ಮೈಸೂರು ಪಾಲಿಕೆ ಗುತ್ತಿಗೆದಾರರ ಸಂಘದ ಎಚ್ಚರಿಕೆ
ಮೈಸೂರು, ಸೆ. 26(ಆರ್‍ಕೆ)- ಅಕ್ಟೋಬರ್ 3ರಿಂದ ಬಾಕಿ ಬಿಲ್ ಪಾವತಿಸು ವವರೆಗೆ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಾಗಿ ಮೈಸೂರು ಮಹಾನಗರ ಪಾಲಿಕೆ ಸಿವಿಲ್ ಗುತ್ತಿಗೆದಾರರ ಸಂಘವು ಎಚ್ಚರಿಕೆ ನೀಡಿದೆ.
ಗುತ್ತಿಗೆ ಕೆಲಸವನ್ನು ಮಾಡಿಕೊಂಡು ಜೀವನ ನಡೆಸುತ್ತಿರುವ ತಾವು ಸಾಲದ ಒತ್ತಡಕ್ಕೆ ಸಿಲುಕಿ ಮಾನಸಿಕ ಖಿನ್ನತೆಗೊಳಗಾಗಿದ್ದು, ಮಾಡಿರುವ ಕಾಮಗಾರಿಯ ಹಣ ಪಾವತಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗದ ಕಾರಣ, ಅಕ್ಟೋಬರ್ 3ರಿಂದ ಕಾಮಗಾರಿ ಸ್ಥಗಿತಗೊಳಿಸಲು ಮೈಸೂರು ಮಹಾ ನಗರ ಪಾಲಿಕೆ ಸಿವಿಲ್ ಗುತ್ತಿಗೆದಾರರ ಸಂಘ ನಿರ್ಣಯ ಕೈಗೊಂಡಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ, ಕಾಮಗಾರಿಗಳಿಗಾಗಿ ಮನೆಯ ಒಡವೆಗಳನ್ನು ಅಡಮಾನವಿಟ್ಟು ಹಾಗೂ ಆಭರಣಗಳನ್ನು ಮಾರಿ ಹಣ ತೊಡಗಿಸಿದ್ದೇವೆ. ಈಗ ಬ್ಯಾಂಕಿನವರು ಸಾಲ ಸೌಲಭ್ಯ ನೀಡುತ್ತಿಲ್ಲವಾ ದ್ದರಿಂದ ಬಡ್ಡಿ ಪಾವತಿಸಿಕೊಂಡು ಜೀವನ ಸಾಗಿಸುವುದು ಕಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಕಾಮಗಾರಿ ಬಿಲ್ ಪಾವತಿಸಿಲ್ಲ, ಈಗಾಗಲೇ ಪಾಲಿಕೆಯಿಂದ ಗುತ್ತಿಗೆದಾರರಿಗೆ ಸುಮಾರು 130 ಕೋಟಿ ರೂ. ಬಿಲ್ ನೀಡುವುದು ಬಾಕಿ ಇರುವುದರಿಂದ ಅದನ್ನು ಕೊಡದ ಹೊರತು, ಮುಂದೆ ಹೊಸ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.