ಮೈಸೂರು ವಿವಿ ಮಹಿಳಾ ಪೌರ ಕಾರ್ಮಿಕರ ಅಹೋರಾತ್ರಿ ಧರಣಿ ಮುಂದುವರಿಕೆ
ಮೈಸೂರು

ಮೈಸೂರು ವಿವಿ ಮಹಿಳಾ ಪೌರ ಕಾರ್ಮಿಕರ ಅಹೋರಾತ್ರಿ ಧರಣಿ ಮುಂದುವರಿಕೆ

September 6, 2018

ಮೈಸೂರು: ಮೈಸೂರು ವಿವಿ ಮಹಿಳಾ ಪೌರ ಕಾರ್ಮಿಕರು ತಮ್ಮ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿ ಭಟನೆಯನ್ನು ಮುಂದುವರೆಸಿದ್ದಾರೆ. ಕನಿಷ್ಠ ಕೂಲಿ, ಇಪಿಎಫ್ ಹಾಗೂ ಆರೋಗ್ಯ ವಿಮಾ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಿಶ್ವವಿದ್ಯಾನಿಲಯಗಳ ಸ್ವಚ್ಛತಾ ಕಾರ್ಯ ನೌಕರರ ಸಂಘದ (ರಾಜ್ಯ ಸಮಿತಿ) ಆಶ್ರಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಹಿಳಾ ಪೌರಕಾರ್ಮಿಕರು ಮೈಸೂರು ಮಾನಸಗಂಗೋತ್ರಿಯ ಕುವೆಂಪು ಪ್ರತಿಮೆ ಬಳಿಯ ಮುಖ್ಯದ್ವಾರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಮಂಗಳವಾರ ರಾತ್ರಿ 10.30ರ ವೇಳೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮೈಸೂರು ವಿವಿ ಪ್ರಭಾರ ಕುಲಪತಿ ಪ್ರೊ.ಟಿ.ಕೆ. ಉಮೇಶ್ ಹಾಗೂ ಕುಲಸಚಿವ ಪ್ರೊ.ರಾಜಣ್ಣ ಸಂಘದ ಪದಾಧಿಕಾರಿಗಳ ಸಭೆ ಕರೆದು ಚರ್ಚಿಸಿ ಸಮಸ್ಯೆಯನ್ನು ಬಗೆಹರಿ ಸುವುದಾಗಿ ಭರವಸೆ ನೀಡಿದರು. ಆದರೆ ಬುಧವಾರ ಭೇಟಿ ಮಾಡಲು ಹೋದ ಸಂದರ್ಭ ತಮ್ಮ ಮಾತು ಬದಲಿಸಿದ ಅವರು ಚರ್ಚೆಗೆ ಬರುವುದಾದರೆ ಪ್ರತಿಭಟನೆಯನ್ನು ನಿಲ್ಲಿಸಿ ಬನ್ನಿ, ಇಲ್ಲವಾದರೆ ಚರ್ಚೆ ಸಾಧ್ಯವಿಲ್ಲ ಎಂದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಮುಂದುವರಿಸುತ್ತಿರುವುದಾಗಿ ಸಂಘದ ಅಧ್ಯಕ್ಷ ಚಂದ್ರಶೇಖರ ಮೇಟಿ ತಿಳಿಸಿದರು.

Translate »