ಬೆಳಗಾವಿ ಸುವರ್ಣಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ
News

ಬೆಳಗಾವಿ ಸುವರ್ಣಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ

December 13, 2021

ಬೆಳಗಾವಿ,ಡಿ.12-ಬೆಳಗಾವಿಯ ಸುವರ್ಣಸೌಧದಲ್ಲಿ ನಾಳೆ (ಡಿ.13)ಯಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಮತಾಂತರ ನಿಷೇಧ ಕಾಯ್ದೆ ಸೇರಿದಂತೆ ಕೆಲವು ಮಸೂದೆಗಳನ್ನು ಮಂಡಿಸಲು ಆಡಳಿತ ಪಕ್ಷ ಬಿಜೆಪಿ ಸಿದ್ಧತೆ ನಡೆಸಿದೆ.

ಇದಕ್ಕೆ ಪ್ರತಿಯಾಗಿ ಪ್ರತಿಪಕ್ಷಗಳು ಮತಾಂತರ ನಿಷೇಧ ಕಾಯ್ದೆ, ಬಿಟ್ ಕಾಯಿನ್ ಮತ್ತು ಮಳೆ ಹಾನಿಯಿಂದ ಉಂಟಾದ ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಮುಂದಾಗಿದ್ದು, ಸದನ ವಾದ-ಪ್ರತಿವಾದಗಳಿಂದ ಪ್ರತಿಧ್ವನಿಸುವ ಸಾಧ್ಯತೆ ಇದೆ.

ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ಅಧಿವೇಶನದ ಸಿದ್ಧತೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿವೇಶನಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು.

ಸೋಮವಾರ ಬೆಳಗ್ಗೆ 10.30ಕ್ಕೆ ಕಾರ್ಯಕಲಾಪಗಳ ಸಮಿತಿಯ ಸಭೆ ನಡೆಯಲಿದೆ, ಎರಡು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆ ಗಳ ಬಗ್ಗೆ ಚರ್ಚಿಸಲು ಅವ ಕಾಶ ನೀಡಬೇಕು ಎಂಬ ಸಲಹೆಗಳು ಬಂದಿದ್ದು, ಅದನ್ನು ಪರಿಶೀಲಿಸಿ ಪರಿಗಣಿಸ ಲಾಗುವುದು. ಕಲಾಪದಲ್ಲಿ ಎಲ್ಲಾ ಶಾಸಕರು ಹಾಜರಿರ ಬೇಕು, ಬೆಳಗಾವಿ ಅಧಿವೇಶನ ಎಂದು ಯಾರೂ ಗೈರು ಹಾಜರಾಗಬಾರದು ಎಂದು ಮನವಿ ಮಾಡಿದರು.

ಮಸೂದೆಗಳಿನ್ನೂ ಬಂದಿಲ್ಲ: ಸರ್ಕಾರ ಇದುವರೆಗೂ ಸದನದಲ್ಲಿ ಯಾವ ಯಾವ ಬಿಲ್ ಮಂಡಿಸಲಿದೆ ಎನ್ನುವುದನ್ನು ಕಳುಹಿಸಿಲ್ಲ. ಬಿಲ್ ಕಳಿಸ್ತೀವಿ ಎಂದು ಹೇಳಿದ್ದಾರೆ, ಆದರೆ ಇದುವರೆಗೂ ಬಂದಿಲ್ಲ. ನಾಳೆ (ಸೋಮವಾರ)ಯೊಳಗೆ ಕಳುಹಿಸುತ್ತೇವೆ ಎಂದು ಮೌಖಿಕವಾಗಿ ತಿಳಿಸಿದ್ದಾರೆ ಎಂದರು.

ಕೋವಿಡ್ ಮುಂಜಾಗ್ರತೆ: ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಕಲಾಪ ಚೆನ್ನಾಗಿ ನಡೆಯುವ ಅಗತ್ಯತೆ ಇದೆ. ಇಷ್ಟೆಲ್ಲ ವ್ಯವಸ್ಥೆ ಮಾಡಿ ಕಲಾಪ ಚೆನ್ನಾಗಿ ನಡೆಯಲಿಲ್ಲ ಅಂದರೆ ಹೇಗೆ ಎಂದ ಅವರು, ಎಲ್ಲಾ ಶಾಸಕರಿಗೂ ಸಕ್ರಿಯವಾಗಿ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡುತ್ತೇನೆ. ನಿಯಮಾನು ಸಾರ ಎಲ್ಲರಿಗೂ ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ ಎಂದರು. 10 ದಿನ ಅಧಿವೇಶನ ನಡೆಯಲಿದೆ. ಅಧಿವೇಶನಕ್ಕೆ ಆಗಮಿಸುವ ಸಚಿವರು, ಶಾಸಕರು, ಅಧಿಕಾರಿಗಳಿಗೆ ನಗರದ ವಿವಿಧ ಹೋಟೆಲ್‍ಗಳಲ್ಲಿ ಒಟ್ಟು 2100ಕ್ಕೂ ಹೆಚ್ಚು ರೂಂಗಳನ್ನು ಕಾಯ್ದಿರಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನ್ಯೂ ಸರ್ಕಿಟ್ ಹೌಸ್‍ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಜಿಲ್ಲಾಡಳಿತವು ಅಧಿವೇಶನಕ್ಕೆ ಬರುವವರಿಗೆ ಕೋವಿಡ್ ಖಖಿPಅಖ ಟೆಸ್ಟ್‍ನ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಿದ್ದು, 72 ಗಂಟೆ ಒಳಗೆ ಟೆಸ್ಟ್ ಮಾಡಿಸಿದ ವರದಿಯನ್ನು ಸಲ್ಲಿಸಬೇಕು. ಜೊತೆಗೆ ಅಧಿವೇಶನದಲ್ಲಿ ಭಾಗವಹಿಸುವವರು ಎರಡೂ ಡೋಸ್ ವ್ಯಾಕ್ಸಿನ್ ಪಡೆದ ದಾಖಲೆಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಆದೇಶ ಮಾಡಿದೆ. ಇದರ ಜೊತೆಗೆ ನಿನ್ನೆಯಿಂದಲೇ ಸುವರ್ಣ ಸೌಧದ ಸುತ್ತ ಒಂದು ಕಿಲೋಮೀಟರ್ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮೊದಲ ದಿನ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಸೇನಾನಿಗಳಿಗೆ ಹಾಗೂ ಇತ್ತೀಚೆಗೆ ಅಗಲಿದ ನಾಯಕರುಗಳು ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಅಧಿವೇಶನ ಆರಂಭವಾಗಲಿದೆ.

Translate »