ಮೈಸೂರು, ಜು. 11(ಆರ್‍ಕೆ)- ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರದ ಆದೇಶ ದಂತೆ ನಾಳೆ (ಜು.12) ಭಾನುವಾರದ 2ನೇ ಲಾಕ್‍ಡೌನ್ ನಿರ್ಬಂಧ ಜಾರಿಯಲ್ಲಿರುತ್ತದೆ. ಪೂರ್ವ ನಿಗದಿಯಂತೆ ಇಂದು ಸಂಜೆ 6 ಗಂಟೆ ನಂತರವೇ ಲಾಕ್‍ಡೌನ್ ಆರಂಭವಾ ಗಿದ್ದು, ಸೋಮವಾರ ಮುಂಜಾನೆ 5 ಗಂಟೆವರೆಗೆ ಅಗತ್ಯ ವಸ್ತುಗಳ ಸೇವೆ ಹೊರತುಪಡಿಸಿ ಎಲ್ಲಾ
ರೀತಿಯ ವಾಣಿಜ್ಯ ವಹಿವಾಟು, ಸಂಚಾರ ಬಂದ್ ಆಗಲಿದೆ. ಶನಿವಾರ ಸಂಜೆ 6 ಗಂಟೆಯಿಂದಲೇ ಪೊಲೀಸರು ಮೈಸೂರಿನ ಎಲ್ಲಾ ಪ್ರಮುಖ ರಸ್ತೆ, ಸರ್ಕಲ್‍ಗಳಲ್ಲಿ ಬ್ಯಾರಿಕೇಡ್ ಹಾಕಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದಾರೆ. ಸಂಜೆ 5.30 ಗಂಟೆಯಿಂದಲೇ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗರುಡ, ಪಿಸಿಆರ್ ವಾಹನಗಳಲ್ಲಿ ಮಾಹಿತಿ ನೀಡುವ ಪೊಲೀಸರು 6 ಗಂಟೆಗೆ ಸರಿಯಾಗಿ ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ. ಆಸ್ಪತ್ರೆ, ಔಷಧಿ ಅಂಗಡಿ, ಹಣ್ಣು-ತರಕಾರಿ, ಹಾಲು, ಮಾಂಸದ ಅಂಗಡಿ, ಪೆಟ್ರೋಲ್ ಬಂಕ್ ಹೊರತುಪಡಿಸಿ ಉಳಿದ ವಾಣಿಜ್ಯ ವಹಿವಾಟುಗಳು ಸೋಮವಾರ ಮುಂಜಾನೆ 5 ಗಂಟೆವರೆಗೆ ಸಂಪೂರ್ಣ ಸ್ಥಗಿತಗೊಳ್ಳಲಿವೆ. ಸರಕು ಸಾಗಣೆ, ಕೃಷಿ ಚಟುವಟಿಕೆಗೆ ಸಂಬಂಧಿಸಿದ, ಅಗತ್ಯ ವಸ್ತು, ಪೆಟ್ರೋಲ್, ಗ್ಯಾಸ್, ಸರ್ಕಾರಿ ವಾಹನ, ಕೋವಿಡ್ ನಿರ್ವಹಣೆ ಕರ್ತವ್ಯ ನಿರತ ವಾಹನಗಳು, ಪಾಸ್ ಹೊಂದಿರುವ ಖಾಸಗಿ ವಾಹನಗಳು, ವೈದ್ಯರು-ವೈದ್ಯಕೀಯ ಸೇವಾ ಸಿಬ್ಬಂದಿ ವಾಹನಗಳಿಗೆ ಲಾಕ್‍ಡೌನ್ ಅವಧಿಯಲ್ಲಿ ಸಂಚಾರಕ್ಕೆ ನಿರ್ಬಂಧವಿರುವುದಿಲ್ಲ.
ಉಳಿದಂತೆ ಕೆಎಸ್‍ಆರ್‍ಟಿಸಿ, ಖಾಸಗಿ ಬಸ್, ಮಿನಿ ಬಸ್‍ಗಳು, ಕ್ಯಾಬ್, ಟ್ಯಾಕ್ಸಿ, ಆಟೋ, ಸಾರ್ವಜನಿಕರ ಕಾರು, ದ್ವಿಚಕ್ರ ವಾಹನಗಳ ಸಂಚಾರವನ್ನು ನಿರ್ಬಂಧಿಸ ಲಾಗಿದ್ದು, ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಓಡಾಡಿದರೆ ಪೊಲೀಸರು ಪ್ರಕರಣ ದಾಖಲಿಸುವರು ಎಂದು ಮೈಸೂರು ನಗರ ಡಿಸಿಪಿ ಡಾ. ಎ.ಎನ್. ಪ್ರಕಾಶ್‍ಗೌಡ ಎಚ್ಚರಿಕೆ ನೀಡಿದ್ದಾರೆ. ಹೋಟೆಲ್‍ಗಳಲ್ಲಿ ಕೇವಲ ಆಹಾರಗಳ ಪಾರ್ಸೆಲ್ ನೀಡಬಹುದು. ಆನ್ ಲೈನ್‍ನಲ್ಲಿ ಬುಕ್ ಮಾಡಿದ ಗ್ರಾಹಕರಿಗೆ ಆಹಾರ ಪೂರೈಸುವ ವಾಹನಗಳಿಗೆ ಸಂಚಾರ ನಿರ್ಬಂಧವಿಲ್ಲ. ಆದರೆ ಎಲ್ಲಾ ಬಗೆಯ ಅಂಗಡಿ, ಮಾರುಕಟ್ಟೆ, ಮಾಲ್‍ಗಳು, ಪಾರ್ಕುಗಳು, ಆಟದ ಮೈದಾನಗಳು ಬಂದ್ ಆಗಿರುತ್ತವೆ. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಅಂತರ ಜಿಲ್ಲಾ ಗಡಿ ಪ್ರದೇಶಗಳ ಚೆಕ್‍ಪೋಸ್ಟ್‍ಗಳಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ವಾಹನಗಳ ತಪಾಸಣೆ ಮಾಡುತ್ತಿದ್ದು, ಅಗತ್ಯ ಸೇವೆ ಹೊರತುಪಡಿಸಿ ಉಳಿದ ಯಾವುದೇ ಬಗೆಯ ವಾಹನಗಳಿಗೆ ಪ್ರವೇಶ ನೀಡದೇ ವಾಪಸ್ ಕಳುಹಿಸುವರು.