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಿದೆ. ರಾಷ್ಟ್ರೀಯ ಹಿತಾಸಕ್ತಿಯ ವಿಚಾರದ ಬಗ್ಗೆ ಸಂಸತ್‍ನಲ್ಲಿ ಚರ್ಚೆ ನಡೆಯಬೇಕೆಂದು ನಾಗರಿಕರು ಬಯಸುತ್ತಾರೆ ಎಂದರು.

Translate »