ಕರ್ನಾಟಕದ `ಸಾಂದರ್ಭಿಕ ಕೂಸು’ ಎನ್ನುವ ಮುಖ್ಯಮಂತ್ರಿಯವರಿಗೆ ನನ್ನ ಒಂದು ಪಿಸುಮಾತು
ಅಂಕಣಗಳು, ಛೂಮಂತ್ರ

ಕರ್ನಾಟಕದ `ಸಾಂದರ್ಭಿಕ ಕೂಸು’ ಎನ್ನುವ ಮುಖ್ಯಮಂತ್ರಿಯವರಿಗೆ ನನ್ನ ಒಂದು ಪಿಸುಮಾತು

June 17, 2018

ನಾನು ಒಂದು ಪತ್ರಿಕಾ ಆಫ್ ಸೆಟ್ ಮುದ್ರಣಾಲಯದ ಮಾಲೀಕ ನಾಗಿ ಅದಕ್ಕೆ ಸಂಬಂಧಪಟ್ಟಂತೆ ತಿಳಿದುಕೊಂಡ ತಂತ್ರಜ್ಞಾನದ ಮೊದಲ ವಿಷಯವೆಂದರೆ ‘ನೀರು ಮತ್ತು ತೈಲ ಒಂದಕ್ಕೊಂದು ಮಿಶ್ರಣವಾಗುವುದಿಲ್ಲ.’

ಮೇ 12, 2018ರ ವಿಧಾನಸಭಾ ಚುನಾವಣೆಗೆ ಮುಂಚೆ ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮದೇ ಆದ ರಾಜಕೀಯ ಸಿದ್ಧಾಂತಗಳನ್ನು ಮತ್ತು ಪ್ರಣಾಳಿಕೆಯನ್ನು ಜನರ ಮುಂದೆ ಇಟ್ಟು ಒಬ್ಬರನ್ನೊಬ್ಬರು ಸೋಲಿಸಲು ತಂತ್ರಗಾರಿಕೆಯಲ್ಲಿ ನಿರತರಾದರು. ಅದು ಎಷ್ಟರ ಮಟ್ಟಿಗೆ ತೀವ್ರವಾಗಿತ್ತೆಂದರೆ, ಆಫ್ ಸೆಟ್ ಮುದ್ರಣದಲ್ಲಿ ಬಳಸುವ ನೀರು ಮತ್ತು ತೈಲದಿಂದ ತಯಾರಿ ಸಿದ ಬಣ್ಣ ಹೇಗೆ ಹೊಂದಿಕೊಳ್ಳ ಲಾಗುವುದಿಲ್ಲವೋ ಅಷ್ಟರ ಮಟ್ಟಿಗೆ ತೀವ್ರ ತರವಾಗಿತ್ತು. ಆದರೆ ಚುನಾವಣೆ ಯಲ್ಲಿ ಬಂದ ಅತಂತ್ರ ಫಲಿತಾಂಶದ ಬೆನ್ನಲ್ಲೇ ನೀರು ಮತ್ತು ತೈಲದಂತೆ ಇದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪವಾಡ ಸದೃಶ ರೀತಿ ಯಲ್ಲಿ ಒಂದಾಗಿಬಿಟ್ಟವು. ಕಾಂಗ್ರೆಸ್‍ಗೆ 78 ಸ್ಥಾನ ಲಭಿಸಿದ್ದರೂ ಕೇವಲ 38 ಸ್ಥಾನಗಳಿಸಿದ್ದ ಜೆಡಿಎಸ್‍ಗೆ ದಯ ನೀಯ ಸ್ಥಿತಿಯಲ್ಲಿ ಕಾಂಗ್ರೆಸ್‍ನವರು ಶರಣಾಗಿ ಅಧಿಕಾರ ಹಿಡಿದಿದ್ದಾರೆ.

ಈ ಸಮ್ಮಿಶ್ರ ಸರ್ಕಾರ ಎರಡು ಜಾತ್ಯಾತೀತ ಪಕ್ಷಗಳು ಸೇರಿ ರಚಿಸಿದ್ದಾದರೂ ಅವುಗಳ ರಾಜಕೀಯ ತತ್ವ ಸಿದ್ಧಾಂತಗಳು ಮೂಲಭೂತವಾಗಿ ಬೇರೆಯೇ, ಅಂದರೆ ನೀರು ಹಾಗೂ ತೈಲದ ರೀತಿ ಮುಂದುವರಿಯುತ್ತಿರು ವುದನ್ನು ಕಾಣುತ್ತೇವೆ.

ಪ್ರಸ್ತುತ ನಡೆಯುತ್ತಿರುವ ಮಂತ್ರಿಮಂಡಲ ರಚನೆಯ ಹಗ್ಗ- ಜಗ್ಗಾಟದ ದೊಂಬರಾಟವನ್ನು ನೋಡಿದಾಗ ನನಗೆ ನೆನಪಾದದ್ದು ರಂಗಾಯಣದ ನಿರ್ದೇಶಕರಾಗಿದ್ದ ಸುಪ್ರಸಿದ್ಧ ನಾಟಕಕಾರರು ಹಾಗೂ ನಿರ್ದೇಶಕರೂ ಆದ ಪ್ರಸನ್ನ ರವರು ಮೇ 24, 2018ರ ಪ್ರಜಾ ವಾಣಿಯಲ್ಲಿ ಬರೆದ ಒಂದು ಲೇಖನದ ಮೊದಲ ಪ್ಯಾರಾದಲ್ಲಿ ತಿಳಿಸಿದ ಕಟು ಸತ್ಯ. ಅದೇ ನೆಂದರೆ: “ಹೇಗಾದರೂ ಮಾಡು, ಏನಾದರೂ ಮಾಡು, ಆದರೆ ಅಧಿಕಾರ ಹಿಡಿ’. ಇದು ಇಂದಿನ ರಾಜಕಾರಣ. ಭಾರತದ್ದು ಮಾತ್ರವಲ್ಲ,

ಇಡೀ ವಿಶ್ವದ ರಾಜಕಾರಣ ಸಿದ್ಧಾಂತ, ನೀತಿ, ನೈತಿಕತೆಗಳನ್ನು- ಅದು ಜೊಳ್ಳು ಕಾಳೋ ಎಂಬಂತೆ ಗಾಳಿಗೆ ತೂರಲಾಗಿದೆ. ಕಾಂಗ್ರೆಸ್, ಕಮ್ಯುನಿಸ್ಟರು, ವಿವಿಧ ಬಗೆಯ ಸ್ಥಳೀಯ ಪಕ್ಷಗಳು ಆದಿಯಾಗಿ, ಭಾರತೀಯ ಜನತಾ ಪಕ್ಷವೂ ಸಹಿತ, ಒಂದು ಪಕ್ಷವಾಗಿ ಇಂದು ಅಪ್ರಸ್ತುತ ವಾಗಿವೆ. ಮೋದೀಜೀ, ಅಮಿತ್ ಶಾಜೀ, ಡಿ.ಕೆ.ಶಿವಕುಮಾರಜೀ ಇತ್ಯಾದಿ ನಾಯಕಮಣಿಗಳು ವಿಪರೀತ ಪ್ರಸ್ತುತರಾಗಿದ್ದಾರೆ.’’

ಪ್ರಸನ್ನರವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಬೇರೆ ಕೆಲವು ರಾಷ್ಟ್ರಗಳಲ್ಲೂ ಕೂಡ ಇದೇ ಪರಿಸ್ಥಿತಿಯನ್ನು ಅಂದರೆ ಅಮೇ ರಿಕಾದ ಡೊನಾಲ್ಡ್‍ಟ್ರಂಪ್, ರಷ್ಯಾದ ಪುಟಿನ್ ಎಂಬಿತ್ಯಾದಿ ನಾಯಕ ಮಣಿ ಗಳಲ್ಲಿ ಕಾಣಬಹುದು ಎಂದು ತಿಳಿಸಿ ದ್ದಾರೆ. ಆದರೆ ಪ್ರಸನ್ನರವರ ಲೇಖನದ ಉಳಿದ ಭಾಗ ಇಂದಿಗೆ ಅಪ್ರಸ್ತುತ ವಾದ ಅವರ ಎಡಪಂಥೀಯ ಸಿದ್ಧಾಂತಕ್ಕೆ ಅನುಗುಣವಾಗಿ ಬರೆಯಲ್ಪಟ್ಟಿದೆ. ಅದು ಬಿಡಿ..

ಇಲ್ಲಿ ಗಮನಿಸಬೇಕಾದ ವಿಷಯ ವೇನೆಂದರೆ ಪ್ರಸನ್ನ ಅವರು ಹೇಳಿದ ಇಂದಿನ ರಾಜಕಾರಣದ ವಿಕೃತ ಸ್ವರೂಪ ಹಾಗೂ ರಾಜಕಾರಣಿಗಳ ಸ್ವಾರ್ಥಮಯ ಮನಃಸ್ಥಿತಿ. “ಹೇಗಾದರೂ ಮಾಡು, ಏನಾದರೂ ಮಾಡು, ಆದರೆ ಅಧಿಕಾರ ಹಿಡಿ.”

ಈ ಸಂದರ್ಭದಲ್ಲಿ ಇನ್ನೊಂದು ವಿಷಯ ನೆನಪಿಗೆ ಬರುವುದೆಂದರೆ “ಇನ್ನು ಮುಂದೆ ಕುಮಾರಪರ್ವ’ ಎಂಬ ಅತಿಶಯೋಕ್ತಿಯೊಂದಿಗೆ ಜೆಡಿಎಸ್‍ನವರು ಮೈಸೂರಿನಲ್ಲಿ ಚುನಾ ವಣಾ ಪ್ರಚಾರವನ್ನು ಪ್ರಾರಂಭಿಸಿದ್ದು. ಪವಾಡ ಸದೃಶ್ಯವೋ ಎಂಬ ರೀತಿಯಲ್ಲಿ ಅದು ಸಾಧ್ಯವೇ ಇಲ್ಲ ಎಂಬ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು ಮುಖ್ಯ ಮಂತ್ರಿಯೇ ಆಗಿ ಬಿಟ್ಟಿದ್ದು. ಕುಮಾರ ಪರ್ವ ಶುರುವಾಗಿಯೇ ಬಿಟ್ಟಿದ್ದು…!

ಸಹಜವಾಗಿ, ಕಾಂಗ್ರೆಸ್‍ಗೆ 78 ಸ್ಥಾನವಿರುವುದರಿಂದ, ಮುಖ್ಯಮಂತ್ರಿ ಸ್ಥಾನ ಕಾಂಗ್ರೆಸ್‍ಗೆ ಲಭಿಸುತ್ತದೆ ಎಂದು ಕರ್ನಾಟಕದ ಜನರು ಭಾವಿಸಿದ್ದರು. ಆದರೆ ಕೇವಲ 38 ಸ್ಥಾನಗಳಿಸಿದ್ದ ಜೆಡಿಎಸ್‍ಗೆ ಮುಖ್ಯಮಂತ್ರಿ ಸ್ಥಾನ ಲಭಿಸಿದ್ದು ಪವಾಡವಲ್ಲದೆ ಮತ್ತೇನು?. ಶೃಂಗೇರಿ ಮಠದಲ್ಲಿ ಜೆಡಿಎಸ್ ನಾಯಕರು ನೆರವೇರಿಸಿದ ಹೋಮ- ಹವನದ ಫಲವೋ? ಅನೇಕ ದೇವ ಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಫಲವೋ? ಆ ಭಗವಂತ ನಿಗೇ ಗೊತ್ತು.

ಎಲ್ಲರಿಗೂ ತಿಳಿದಿರುವಂತೆ ಕುಮಾರ ಸ್ವಾಮಿಯವರು ಕರ್ನಾಟಕದ ಮುಖ್ಯ ಮಂತ್ರಿಯಾಗಿ ಈಗ ಎರಡನೇ ಬಾರಿ ಅಧಿಕಾರ ಸ್ವೀಕರಿಸಿದ್ದಾರೆ. ವಿಪರ್ಯಾಸ ವೆಂದರೆ ಹೆಚ್.ಡಿ.ಕುಮಾರಸ್ವಾಮಿ ಯವರು ಪ್ರಮಾಣವಚನ ಸ್ವೀಕರಿಸುವಾಗ ಅವರು ದೇವರ ಹೆಸರಿನಲ್ಲಿ ಮತ್ತು ಕರ್ನಾಟಕದ ಆರೂವರೆ ಕೋಟಿ ಜನತೆ ಹೆಸರಿನಲ್ಲಿ ಸ್ವೀಕರಿಸಿದರು.

ಆದರೆ ಅಧಿಕಾರ ವಹಿಸಿಕೊಂಡ ಮಾರನೇ ದಿನದಿಂದಲೇ, ಹಿಂದೆ-ಮುಂದೆ ನೋಡದೆ ರೈತರಿಗೆ ಕೊಟ್ಟ ಸಾಲ ಮನ್ನಾದ ಆಶ್ವಾಸನೆ ಬಗ್ಗೆ ಪ್ರಶ್ನೆ ಗರಿಗೆದರಿ ಜಿಜ್ಞಾಸೆ ಹುಟ್ಟಿಕೊಂಡಾಗ ಅವರು ಹೇಳಿದ ಮಾತು: ನಾನು ನನ್ನ ಸ್ಥಾನಕ್ಕೆ ಕರ್ನಾಟಕದ ಜನರಿಗೆ ಋಣಿಯಾಗಬೇಕಿಲ್ಲ. ನಾನು ರಾಹುಲ್ ಗಾಂಧಿಯವರಿಗೆ ಋಣಿಯಾಗಿದ್ದೇನೆ. ಹೌದು, ಒಂದು ದೃಷ್ಟಿಯಲ್ಲಿ ಅವರು ಹೇಳಿದ ಮಾತಿನಲ್ಲಿ ಕಟುಸತ್ಯವಿದೆ.

ಅದೇನೆ ಇರಲಿ ಈ ಸಂದರ್ಭದಲ್ಲಿ ನನಗೆ ನೆನಪಿಗೆ ಬರುವುದು ಅಮೇ ರಿಕಾದ 6ನೇ ಅಧ್ಯಕ್ಷ ಜಾನ್ ಕ್ವಿನ್ಸಿ ಆಡಮ್ಸ್ (1767-1848). ಇವರು ಚುನಾವಣೆ ನಂತರ ಹೆಚ್ಚು ಜನರ ಮತ ಗಳಿಸಿದರೂ ಅವರನ್ನು ಜನಪ್ರತಿ ನಿಧಿಗಳ ಸಭೆ (House of representatives) ಅಧ್ಯಕ್ಷರನ್ನಾಗಿ ಚುನಾಯಿಸಿತು. ಕಾರಣ, ಚುನಾವಣೆ ಯಲ್ಲಿ ಅವರಿಗೆ ಸಂವಿಧಾನದ ಪ್ರಕಾರ ಲಭಿಸಬೇಕಾದ ಮತ(Clear majority) ಲಭ್ಯವಾಗಿರಲಿಲ್ಲ. ನಮ್ಮ ಕುಮಾರಣ್ಣ, ಇಲ್ಲಿ ಮುಖ್ಯಮಂತ್ರಿ ಯಾಗಿದ್ದು ಸ್ವಲ್ಪಮಟ್ಟಿಗೆ ಇದೇ ರೀತಿ ಯಲ್ಲಿ. ಆದರೆ, ಆಡಮ್ಸ್ ಅವರನ್ನು ಜನಪ್ರತಿನಿಧಿಗಳ ಸಭೆ ಚುನಾಯಿಸಿದ ರೀತಿಯಲ್ಲಿ, ನಮ್ಮ ವಿಧಾನಸಭೆಯ ಎಲ್ಲಾ ಚುನಾಯಿತ ಸದಸ್ಯರು ಸೇರಿ ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಲಿಲ್ಲ. ಬದಲಿಗೆ, 104 ಸ್ಥಾನ ಗಳಿಸಿದ್ದ ಭಾಜಪ ಪಕ್ಷವನ್ನು ಆಡಳಿತ ದಿಂದ ದೂರವಿಡುವ ಏಕಮಾತ್ರ ಕಾರಣದಿಂದ, ನಮ್ಮ ಸಂವಿಧಾನ ದನ್ವಯ ಕಾಂಗ್ರೆಸ್ ಪಕ್ಷದ ಕೃಪಾ ಕಟಾಕ್ಷದಿಂದ ಆಯ್ಕೆ ಮಾಡಿದರು.

ಇನ್ನು ಒಂದು ಸ್ವಾರಸ್ಯಕರ ವಿಷಯವೆಂದರೆ, ಈ ಬದಲಾದ ಆಯ್ಕೆಯ ಪ್ರಕ್ರಿಯೆಯಿಂದಾಗಿ ಆಡಮ್ಸ್ ಅವರು ಸಂಪ್ರದಾಯದಂತೆ ದೇವರ ಹೆಸರಿನಲ್ಲಿ ಬೈಬಲ್ ಮೇಲೆ ಕೈ ಇಟ್ಟು ಪ್ರಮಾಣ ವಚನ ಸ್ವೀಕರಿಸಲಿಲ್ಲ. ಬದಲಾಗಿ ಅಮೇರಿಕಾದ ಸಂವಿಧಾನ ಪುಸ್ತಕದ ಮೇಲೆ ಕೈ ಇಟ್ಟು ಪ್ರಮಾಣ ವಚನ ಸ್ವೀಕರಿಸಿದರು.

ಅಂದ ಹಾಗೆ ಇತ್ತೀಚಿನ ದಿನಗಳಲ್ಲಿ ನಾವು ಮಂತ್ರಿ ಮಹೋದಯರು ಬೇಕಾಬಿಟ್ಟಿ ಹೆಸರುಗಳಲ್ಲಿ ಪ್ರಮಾಣ ವಚನ ಸ್ವೀಕರಿಸುವುದನ್ನು ನೋಡಿ ದ್ದೇವೆ. ದೇವರ ಹೆಸರಿನಲ್ಲಿ, ಅವರ ಮನೆ ದೇವರ ಹೆಸರಿನಲ್ಲಿ, ರೈತರ ಹೆಸರಿನಲ್ಲಿ, ಎಲ್ಲಾ ಜನರ ಹೆಸರಲ್ಲಿ ಮೊದಲಾಗಿ. ಈ ರೀತಿ ಮುಂದು ವರಿದರೆ ಮುಂದಿನ ದಿನಗಳಲ್ಲಿ ಪ್ರಮಾಣ ವಚನವನ್ನು ಅವರು ಯಾರ ಕೃಪಾ ಕಟಾಕ್ಷದಿಂದ ಪದವಿ ಪಡೆದಿದ್ದಾರೋ ಅವರ ಹೆಸರಿನಲ್ಲೋ ಅಥವಾ ಅವರಿಗೆ ಪ್ರಿಯವಾದ ಮೊಮ್ಮಗನ ಹೆಸರಿನಲ್ಲೋ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ. ಆದುದರಿಂದ ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ನಮ್ಮ ಸಂವಿಧಾನಕ್ಕೆ ತಿದ್ದುಪಡಿ ತಂದು ದೇವರು ಅಥವಾ ಸಂವಿಧಾನದ ಹೆಸರಿ ನಲ್ಲಿ ಮಾತ್ರ ಪ್ರಮಾಣ ವಚನ ಸ್ವೀಕರಿ ಸುವಂತೆ ಮಾಡುವ ಅಗತ್ಯವಿದೆ.

ಇನ್ನು ನಮ್ಮ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಯವರು ತಮ್ಮ ಆಡಳಿತವನ್ನು ಹೇಗೆ ನಡೆಸಬೇಕೆಂಬ ವಿಷಯ. ತಮಗೆ ಅಧಿಕಾರ ದೊರೆತಿದ್ದಕ್ಕಾಗಿ ಅವರು ರಾಹುಲ್ ಗಾಂಧಿಯವರಿಗೆ ಋಣಿ ಯಾಗಿರುವುದರಿಂದ, ರಾಹುಲ್ ಗಾಂಧಿಯವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ 2019ರ ಲೋಕಸಭಾ ಚುನಾವಣೆಗೆ ಅನುಕೂಲ ವಾಗುವ ಹಾಗೆ ಆಡಳಿತ ನಡೆಸ ಬೇಕೋ? ಅಥವಾ ಕರ್ನಾಟಕದ ಆರೂವರೆ ಕೋಟಿ ಜನರ ಆಶಯ ದಂತೆ ಆಡಳಿತ ನಡೆಸಬೇಕೋ?. ಇದು ಬಹಳ ಮುಖ್ಯವಾದ ಕುಮಾರ ಸ್ವಾಮಿಯವರ ಮುಂದಿರುವ ಆಯ್ಕೆ.

ಈ ಆಯ್ಕೆಯನ್ನು ಮಾಡಲು ಬುದ್ಧ ಹೇಳಿದ ಈ ಕೆಳಗಿನ ಒಂದು ಕಥೆ, ಬಹುಶಃ ಅವರಿಗೆ ಸಹಾಯಕ ವಾಗಬಹುದು.

ಒಬ್ಬ ರಾಜ ಅಹಂಕಾರದಿಂದ ಮೆರೆಯುತ್ತಿದ್ದ. ಆಡಳಿತ ಹದಗೆಟ್ಟು ಹೋಗಿತ್ತು. ಪ್ರಜೆಗಳನ್ನು ಮರೆತೇ ಬಿಟ್ಟಿದ್ದ. ಇದರಿಂದ ರೋಸಿ ಹೋಗಿದ್ದ ಪ್ರಜೆಗಳು ಗೌತಮ ಬುದ್ಧನ ಬಳಿ ಹೋಗಿ ರಾಜನ ದುರ್ವರ್ತನೆ ತೊಲಗಿಸುವ ಪರಿಹಾರ ಏನೆಂದು ಕೇಳಿದರು. ಅದಕ್ಕೆ ಬುದ್ಧ ಆ ರಾಜ ನನ್ನು ಕರೆಯಿಸಿ ಅವನಿಗೊಂದು ಕಥೆ ಹೇಳಿದ.

ಒಂದು ಹಳ್ಳಿಯಲ್ಲಿ ಒಬ್ಬ ಶ್ರೀಮಂತ ವ್ಯಾಪಾರಿ ಇದ್ದ. ಅವನಿಗೆ ನಾಲ್ಕು ಜನ ಹೆಂಡತಿಯರು. ವ್ಯಾಪಾರಿಗೆ ವಯಸ್ಸಾಗಿ ಸಾಯುವ ಹಂತ ತಲುಪಿದ. ಜ್ಯೋತಿಷಿಯೊಬ್ಬರು ಅವನಿಗೆ ಒಂದು ಸಲಹೆ ನೀಡಿ, `ನಿನ್ನ ಹೆಂಡತಿಯರೂ ನಿನ್ನೊಟ್ಟಿಗೇ ಸತ್ತರೆ ನೀನು ಸ್ವರ್ಗಕ್ಕೆ ಹೋಗು ತ್ತೀಯ’ ಎಂದರು.

ಇದನ್ನು ನಂಬಿದ ವ್ಯಾಪಾರಿ ಮೊದಲನೆಯ ಹೆಂಡತಿಯನ್ನು ಕರೆದು, `ನಾವಿಬ್ಬರೂ ಒಟ್ಟಿಗೆ ಸಾಯೋಣ. ಸ್ವರ್ಗಕ್ಕೆ ಹೋಗ ಬಹುದು’ ಎಂದ. ಅದಕ್ಕೆ ಆಕೆ, `ಇಲ್ಲ ನಾನು ನಿನ್ನೊಡನೆ ಸಾಯುವುದಿಲ್ಲ. ಆಸ್ತಿ, ಪಾಸ್ತಿ ನೋಡಿಕೊಳ್ಳಬೇಕು’ ಎಂದರು. ವ್ಯಾಪಾರಿ ಅವಳನ್ನು ಕಠಿಣ ಶಬ್ದಗಳಿಂದ ನಿಂದಿಸಿ ಆಚೆ ಕಳುಹಿಸಿದ.

ಎರಡನೆಯವಳು, `ನಾನೂ ಬರಲು ಆಗುವುದಿಲ್ಲ. ಮಕ್ಕಳ ಪಾಲನೆ, ಪೋಷಣೆ ಮಾಡಬೇಕು’ ಎಂದಳು. ಮೂರನೆಯವಳು, `ನಿಮ್ಮ ಮೇಲೆ ನನಗೆ ಅತಿಯಾದ ಪ್ರೀತಿಯೇನೋ ಇದೆ ನಿಜ, ಆದರೆ ಕೇವಲ ಸ್ಮಶಾನದ ತನಕ ಮಾತ್ರ ಬರಬಲ್ಲೆ’ ಎಂದಳು.

ಕೊನೆಗೆ ತನ್ನ ನಾಲ್ಕನೇ ಹೆಂಡತಿ ಯನ್ನು ಕರೆಯಿಸಿದ ವ್ಯಾಪಾರಿ. `ನೀನಾದರೂ ನನ್ನೊಟ್ಟಿಗೆ ಸಾಯು ವೆಯಾ, ಇಬ್ಬರೂ ಸ್ವರ್ಗಕ್ಕೆ ಹೋಗ ಬಹುದು’ ಎಂದ. ಅದಕ್ಕ ವಳು ಸಂತೋಷದಿಂದ ಒಪ್ಪಿ, `ಓಹೋ, ನಾನು ನಿಮ್ಮೊಂದಿಗೆ ಸಾಲಯಲು ಸದಾ ಸಿದ್ಧ. ಎಲ್ಲಿದ್ದರೂ ನಿಮ್ಮ ಜೊತೆ ಯಲ್ಲೇ ಇರುತ್ತೇನೆ’ ಎಂದಳು.

ಕಥೆಯನ್ನು ಪೂರ್ಣಗೊಳಿಸಿ ಬುದ್ಧ ನಕ್ಕ. `ನೋಡು, ಮೊದಲ ಹೆಂಡತಿ ಯಾರು ಗೊತ್ತಾ? ಆಕೆ ನಮ್ಮ ಐಶ್ವರ್ಯ, ಅಂತಸ್ತು. ಅವೆಂದೂ ನಮ್ಮೊಂದಿಗೆ ಬರುವು ದಿಲ್ಲ. ಎರಡನೆಯ ಹೆಂಡತಿ ನಮ್ಮ ಅಹಂಕಾರ, ಸಾರ್ವಭೌಮತ್ವ. ಅವೂ ನಮ್ಮೊಂದಿಗೆ ಬರುವುದಿಲ್ಲ. ಮೂರನೆಯ ಹೆಂಡತಿ ನಮ್ಮ ಬಂಧು, ಬಾಂಧವರು. ಅವರು ಸ್ಮಶಾನ ದವರೆಗೆ ಮಾತ್ರ ಬರುತ್ತಾರೆ. ನಾಲ್ಕನೆಯ ಹೆಂಡತಿಯೇ ನಮ್ಮ ಕರ್ಮ. ಅದು ಸದಾ ನಮ್ಮೊಂದಿಗೆ ಇರುತ್ತದೆ! ಇದನ್ನರಿತು ರಾಜ್ಯಭಾರ ನಡೆಸು ಎಂದು ತಿಳಿ ಹೇಳಿದ.

Email: [email protected]

Translate »