ದಸರಾ ಅದ್ಧೂರಿ ಮನರಂಜನೆ ಯುವ ದಸರಾ ಅಪ್ಪುಗೆ ಅರ್ಪಣೆ
ಮೈಸೂರು

ದಸರಾ ಅದ್ಧೂರಿ ಮನರಂಜನೆ ಯುವ ದಸರಾ ಅಪ್ಪುಗೆ ಅರ್ಪಣೆ

September 29, 2022

ಮೊದಲ ದಿನದ ಕಾರ್ಯಕ್ರಮದಲ್ಲಿ ಅಪ್ಪು ಅಭಿನಯದ ಹಾಡುಗಳ ರಸಗಾನ
ಮೆಗಾ ಇವೆಂಟ್ ‘ಯುವ ದಸರಾ’ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಾಲನೆ

ಮೈಸೂರು, ಸೆ.೨೮(ಎಂಕೆ)- ವಿಶ್ವ ಪ್ರಸಿದ್ಧ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅತ್ಯಂತ ಅದ್ಧೂರಿ ಮನರಂಜನಾ ಕಾರ್ಯಕ್ರಮ ವೆಂದೇ ಪರಿಗಣಿತ ‘ಯುವ ದಸರಾ-೨೦೨೨’ ಪವರ್‌ಸ್ಟಾರ್ ‘ಡಾ.ಪುನೀತ್ ರಾಜ್‌ಕುಮಾರ್’ ಅವರ ನೆನಪಿನೊಂದಿಗೆ ಬುಧವಾರ ವೈಭವದ ಚಾಲನೆ ಪಡೆದುಕೊಂಡಿತು.

ಜನಸಾಗರವೇ ತುಂಬಿದ್ದ ಮೈಸೂರು ಮಹಾ ರಾಜ ಕಾಲೇಜು ಮೈದಾನದಲ್ಲಿ ಬೆಳಕಿನ ಚಿತ್ತಾರದ ನಡುವೆ, ಸಿಡಿಲಬ್ಬರದ ಧ್ವನಿ ವರ್ಧಕಗಳ ಆರ್ಭಟ ಹಾಗೂ ವರ್ಣಮಯ ಬೃಹತ್ ವೇದಿಕೆಯಲ್ಲಿ ಡಾ.ಪುನೀತ್ ರಾಜ್ ಕುಮಾರ್ ಅವರ ಪತ್ನಿ ಶ್ರೀಮತಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಖ್ಯಾತ ನಟ ರಾಘ ವೇಂದ್ರ ರಾಜ್‌ಕುಮಾರ್, ಯುವ ನಟರಾದ ವಿನಯ್ ರಾಜ್‌ಕುಮಾರ್, ಧೀರನ್ ರಾಮ್ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮೇಯರ್ ಶಿವ ಕುಮಾರ್, ಶಾಸಕ ಎಲ್.ನಾಗೇಂದ್ರ, ಸಂಸದ ಪ್ರತಾಪ್‌ಸಿಂಹ, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಸೇರಿದಂತೆ ಹಲ ವಾರು ಗಣ್ಯರು, ಸಂಗೀತ ದಿಗ್ಗಜರು ದೀಪ ಬೆಳಗಿಸುವ ಮೂಲಕ ‘ಯುವ ದಸರಾ’ಗೆ ಚಾಲನೆ ನೀಡಿದರು. ಬಳಿಕ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಭಾವಪೂರ್ಣ ವಾಗಿ ಸ್ಮರಿಸಲಾಯಿತು.

ಅಪ್ಪು ನಮನ: ‘ಯುವ ದಸರಾ’ ಕಾರ್ಯಕ್ರಮದ ಮೊದಲ ದಿನ ಡಾ.ಪುನೀತ್ ರಾಜ್‌ಕುಮಾರ್ ಅಭಿನಯದ ಚಲನಚಿತ್ರಗಳ ಸೂಪರ್ ಹಿಟ್ ಹಾಡುಗಳನ್ನು ಪ್ರಸ್ತುತಪಡಿಸುವುದರ ಜೊತೆಗೆ ಅಮೋಘ ನೃತ್ಯ ಪ್ರದರ್ಶನದ ಮೂಲಕ ‘ಅಪ್ಪುಗೆ ನಮನ’ ಸಲ್ಲಿಸಲಾಯಿತು. ಸಂಗೀತ ದಿಗ್ಗಜರಾದ ಗುರುಕಿರಣ್, ವಿಜಯ್‌ಪ್ರಕಾಶ್, ಕುನಾಲ್ ಗಾಂಜಾವಾಲ ಹಾಗೂ ಅನುರಾಧ ಭಟ್ ತಮ್ಮ ಕಂಠಸಿರಿಯಿAದ ಅಪ್ಪು ನೆನೆದರೆ, ನೂರಾರು ನೃತ್ಯ ಕಲಾವಿದರು ಹೆಜ್ಜೆಹಾಕಿ ‘ಪುನೀತ್ ರಾಜ್‌ಕುಮಾರ್’ ಅವರ ನೃತ್ಯ ಶೈಲಿಯನ್ನು ಆನಂದಿಸುವAತೆ ಮಾಡಿದರು.

ಗೊಣಿಕೊಪ್ಪಲಿನ ಕಾವೇರಿ ಕಾಲೇಜು ವಿದ್ಯಾರ್ಥಿಗಳ ತಂಡದ ‘ಕೊಡವ ಸಾಂಸ್ಕೃತಿಕ ನೃತ್ಯ’ದೊಂದಿಗೆ ಆರಂಭಗೊAಡ ‘ಯುವ ದಸರಾ’ಗೆ ಮೈಸೂರು ನೃತ್ಯ ಕಲಾವಿದರ ತಂಡ ‘ಅಪ್ಪು’ ನಟನೆಯ ಹತ್ತಾರು ಹಾಡುಗಳಿಗೆ ಮನಮೋಹಕ ನೃತ್ಯ ಪ್ರದರ್ಶನ ನೀಡುವ ಮೂಲಕ ವರ್ಣರಂಜಿತ ಕಳೆತಂದರು. ವೇದಿಕೆ ಕಾರ್ಯಕ್ರಮ ಮುಗಿದ ಬಳಿಕ ನಿರೂಪಣೆಯ ಜವಾಬ್ದಾರಿ ಪಡೆದ ಖ್ಯಾತ ನಿರೂಪಕಿ ಅನುಶ್ರೀ, ಎಲ್ಲರ ನಗುವಿನಲ್ಲಿಯೂ ಪುನೀತ್ ರಾಜ್‌ಕುಮಾರ್ ಕಾಣಿಸುತ್ತಿದ್ದಾರೆ ಎಂದು ಹೇಳಿ ‘ಅಪ್ಪು ನಮನ’ವನ್ನು ‘ಅಪ್ಪು ಸಂಭ್ರಮ’ವನ್ನಾಗಿಸಿದರು.
ನAತರ ‘ಎದೆ ತುಂಬಿ ಹಾಡುವೆನು’ ತಂಡದ ಗಾಯಕರು ‘ಪವರ್’ ಸಿನಿಮಾ ‘ಧಮ್ ಪವರೇ’ ಹಾಡನ್ನು ಹಾಡಿ ರಂಜಿಸಿದರು. ನಟ ವಸಿಷ್ಠ ಸಿಂಹ, ‘ಅಭಿಮಾನಿಗಳೇ ನಮ್ಮನೆ ದೇವ್ರು’ ಎಂದಿದ್ದ ಪುನೀತ್ ರಾಜ್‌ಕುಮಾರ್ ಇಂದು ಅಭಿಮಾನಿಗಳಿಗೆ ದೇವರಾಗಿದ್ದಾರೆ. ಅವರ ಆದರ್ಶಗಳನ್ನು ಪಾಲಿಸುತ್ತಾ ನಮ್ಮಿಂದ ಸಾಧ್ಯವಾದರೆ ನಾಲ್ಕು ಜನಕ್ಕೆ ಸಹಾಯ ಮಾಡಿ ಎಂದರಲ್ಲದೆ ‘ರಾಜಕುಮಾರ’ ಚಿತ್ರದ ಹಾಡನ್ನು ಹಾಡಿ, ಅವರೊಂದಿಗೆ ಕಳೆದಿದ್ದ ದಿನಗಳನ್ನು ನೆನೆದರು. ಅಲ್ಲದೆ ತಮ್ಮದೆ ಶೈಲಿಯಲ್ಲಿ ಕೆಲ ಡೈಲಾಗ್‌ಗಳನ್ನು ಹೇಳಿ ಎಲ್ಲರನ್ನು ಸಂಭ್ರಮಿಸಿದರು.

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮದಲ್ಲಿ ಖ್ಯಾತಿ ಪಡೆದಿದ್ದ ಭಾವನ ಮತ್ತು ಇಬ್ರಾಹಿಂ ಅವರ ತಂಡ ‘ನಟಸಾರ್ವಭೌಮ’ ಚಿತ್ರದ ಹಾಡುಗಳು ಸೇರಿದಂತೆ ಕೆಲ ರಿಮಿಕ್ಸ್ ಹಾಡುಗಳಿಗೆ ನೃತ್ಯ ಪ್ರದರ್ಶನ ನೀಡಿ ‘ವಿ ಆರ್ ಲವ್ ಯು ಪವರ್ ಸ್ಟಾರ್’ ಎಂಬ ಘೋಷಣೆ ಮೊಳಗುವಂತೆ ಮಾಡಿದರು. ಗಾಯಕಿ ಅನುರಾಧ ಭಟ್ ‘ಆಕಾಶ್’ ಚಿತ್ರ ‘ಹಾಹಾ ಎಂಥಾ ಆ ಕ್ಷಣ ನೆನೆದರೆ ತಲ್ಲಣ’ ಹಾಡನ್ನು ಸುಮಧುರವಾಗಿ ಹಾಡುವ ಮೂಲಕ ಅಭಿಮಾನಿಗಳು ತಲೆತೂಗುವಂತೆ ಮಾಡಿದರು.

‘ಅಪ್ಪು ವಿ ಲವ್‌ಯು’: ‘ಮೈಲಾರಿ’ ಚಿತ್ರದ ‘ಊರಿಂದ ಓಡಿ ಬಂದ ಮೈಲಾಪುರ ಮೈಲಾರಿ’ ಹಾಡನ್ನು ಹಾಡುತ್ತಾ ವೇದಿಕೆಗೆ ಆಗಮಿಸಿದ ಸಂಗೀತ ದಿಗ್ಗಜ ಗುರುಕಿರಣ್, ‘ಅಪ್ಪು’ ಚಿತ್ರದ ‘ತಾಲಿಬಾನ್ ಅಲ್ಲ ಅಲ್ಲ’, ‘ಮೌರ್ಯ’ ಚಿತ್ರದ ‘ಉಸಿರಾಗುವೆ ಹಸಿರಾಗುವೆ’, ಅಮ್ಮ ಅಮ್ಮ ಐ ಲವ್‌ಯೂ’ ಹಾಡನ್ನು ಹಾಡುತ್ತಲೇ ‘ಅಪ್ಪು ಅಪ್ಪು ವಿ ಲವ್‌ಯೂ’ ಎಂದು ಸೋಗಸಾಗಿ ಹಾಡುವುದರೊಂದಿಗೆ ಅಭಿಮಾನಿಗಳು ಅಪ್ಪು ಅಭಿಮಾನವನ್ನೆ ಅಪ್ಪಿ ಮುದ್ದಾಡುವಂತೆ ಮಾಡಿದರು.
ಇದೇ ವೇಳೆ ‘ಅಪ್ಪು’ ನಿನಗಾಗಿ ಹಾಡುತ್ತೇನೆ ಎಂದು ವೇದಿಕೆಗೆ ಆಗಮಿಸಿದ ನಟ ರಾಘವೇಂದ್ರ ರಾಜ್‌ಕುಮಾರ್, ‘ಕಸ್ತೂರಿ ನಿವಾಸ’ ಚಿತ್ರದ ‘ಆಡಿಸಿ ನೋಡು ಬೀಳಿಸಿ ನೋಡು’, ‘ರಾಜಕುಮಾರ’ ಚಿತ್ರದ ‘ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ’ ಹಾಡನ್ನು ಹಾಡಿ ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿದರು. ಬಳಿಕ ನಟಿ ಕಾವ್ಯ ಮತ್ತು ತಂಡದ ಕಲಾವಿದರು ತಮ್ಮ ನೃತ್ಯ ವೈಭವದ ಮೂಲಕ ‘ಅಪ್ಪು ನಮ್ಮೆಲ್ಲರ ಸ್ವತ್ತು’ ಎಂದು ಸಾರಿದರು.

ವಿಜಯ್ ಪ್ರಕಾಶ್, ಕುನಾಲ್ ಗಾಂಜಾವಾಲಾ ಮಿಂಚು: ಖ್ಯಾತ ಹಿಂದಿ ಗಾಯಕ ಕುನಾಲ್ ಗಾಂಜಾವಾಲಾ ‘ಆಕಾಶ್’ ಚಿತ್ರ ‘ನಿನೇ ನಿನೇ ನನಗೆಲ್ಲ ನೀನೇ’, ಮಿಲನ ಚಿತ್ರದ ‘ಕಿವಿ ಮಾತೊಂದು ಹೇಳಲೆ ನಾನಿಂದು’ ಸೇರಿದಂತೆ ಹಲವು ಹಾಡುಗಳನ್ನು ಹಾಡಿದರೆ, ಕನ್ನಡದ ಖ್ಯಾತ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್, ತಮ್ಮ ಹಾಡಿನ ಮೂಲಕ ‘ಅಪ್ಪು ಅಜರಾಮರ’ ಎಂದು ಸಾರಿದರು. ನಂತರ ‘ಆಕಸ್ಮಿಕ’ ಚಿತ್ರದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡು ಸೇರಿದಂತೆ ಪುನೀತ್ ರಾಜ್‌ಕುಮಾರ್ ಅಭಿನಯದ ಚಲನಚಿತ್ರಗಳ ಸೂಪರ್ ಹಿಟ್ ಹಾಡುಗಳನ್ನು ಪ್ರಸ್ತುತಪಡಿಸಿ ಯುವ ಸಮೂಹವನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು

 

ರಾರಾಜಿಸಿದ ಕನ್ನಡ ಬಾವುಟ…
ಪುನೀತ್ ರಾಜ್‌ಕುಮಾರ್ ಭಾವಚಿತ್ರವನ್ನೊಳಗೊಂಡ ಕನ್ನಡ ಬಾವುಟಗಳು ಮಹಾರಾಜ ಕಾಲೇಜು ಮೈದಾನದಲ್ಲಿ ರಾರಾಜಿಸಿದವು. ಪುನೀತ್ ರಾಜ್‌ಕುಮಾರ್ ಅವರ ಸಾವಿರಾರು ಅಭಿಮಾನಿಗಳು ಕಾರ್ಯಕ್ರಮದ ಆರಂಭದಿAದ ಹಿಡಿದು ಮುಕ್ತಾಯದವರೆಗೂ ಬಾವುಟ ಹಾರಿಸಿದರು. ಹಲವರು ಪುನೀತ್ ರಾಜ್‌ಕುಮಾರ್ ಅವರ ಫೋಟೊಗಳನ್ನು ಹಿಡಿದು ಅಭಿಮಾನ ಮೆರೆಸಿದರು.

ಅವತ್ತು ‘ಅಪ್ಪು’ವನ್ನು ಪ್ರೀತಿಸುತ್ತಿದ್ದೀರಿ. ಇವತ್ತು ಪೂಜಿಸುತ್ತಿದ್ದೀರಿ. ಪ್ರತಿಯೊಬ್ಬರಲ್ಲಿಯೂ ಅಪ್ಪು ಕಾಣಿಸುತ್ತಿದ್ದಾನೆ. ಅಪ್ಪು ಈ ಜೀವ ನಿನಗಾಗಿ.
– ರಾಘವೇಂದ್ರ ರಾಜ್‌ಕುಮಾರ್

ಕರ್ನಾಟಕದ ಅತ್ಯಂತ ಜನಪ್ರಿಯ ನಟ ಪುನೀತ್ ರಾಜ್‌ಕುಮಾರ್. ಈ ವರ್ಷದ ‘ಯುವ ದಸರಾ’ವನ್ನು ಅವರ ಶ್ರೀಮತಿ ಹಾಗೂ ಕುಟುಂಬಸ್ಥರು ಉದ್ಘಾಟಿಸಿರುವುದು ಅವಿಸ್ಮರಣಿಯ.
– ಪ್ರತಾಪ್ ಸಿಂಹ, ಸಂಸದ

ಪುನೀತ್ ರಾಜ್‌ಕುಮಾರ್ ಕನ್ನಡದ ಹೃದಯವಂತ ನಟ. ಡಾ.ರಾಜ್‌ಕುಮಾರ್ ಅವರ ಹೆಸರನ್ನು ಉಳಿಸಲು ಬಂದ ಕನ್ನಡದ ಕಂದ. ಸೂರ್ಯ-ಚಂದ್ರ ಇರುವವರೆಗೂ ‘ಅಪ್ಪು ಅಜರಾಮರ’
– ಎಲ್.ನಾಗೇಂದ್ರ, ಶಾಸಕ

ಪುನೀತ್ ರಾಜ್‌ಕುಮಾರ್ ಅವರು ಪ್ರೀತಿಯಿಂದ ‘ಗಂಧದಗುಡಿ’ ಸಿನಿಮಾ ಮಾಡಿದ್ದಾರೆ. ನಾನು ಇದ್ದಂತೆಯೇ ತೊರಿಸಿ ಎಂಬ ಅವರ ಬಯಕೆಯಂತೆ ಚಿತ್ರೀಕರಣ ಮಾಡಲಾಗಿದೆ. ಅ.೨೮ ರಂದು ಬಿಡುಗಡೆಯಾಗುವ ‘ಗಂಧದಗುಡಿ’ ಸಿನಿಮಾವನ್ನು ವಿಶ್ವಮಟ್ಟದಲ್ಲಿ ಯಶಸ್ವಿಗೊಳಿಸುವ ಜವಾಬ್ದಾರಿ ಅಭಿಮಾನಿಗಳದ್ದಾಗಿದೆ.
– ಅಮೋಘ ವರ್ಷ, ‘ಗಂಧದಗುಡಿ’ ಸಿನಿಮಾ ನಿರ್ದೇಶಕ
ಕಣ್ಣೀರಿಟ್ಟ ಅಶ್ವಿನಿ

‘ಯುವ ದಸರಾ’ ಉದ್ಘಾಟನೆ ಬಳಿಕ ಡಾ.ಪುನೀತ್ ರಾಜ್‌ಕುಮಾರ್ ಕಡೆಯ ಚಿತ್ರ `ಗಂಧದ ಗುಡಿ’ ಸಿನಿಮಾ ಟೀಸರ್ ಪ್ರದರ್ಶಿಸಲಾ ಯಿತು. ಈ ವೇಳೆ ವೇದಿಕೆ ಮುಂಭಾಗ ದಲ್ಲಿ ಕುಳಿತಿದ್ದ ಅಶ್ವಿನಿ ಪುನೀತ್ ರಾಜ್‌ಕುಮಾರ್, ಪರದೆಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ದೃಶ್ಯ ಬಿಂಬಿತವಾಗುತ್ತಿದ್ದAತೆ ಭಾವುಕ ರಾಗಿ ಕಣ್ಣೀರು ಹಾಕಿದರು. ನಟ ರಾಘ ವೇಂದ್ರ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್, ಧೀರನ್ ರಾಮ್ ಕುಮಾರ್ ಕೂಡ ಭಾವುಕರಾದರು. ಈ ವೇಳೆ ಇಡೀ ಜನ ಸಮೂ ಹವೇ ಸ್ತಬ್ಧವಾಗಿತ್ತು. ಟೀಸರ್ ಮುಗಿದ ಕೂಡಲೇ ‘ಯುವ ದಸರಾ’ ವೇದಿಕೆಯಲ್ಲಿ ‘ಅಪ್ಪು ಅಪ್ಪು’ ಘೋಷಣೆ ಮುಗಿಲು ಮುಟ್ಟಿತ್ತು.

Translate »