ಎಚ್ಚರ… ಜಾರಿಯಲ್ಲಿದೆ ವೀಕೆಂಡ್ ಕಫ್ರ್ಯೂ
ಮೈಸೂರು

ಎಚ್ಚರ… ಜಾರಿಯಲ್ಲಿದೆ ವೀಕೆಂಡ್ ಕಫ್ರ್ಯೂ

April 24, 2021

ಸೋಮವಾರ ಬೆಳಗ್ಗೆ 6 ಗಂಟೆವರೆಗೆ ವಾಣಿಜ್ಯ ವಹಿವಾಟು, ಅನಗತ್ಯ ಸಂಚಾರಕ್ಕೆ ಬ್ರೇಕ್
ಇಂದು, ನಾಳೆ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ
ಮೈಸೂರು, ಏ.23(ಆರ್‍ಕೆ)- ಈಗಾ ಗಲೇ ಜಾರಿಯಲ್ಲಿರುವ ರಾತ್ರಿ ಕಫ್ರ್ಯೂ ಮತ್ತು ಸೆಮಿ ಲಾಕ್‍ಡೌನ್ ಜೊತೆಗೆ ಶುಕ್ರ ವಾರ ರಾತ್ರಿ 9 ರಿಂದ ಏಪ್ರಿಲ್ 26ರ ಸೋಮ ವಾರ ಬೆಳಗ್ಗೆ 6 ಗಂಟೆವರೆಗೆ ರಾಜ್ಯಾದ್ಯಂತ ವೀಕೆಂಡ್ ಕಫ್ರ್ಯೂ ಜಾರಿಯಲ್ಲಿದೆ.

ಈ ಭಾರಿಯ ವಾರಾಂತ್ಯ ಕಫ್ರ್ಯೂ ನಿರ್ಬಂಧಕಾಜ್ಞೆಯು 2020ರ ಕೋವಿಡ್ ಲಾಕ್‍ಡೌನ್ ನಿರ್ಬಂಧದಂತಿರಲಿದ್ದು, ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕಿನ ಎರಡನೇ ಅಲೆಗೆ ಬ್ರೇಕ್ ಹಾಕಲು ಸರ್ಕಾರವು ಈ ಕಠಿಣ ನಿಲುವು ತಾಳಿದೆ. ಇಂದು ರಾತ್ರಿ 9 ಗಂಟೆಯಿಂದ ವಾರಾಂತ್ಯ ಕಫ್ರ್ಯೂ ಜಾರಿಗೊಂಡಿರುವುದರಿಂದ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿ (ಇಟಿಜಿoಡಿಛಿe) ಮಾಡಲು ಮೈಸೂರು ನಗರ ಪೊಲೀಸರು ಪೂರ್ವ ತಯಾರಿ ನಡೆಸಿದ್ದು, ಪ್ರತಿಯೊಂದು ಪ್ರಮುಖ ವಾಣಿಜ್ಯ
ಕೇಂದ್ರ, ಸರ್ಕಲ್‍ಗಳಲ್ಲಿ ಮೌಂಟೆಡ್ ಕಂಪನಿ, ಸಿಟಿ ಸಿವಿಲ್, ಸಂಚಾರ, ಸಿಎಆರ್, ಕೆಎಸ್‍ಆರ್‍ಪಿ ಸಿಬ್ಬಂದಿ ಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಪ್ರಮುಖ ಜಂಕ್ಷನ್‍ಗಳಲ್ಲಿ ಬ್ಯಾರಿಕೇಡ್ ಅಳ ವಡಿಸಿ ಅನಗತ್ಯವಾಗಿ ರಾತ್ರಿ ವೇಳೆ ಸಂಚರಿಸುವವರನ್ನು ತಡೆದು ವಿಚಾರಣೆ ನಡೆಸಿ, ತಿಳುವಳಿಕೆ ಹೇಳಿ ಕಳುಹಿಸುತ್ತಿರುವ ಪೊಲೀಸರು, ಕೋವಿಡ್-19 ವಾರಾಂತ್ಯ ಕಫ್ರ್ಯೂ ಹಾಗೂ ಸೆಕ್ಷನ್ 144 ನಿಷೇದಾಜ್ಞೆ ಉಲ್ಲಂಘಿಸಿರುವುದು ಸ್ಪಷ್ಟವಾದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ 2005 ರನ್ವಯ ಪ್ರಕರಣ ದಾಖಲಿಸುತ್ತಿದ್ದಾರೆ. ಕೊರೊನಾ ಹರಡದಂತೆ ತಡೆಗಟ್ಟುವ ಉದ್ದೇಶದಿಂದ ಜಾರಿಗೆ ತಂದಿರುವ ವಾರಾಂತ್ಯ ಕಫ್ರ್ಯೂವನ್ನು ಪ್ರತಿಯೊಬ್ಬರೂ ಗೌರವಿಸಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಪೊಲೀಸರೊಂದಿಗೆ ಸಹಕರಿಸಬೇಕು. ಆ ಮೂಲಕ ತಮ್ಮ ಜೊತೆಗೆ, ಇತರರ ಆರೋಗ್ಯ ರಕ್ಷಣೆಗೂ ಕೈಜೋಡಿಸಬೇಕೆಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಮನವಿ ಮಾಡಿದ್ದಾರೆ. ನಾಳೆ(ಏ.24) ಮತ್ತು ಏಪ್ರಿಲ್ 25ರ ಭಾನುವಾರ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ-ಹಣ್ಣು-ತರಕಾರಿ, ಹಾಲು, ಪಡಿತರ ಸೇರಿದಂತೆ ಅಗತ್ಯ ವಸ್ತು ಖರೀದಿಗೆ ಅವಕಾಶವಿದ್ದು, ನಂತರ ಪೆಟ್ರೋಲ್ ಬಂಕ್, ಆಸ್ಪತ್ರೆ, ಔಷಧಿ ಅಂಗಡಿ, ಹೋಟೆಲ್, ರೆಸ್ಟೋರೆಂಟ್, ಬೇಕರಿಗಳಲ್ಲಿ ಪಾರ್ಸಲ್ ಸೇವೆ, ಸರಕು ಸಾಗಣೆ, ವೈದ್ಯಕೀಯ ಸೇವಾ ವಾಹನ, ಪ್ರಯಾಣಿಕರ ವಾಹನ ಸಂಚಾರ ಹೊರತುಪಡಿಸಿ ಉಳಿದ ಅಗತ್ಯ ಸೇವೆ ಸೇರಿದಂತೆ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಬೇಕೆಂದು ಅವರು ತಿಳಿಸಿದ್ದಾರೆ.

ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಸಾರ್ವಜನಿಕರು ತರಕಾರಿ, ಹಣ್ಣು, ಮಾಂಸ, ಮೀನು, ಪಡಿತರ ಸೇರಿದಂತೆ ಅಗತ್ಯವಸ್ತುಗಳನ್ನು ಖರೀದಿಸಿ ಶೇಖರಿಸಿಕೊಳ್ಳಬೇಕು. ನಂತರ ಅಗತ್ಯವಸ್ತು ಸೇರಿದಂತೆ ಇನ್ನಿತರ ಎಲ್ಲಾ ಬಗೆಯ ಅಂಗಡಿ ಮುಂಗಟ್ಟು, ವಾಣಿಜ್ಯ ವಹಿವಾಟುಗಳು ಸಂಪೂರ್ಣ ಬಂದ್ ಆಗಲಿವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಹೋಟೆಲು, ರೆಸ್ಟೋರೆಂಟ್ಸ್, ಬೇಕರಿಗಳಲ್ಲಿ ಊಟ-ತಿಂಡಿಗಳನ್ನು ಪಾರ್ಸೆಲ್ ಕೊಡಬಹುದೇ ಹೊರತು, ಸ್ಥಳದಲ್ಲಿ ಸೇವಿಸಲು ಅವಕಾಶವಿರುವುದಿಲ್ಲ. ಎಲ್ಲಾ ಬಗೆಯ ವಾಹನಗಳು ಸಂಚರಿಸಲು ಅವಕಾಶವಿರುವುದರಿಂದ ಪೆಟ್ರೋಲ್ ಬಂಕ್‍ಗಳು, ಕಾರ್ಯನಿರ್ವಹಿಸಲಿವೆ. ಔಷಧಿ ಅಂಗಡಿ, ಕ್ಲಿನಿಕ್, ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಅವರು ತಿಳಿಸಿದ್ದಾರೆ. ಸರ್ಕಾರಿ, ಅರೆಸರ್ಕಾರಿ, ವೈದ್ಯಕೀಯ ಸೇವಾನಿರತರು, ಖಾಸಗಿ ಸಂಸ್ಥೆ, ಕೈಗಾರಿಕೆಗಳ ನೌಕರರು ಓಡಾಡಲು ಅವಕಾಶವಿದ್ದು, ಆದರೆ, ಸಂಸ್ಥೆ ಅಥವಾ ಇಲಾಖೆ ನೀಡಿರುವ ಗುರುತಿನ ಚೀಟಿಯನ್ನು ಪೊಲೀಸರು ಕೇಳಿದಾಗ ತೋರಿಸಬೇಕು. ಸಿನೆಮಾ ಮಂದಿರ, ಶಾಪಿಂಗ್ ಮಾಲ್, ಜಿಮ್, ಯೋಗ ಕೇಂದ್ರ, ಸ್ಪಾ, ಸ್ವಿಮ್ಮಿಂಗ್ ಪೂಲ್, ಮನರಂಜನಾ ಪಾರ್ಕ್, ಪ್ಲೇ ಗ್ರೌಂಡ್ಸ್, ಬಾರ್, ಆಡಿಟೋರಿಯಂ, ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡಾ, ಶೈಕ್ಷಣಿಕ ಚಟುವಟಿಕೆ, ಸಾಂಸ್ಕøತಿಕ, ಧಾರ್ಮಿಕ ಕಾರ್ಯಕ್ರಮಗಳು ಸಂಪೂರ್ಣ ಬಂದ್ ಆಗಲಿವೆ.
ಯಾವ ಸೇವೆ ಲಭ್ಯ, ಯಾವುದು ಇರಲ್ಲ
ಲಭ್ಯ: ಆಸ್ಪತ್ರೆ, ಮೆಡಿಕಲ್ ಸ್ಟೋರ್, ಪೆಟ್ರೋಲ್ ಬಂಕ್, ಹೋಟೆಲ್, ರೆಸ್ಟೋರೆಂಟ್ ಗಳು, ಬೇಕರಿಗಳಲ್ಲಿ ಆಹಾರ, ಮನೆಗಳಿಗೆ ಆಹಾರ ಪೂರೈಕೆ, ತಿಂಡಿ-ತಿನಿಸು(ಪಾರ್ಸಲ್ ಮಾತ್ರ) ಹಾಗೂ ಎಲ್ಲಾ ಬಗೆಯ ಸರಕು ಸಾಗಣೆ, ಪ್ರಯಾಣಿಕರ ವಾಹನ ಸಂಚಾರ, ಖಾಸಗಿ ವಾಹನಗಳ ಸಂಚಾರ ಎಂದಿನಂತಿರುತ್ತದೆ.

ಸಂಪೂರ್ಣ ಸ್ಥಗಿತ: ಬಾರ್, ಲಿಕ್ಕರ್ ಶಾಪ್, ಸಿನೆಮಾ ಮಂದಿರ, ಶಾಪಿಂಗ್ ಮಾಲ್, ಜಿಮ್ನಾಷಿಯಂ, ಸ್ಪೋಟ್ರ್ಸ್ ಕಾಂಪ್ಲೆಕ್ಸ್‍ಗಳು, ಈಜುಕೊಳ, ಮನರಂಜನೆ ಚಟುವಟಿಕೆ, ಆಡಿಟೋರಿಯಂ, ಅಸೆಂಬ್ಲಿ ಹಾಲ್, ಸಾಮಾಜಿಕ, ರಾಜಕೀಯ ಸಭೆ, ಸಾಂಸ್ಕøತಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಕ್ರಮಗಳು ಸೇರಿದಂತೆ ಎಲ್ಲಾ ಬಗೆಯ ವಾಣಿಜ್ಯ ವಹಿವಾಟುಗಳು ಸಂಪೂರ್ಣವಾಗಿ ಬಂದ್ ಆಗಲಿದೆ.
ಬೆಳಿಗ್ಗೆ 6ರಿಂದ 10ರವರೆಗೆ ಅವಕಾಶ: ಪ್ರಾವಿಷನ್ ಸ್ಟೋರ್ಸ್, ಹಣ್ಣು, ತರಕಾರಿ ಅಂಗಡಿ, ಹಾಲಿನ ಬೂತ್, ಮಾಂಸ-ಮೀನು ಮಾರಾಟ ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಲಭ್ಯವಿರುತ್ತದೆ. ಮದುವೆ ಸಮಾರಂಭಗಳಿಗೆ 50 ಮಂದಿ ಹಾಗೂ ಅಂತ್ಯಸಂಸ್ಕಾರಕ್ಕೆ 20 ಮಂದಿ ಮಿತಿಗೊಳಿಸಿ ಅವಕಾಶ ಕಲ್ಪಿಸಲಾಗಿದೆ.

Translate »