ಮೈಸೂರಲ್ಲಿ ದಿನೇ ದಿನೆ ಹೆಚ್ಚಾಗುತ್ತಿದೆ ವಾಹನ ದಟ್ಟಣೆ
ಮೈಸೂರು

ಮೈಸೂರಲ್ಲಿ ದಿನೇ ದಿನೆ ಹೆಚ್ಚಾಗುತ್ತಿದೆ ವಾಹನ ದಟ್ಟಣೆ

June 5, 2020

ಮೈಸೂರು, ಜೂ.4(ಆರ್‍ಕೆ)-ಕೋವಿಡ್-19 ಲಾಕ್‍ಡೌನ್ ನಿರ್ಬಂಧದಿಂದಾಗಿ ಸ್ಥಗಿತಗೊಂಡಿದ್ದ ವಾಹನಗಳ ಸಂಚಾರ ಲಾಕ್ ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಮೈಸೂರು ನಗರದಲ್ಲಿ ಹೆಚ್ಚಾಗ ತೊಡಗಿದೆ.

ಶಾಲಾ-ಕಾಲೇಜುಗಳು ಆರಂಭವಾಗಿಲ್ಲ. ಕೆಎಸ್‍ಆರ್ ಟಿಸಿ, ಖಾಸಗಿ ಬಸ್ಸುಗಳು ಪೂರ್ಣ ಪ್ರಮಾಣದಲ್ಲಿ ಸಂಚರಿಸುತ್ತಿಲ್ಲ ವಾದರೂ ಖಾಸಗಿ ವಾಹನಗಳ ಸಂಚಾರ ಮಾತ್ರ ಹೆಚ್ಚಾಗಿದೆ. ಸಾರ್ವಜನಿಕ ಸಾರಿಗೆ ಹಾಗೂ ರೈಲು ಸಂಚಾರ ವಿರಳವಾಗಿದ್ದಾಗಲೇ ಇನ್ನೂ ಹೋಟೆಲ್, ದೇವಸ್ಥಾನ ಹಾಗೂ ಪ್ರವಾಸಿ ತಾಣಗಳೇ ಆರಂಭವಾಗ ದಿದ್ದರೂ, ಈ ಪ್ರಮಾಣದಲ್ಲಿ ವಾಹನ ದಟ್ಟಣೆ ಕಾಣಿಸುತ್ತಿದೆ. ಒಂದು ವೇಳೆ ಎಲ್ಲಾ ಬಗೆಯ ಸಾರಿಗೆ ಸೇವೆ ಆರಂಭವಾದಲ್ಲಿ ಮೈಸೂರು ನಗರದಲ್ಲಿ ಸಂಚಾರ ವ್ಯವಸ್ಥೆ ದುಸ್ತರವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಹುಣಸೂರು ರಸ್ತೆ, ಕೆಆರ್‍ಎಸ್ ರಸ್ತೆ, ಜೆಎಲ್‍ಬಿ ರೋಡ್, ಸಯ್ಯಾಜಿರಾವ್ ರಸ್ತೆ, ಮಹಾತ್ಮ ಗಾಂಧಿ ರಸ್ತೆ, ಧನ್ವಂತರಿ ರಸ್ತೆ, ಡಿ.ದೇವರಾಜ ಅರಸು ರಸ್ತೆ, ಚಾಮ ರಾಜ ಜೋಡಿ ರಸ್ತೆ ಸೇರಿದಂತೆ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಅಧಿಕವಾಗಿದ್ದು, ವಾಹನ ನಿಲುಗಡೆಗೆ ಸ್ಥಳವೇ ಸಿಗದೆ ಸಾರ್ವಜನಿಕರು ಪರಿತಪಿಸುತ್ತಿರುವುದು ಕಂಡುಬರುತ್ತಿದೆ.

Translate »