ಕೊಡಗಿನಲ್ಲಿ ಗಾಳಿ ಸಹಿತ ಮಳೆ ಆರ್ಭಟ
ಕೊಡಗು

ಕೊಡಗಿನಲ್ಲಿ ಗಾಳಿ ಸಹಿತ ಮಳೆ ಆರ್ಭಟ

July 14, 2021

ಮಡಿಕೇರಿ, ಜು.13- ಕೊಡಗಿನಲ್ಲಿ ಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಎರಡು ದಿನ ಜಿಲ್ಲೆಯಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಚಳಿಯ ವಾತಾವರಣ ಕಂಡು ಬಂದಿದೆ.

ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿ ಮಳೆಯಾಗುತ್ತಿರುವ ಕಾರಣ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಆದರೆ ಮಡಿಕೇರಿ-ತಲಕಾವೇರಿ, ಭಾಗಮಂಡಲ-ಅಯ್ಯಂಗೇರಿ ರಸ್ತೆ ಸಂಚಾರಕ್ಕೆ ಯಾವುದೇ ತೊಡಕಾಗಿಲ್ಲ.

ಕಾವೇರಿ ಮತ್ತು ಅದರ ಉಪ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿರುವ ಕಾರಣ ನದಿ ಪಾತ್ರದ ಜನತೆ ಮುಂಜಾಗ್ರತೆ ವಹಿಸುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕರಡಿ ಗೋಡಿನಲ್ಲಿ ನದಿ ನೀರಿನಲ್ಲಿ ಹೆಚ್ಚಳವಾಗಿದೆ.
ಹಾರಂಗಿ ಜಲಾಶಯದ ನೀರಿನ ಮೂಲಗಳಾದ ಹಟ್ಟಿಹೊಳೆ, ಮಾದಾಪುರ ನದಿ ಪಾತ್ರದ ಗ್ರಾಮಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಏರಿಕೆಯಾಗಿದೆ. ಜಲಾಶಯಕ್ಕೆ 3,589 ಕ್ಯೂಸೆಕ್ ಪ್ರಮಾಣದ ನೀರಿನ ಒಳಹರಿವು ಕಂಡು ಬಂದಿದೆ. 2,859 ಅಡಿ ನೀರಿನ ಸಂಗ್ರಹಾ ಸಾಮಥ್ರ್ಯವಿರುವ ಜಲಾಶಯದಲ್ಲಿ ಪ್ರಸ್ತುತ 2846.71 ಅಡಿಗಳಷ್ಟು ನೀರಿನ ಸಂಗ್ರಹವಿದ್ದು, ಹಾರಂಗಿ ಭರ್ತಿಯಾಗಲು ಇನ್ನೂ 12.29 ಅಡಿಗಳು ಮಾತ್ರ ಬಾಕಿ ಉಳಿದಿದೆ. ಇದೇ ರೀತಿ ಮಳೆ ಮುಂದುವರೆದಲ್ಲಿ ಜುಲೈ 3ನೇ ವಾರದ ಅಂತ್ಯಕ್ಕೆ ಹಾರಂಗಿ ಜಲಾಶಯ ಭರ್ತಿಯಾಗ ಬಹುದು ಎಂದು ಅಂದಾಜಿಸಲಾಗಿದೆ. ಜಲಾಶಯದಿಂದ ನದಿ ಪಾತ್ರಕ್ಕೆ ಹಾಗೂ ನಾಲೆಗೆ ತಲಾ 40 ಕ್ಯೂಸೆಕ್ ಸೇರಿದಂತೆ ಒಟ್ಟು 80 ಕ್ಯೂಸೆಕ್ ನೀರು ಬಿಡಲಾಗಿದೆ.

ರಂಜನ್ ಭೇಟಿ: ಮಳೆ ಚುರುಕು ಪಡೆದಿರುವ ಹಿನ್ನೆಲೆಯಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಪ್ರವಾಹ ಪೀಡಿತ ಬಲಮುರಿ ಗ್ರಾಮಕ್ಕೆ ತೆರಳಿ ನದಿ ಪಾತ್ರವನ್ನು ವೀಕ್ಷಿಸಿದರು. ಬಲಮುರಿ ಕೆಳ ಸೇತುವೆ ಮುಳುಗಡೆಗೆ 3 ಅಡಿ ಮಾತ್ರವೇ ಇದ್ದು, ನದಿ ಪಾತ್ರದ ಜನತೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದರು.

ಬಳಿಕ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಮಳೆಗಾಲವನ್ನು ಎದುರಿಸಲು ಗ್ರಾಮ ಮಟ್ಟದಿಂದಲೇ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಧಿಕಾರಿಗಳ ಸಭೆ ನಡೆಸಿ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ. ಮರ ಮತ್ತು ಭೂ ಕುಸಿತದಿಂದ ರಸ್ತೆಗಳು ಬಂದ್ ಆದಲ್ಲಿ ಅದನ್ನು ತೆರವು ಮಾಡಲು ಅಗತ್ಯವಿರುವ ಜೆಸಿಬಿ, ಹಿಟಾಚಿ ಯಂತ್ರೋಪಕರಣಗಳನ್ನು ಕೂಡ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಈಗಾಗಲೇ ಎನ್‍ಡಿಆರ್‍ಎಫ್ ಸಿಬ್ಬಂದಿಗಳು ಕೂಡ ಜಿಲ್ಲೆಯಲ್ಲಿದ್ದು, ವಿಕೋಪ ಎದುರಾದಲ್ಲಿ ಜನರ ರಕ್ಷಣೆಗೆ ತಂಡ ಧಾವಿಸಲಿದೆ. ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲರನ್ನು ಕೋವಿಡ್ ಪರೀಕ್ಷೆ ನಡೆಸಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಹೀಗಾಗಿ ಮೊದಲು ಎಲ್ಲರಿಗೂ ಲಸಿಕೆ ನೀಡಲು ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

Translate »