ಮೈಸೂರಲ್ಲಿ ಮಕ್ಕಳಿಗೆ ನಾಳೆಯಿಂದ ಲಸಿಕೆ
ಮೈಸೂರು

ಮೈಸೂರಲ್ಲಿ ಮಕ್ಕಳಿಗೆ ನಾಳೆಯಿಂದ ಲಸಿಕೆ

January 2, 2022

ಮೈಸೂರು, ಜ.1(ಆರ್‍ಕೆ)- ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ 15ರಿಂದ 18 ವರ್ಷದ ಮಕ್ಕಳಿಗೆ ಜನವರಿ 3ರಿಂದ ಕೊರೊನಾ ಲಸಿಕೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್ ತಿಳಿಸಿದ್ದಾರೆ.

ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ಪಿಯು ಕಾಲೇಜಿನಲ್ಲಿ ಸೋಮವಾರ ಬೆಳಗ್ಗೆ 8.30 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಲಸಿಕಾ ಅಭಿಯಾನಕ್ಕೆ ಚಾಲನೆ ನೀಡುವರು. ಕೋವಿಡ್-19 ವೈರಾಣು ರೂಪಾಂತರಗೊಂಡು ಓಮಿಕ್ರಾನ್ ರೂಪದಲ್ಲಿ ಹರಡುವ ಸಾಧ್ಯತೆ ಇದೆ ಎಂದು ತಜ್ಞರು ವರದಿ ನೀಡಿರುವ ಹಿನ್ನೆಲೆಯಲ್ಲಿ ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆಫ್ ಇಮ್ಯುನೈಜೇಷನ್(ಎನ್‍ಎಟಿಜಿಐ) ಶಿಫಾರಸ್ಸಿನಂತೆ ಜನವರಿ 3ರಿಂದ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತದೆ. ಮೈಸೂರು ಜಿಲ್ಲೆಯಲ್ಲಿ 15ರಿಂದ 18 ವರ್ಷದೊಳಗಿನ 1,47,279 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾ ರೆಂದು ಗುರುತಿಸಲಾಗಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನೊಳ ಗೊಂಡ 100 ತಂಡಗಳು ಶೈಕ್ಷಣಿಕ ಸಂಸ್ಥೆಗಳಿಗೆ ತೆರಳಿ ಲಸಿಕೆ ನೀಡಲಿದ್ದು, 15 ದಿನದೊಳಗಾಗಿ ಅಭಿಯಾನ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಡಾ.ಪ್ರಸಾದ್ ತಿಳಿಸಿದ್ದಾರೆ. ಲಸಿಕೆ ಪಡೆಯಲು ಕೋವಿನ್ ತಂತ್ರಾಂಶದಲ್ಲಿ ನೋಂದಾಯಿಸಬೇಕಾಗಿರು ವುದರಿಂದ ಮಕ್ಕಳ ಆಧಾರ್ ಕಾರ್ಡ್ ಹಾಗೂ ಪೋಷಕರ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ತರಬೇಕು.

2007ನೇ ಇಸವಿ ಮತ್ತು ಅದಕ್ಕೂ ಮುಂಚೆ ಜನಿಸಿದ್ದು, ಶಾಲೆಯಿಂದ ಹೊರಗುಳಿ ದಿರುವ ಮಕ್ಕಳ ಪೋಷಕರು ಸ್ವಯಂಪ್ರೇರಿತವಾಗಿ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಕೋರಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 23.91 ಲಕ್ಷ ಮೊದಲನೇ ಡೋಸ್ ಹಾಗೂ 20.57 ಲಕ್ಷ 2ನೇ ಡೋಸ್ ಲಸಿಕೆ ನೀಡಿ ರಾಜ್ಯದಲ್ಲಿ ಗಮನಾರ್ಹ ಸಾಧನೆ ಆಗಿದ್ದು, ಲಸಿಕೆ ಪಡೆದಿದ್ದರೂ ಎಚ್ಚರಿಕೆಯೂ ಅತ್ಯಗತ್ಯ ಎಂಬ ಧ್ಯೇಯದೊಂದಿಗೆ ಮುಂದೆ ಹೋಗಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

Translate »