ಮೈಸೂರು ತಾಲೂಕು ಕಚೇರಿಗೆ  ಶಾಸಕ ನಾಗೇಂದ್ರ ದಿಢೀರ್ ಭೇಟಿ
ಮೈಸೂರು

ಮೈಸೂರು ತಾಲೂಕು ಕಚೇರಿಗೆ ಶಾಸಕ ನಾಗೇಂದ್ರ ದಿಢೀರ್ ಭೇಟಿ

October 12, 2021

ಮೈಸೂರು, ಅ.11(ಆರ್‍ಕೆಬಿ)- ಪ್ರತಿದಿನ ಸಾರ್ವಜನಿಕರ ಕೆಲಸದಲ್ಲಿ ವಿಳಂಬದ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಮೈಸೂರು ತಾಲೂಕು ಕಚೇರಿಗೆ ಸೋಮವಾರ ದಿಢೀರ್ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಈ ಸಂಬಂಧ ಸಮಾಲೋಚಿಸಿದರು.

ಯಾವುದೇ ನೆಪ ಹೇಳದೇ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ನಿಗದಿತ ಕಾಲಮಿತಿಯಲ್ಲಿ ಕೆಲಸ ಮಾಡಿಕೊಡುವಂತೆ ಅಧಿಕಾರಿಗಳಿಗೆ ಶಾಸಕರು ಇದೇ ವೇಳೆ ತಾಕೀತು ಮಾಡಿದರು. ಕಚೇರಿಯ ಪ್ರಮುಖ ವಿಭಾಗಗಳಿಗೆ ತೆರಳಿದ ಶಾಸಕರು ಅರ್ಜಿ ಹಿಡಿದು ನಿಂತಿದ್ದ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ಶೀಘ್ರ ತಲುಪುವಂತೆ ಹಾಗೂ ಅಗತ್ಯ ಪ್ರಮಾಣಪತ್ರಗಳನ್ನು ಸಕಾಲದಲ್ಲಿ ಕಲ್ಪಿಸುವಂತೆಯೂ ಸೂಚಿಸಿದರಲ್ಲದೆ, ಸರ್ಕಾರದ ಆಡಳಿತ ವೈಖರಿಗೆ ಜನರು ಮೆಚ್ಚುಗೆ ಸೂಚಿಸುವಂತಹ ರೀತಿಯಲ್ಲಿ ಕೆಲಸ ನಿರ್ವಹಿಸುವಂತೆ ಹೆಚ್ಚುವರಿ ತಹಸೀಲ್ದಾರ್ ರೂಪಾ ಅವರಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ, ಬಿಜೆಪಿ ಮುಖಂಡರಾದ ಜೆಸಿಬಿ ರವಿ, ಎಂ.ಶಿವಪ್ರಕಾಶ್, ಎಂ.ಮಹೇಶ್, ಎಚ್.ಹರೀಶ್‍ಕುಮಾರ್, ಪೈ.ಅಭಿ, ರವಿಕುಮಾರ್, ನಾರಾಯಣಸ್ವಾಮಿ, ದ್ಯಾವಪ್ಪ ನಾಯಕ, ಪ್ರಭಾಕರ್, ಶ್ರೀಧರ್, ವೀರನಗೆರೆ ವಿಜಯ್‍ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Translate »