ಕೊರೊನಾದಿಂದ ಮಹಿಳೆ ಸಾವು ಶಂಕೆ ಶವದ ಬಳಿ ಸುಳಿಯದ ಸಂಬಂಧಿಕರು
ಮಂಡ್ಯ

ಕೊರೊನಾದಿಂದ ಮಹಿಳೆ ಸಾವು ಶಂಕೆ ಶವದ ಬಳಿ ಸುಳಿಯದ ಸಂಬಂಧಿಕರು

April 25, 2021

ತಾಲೂಕು ಆಡಳಿತದಿಂದ ಅಂತ್ಯಕ್ರಿಯೆ 5 ದಿನವಾದರೂ ಬಂದಿಲ್ಲ ಕೊರೊನಾ ಟೆಸ್ಟ್ ವರದಿ
ಮಳವಳ್ಳಿ ಏ.24-ಕೋವಿಡ್ ಪರೀಕ್ಷೆಗೆ ಒಳಪಟ್ಟು ವರದಿ ಬರುವ ಮುನ್ನ ಮೃತಪಟ್ಟಿದ್ದ ಮಹಿಳೆಯು ಕೊರೊನಾದಿಂದ ಮೃತಪಟ್ಟಿರಬಹುದೆಂದು ಆತಂಕಗೊಂಡ ಸಂಬಂಧಿಕರು ಹಾಗೂ ಗ್ರಾಮಸ್ಥರು ಅಂತ್ಯ ಸಂಸ್ಕಾರಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಮನೆಯ ಜಗುಲಿ ಮೇಲೆಯೇ ಮಹಿಳೆಯ ಶವ ಅನಾಥವಾಗಿ ಬಿದ್ದಿದ್ದ ದಾರುಣ ಘಟನೆ ಇಂದು ತಾಲೂಕಿನಲ್ಲಿ ವರದಿಯಾಗಿದೆ.

ತಾಲೂಕಿನ ಎಂ.ಶೆಟ್ಟಹಳ್ಳಿ ಗ್ರಾಮದ 55 ವರ್ಷದ ಮಹಿಳೆ ಏ.16ರಂದು ಬೆಂಗ ಳೂರಿನಿಂದ ತಮ್ಮ ಮನೆಗೆ ಬಂದಿದ್ದರು. ಏ.17ರಂದು ಗ್ರಾಮದಲ್ಲಿ ಕೋವಿಡ್ ಲಸಿಕೆ ಪಡೆದಿದ್ದರು. ಏ.18ರಂದು ಸ್ಪಲ್ಪ ಪ್ರಮಾಣದಲ್ಲಿ ಜ್ವರ ಕಾಣಿಸಿಕೊಂಡದ್ದರಿಂದ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಏ.19 ರಂದು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದ ಮಹಿಳೆಯ ವರದಿ ಇನ್ನೂ ಬಂದಿರಲಿಲ್ಲ. ಶನಿವಾರ ಬೆಳಗ್ಗೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ಚಿಕಿತ್ಸೆ ಕೊಡಿಸಲು ಆಂಬ್ಯುಲೆನ್ಸ್‍ನಲ್ಲಿ ಆಸ್ಪತ್ರೆಗೆ ಕರೆದೊಯ್ದ ವೇಳೆ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಇದರಿಂದ ಶವವನ್ನು ಅವರ ಮನೆಯ ಜಗುಲಿ ಮೇಲೆ ಇರಿಸಿ ಆರೋಗ್ಯ ಇಲಾಖೆಯ ಸಿಬ್ಬಂದಿ ತೆರಳಿದ್ದರು.

ಕೊರೊನಾದಿಂದ ಮಹಿಳೆ ಮೃತಪಟ್ಟಿರ ಬಹುದು ಎಂದು ಶಂಕಿಸಿದ ಸಂಬಂಧಿಕರು ಹಾಗೂ ಗ್ರಾಮಸ್ಥರು ಶವದ ಬಳಿ ಸುಳಿಯದೇ ಐದಾರು ಗಂಟೆಗಳ ಕಾಲ ಶವ ಅನಾಥವಾಗಿ ಜಗುಲಿಯ ಮೇಲೇ ಬಿದ್ದಿತ್ತು.

ವಿಷಯ ತಿಳಿದ ಗ್ರಾಪಂ ಸದಸ್ಯ ಮನೋಹರ್ ಅವರು, ತಾಲೂಕು ಆಡಳಿತದ ಅಧಿಕಾರಿ ಗಳನ್ನು ಸಂಪರ್ಕಿಸಿ, ಆರೋಗ್ಯ ವೈದ್ಯಾಧಿಕಾರಿ ಡಾ.ಶಿವಸ್ವಾಮಿ ಅವರನ್ನು ಸ್ಥಳಕ್ಕೆ ಕರೆಸಿ ಕೊಂಡರು. ಬಳಿಕ ಮಂಡ್ಯದಿಂದ ಬಂದ ತಂಡದಿಂದ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಆರೋಗ್ಯ ವೈದ್ಯಾಧಿಕಾರಿ ಡಾ.ಶಿವಸ್ವಾಮಿ ಮಾತನಾಡಿ, ಬೆಂಗಳೂರಿನಿಂದ ಕಳೆದ ವಾರ ಬಂದಿದ್ದ ಮಹಿಳೆ ಅನಾರೋಗ್ಯ ದಿಂದ ಬಳಲುತ್ತಿದ್ದರು. ಕೋವಿಡ್ ಲಸಿಕೆ ಪಡೆದಿದ್ದ ಅವರನ್ನು ಏ.19ರಂದು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿ ಕೈಸೇರಬೇಕಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಗ್ರಾಪಂನಿಂದ ಸ್ಯಾನಿಟೈಸ್ ಮಾಡಲಾಗಿದೆ ಎಂದರು.
ಗ್ರಾಪಂ ಸದಸ್ಯ ಮನೋಹರ್ ಪ್ರತಿಕ್ರಿಯಿಸಿ, ಬೆಂಗಳೂರಿನಿಂದ ಬಂದಿದ್ದ ಮಹಿಳೆ ವಾರ ದಿಂದ ಜ್ವರದಿಂದ ನರಳುತ್ತಿದ್ದರು. ಈ ವಿಚಾರ ಯಾರೊಂದಿಗೂ ಹೇಳಿಕೊಂಡಿಲ್ಲ. ಕೋವಿಡ್ ಪರೀಕ್ಷೆ ಮಾಡಿಸಿ 5 ದಿನಗಳು ಕಳೆದರೂ ಇನ್ನೂ ವರದಿ ಬಂದಿಲ್ಲ ಎಂದು ಆರೋಪಿಸಿದರಲ್ಲದೆ, ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

Translate »