ಹೊಸ ದಾಖಲೆ ಬರೆದ ಮೈಸೂರು ದಸರಾ ದಸರಾ ಉದ್ಘಾಟಿಸಿದ ಮೊದಲ ರಾಷ್ಟ್ರಪತಿ ದ್ರೌಪದಿ ಮುರ್ಮು
ಮೈಸೂರು

ಹೊಸ ದಾಖಲೆ ಬರೆದ ಮೈಸೂರು ದಸರಾ ದಸರಾ ಉದ್ಘಾಟಿಸಿದ ಮೊದಲ ರಾಷ್ಟ್ರಪತಿ ದ್ರೌಪದಿ ಮುರ್ಮು

September 27, 2022

ಮೈಸೂರು, ಸೆ. 26(ಆರ್‍ಕೆ)- ಇದೇ ಮೊದಲ ಬಾರಿ ಭಾರತದ ಘನತೆವೆತ್ತ ರಾಷ್ಟ್ರಪತಿ ದ್ರೌಪದಿ ಮುರ್ಮು, ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸುವ ಮೂಲಕ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದಿದ್ದಾರೆ.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಾಡಿನ ಅಧಿ ದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಅಗ್ರಪೂಜೆ ನೆರವೇರಿಸಿದ ದ್ರೌಪದಿ ಮುರ್ಮು ಅವರು, 9 ದಿನಗಳ ವಿಶ್ವವಿಖ್ಯಾತ ಶರ ನ್ನವರಾತ್ರಿ ಉತ್ಸವಕ್ಕೆ ಇಂದು ಚಾಲನೆ ನೀಡಿದರು. ರಾಷ್ಟ್ರಪತಿಯಾಗಿ ಅಧಿ ಕಾರ ಸ್ವೀಕರಿಸಿದ ಬಳಿಕ ಇದೇ ಪ್ರಥಮ ಬಾರಿ ಕರ್ನಾಟಕಕ್ಕೆ ಆಗಮಿಸಿದ ಮುರ್ಮು ಅವರು, ದೆಹಲಿಯಿಂದ ನೇರವಾಗಿ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿ, ಬೆಳಗ್ಗೆ 9.55 ಗಂಟೆಗೆ ಕಾರಿ ನಲ್ಲಿ ಚಾಮುಂಡಿಬೆಟ್ಟ ತಲುಪಿದರು.

ನೇರವಾಗಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ಜಿ.ಟಿ. ದೇವೇಗೌಡರೊಂದಿಗೆ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ನಂತರ, ಬೆಳಗ್ಗೆ 10.05 ಗಂಟೆಗೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಯೋಜಿಸಿದ್ದ ವೇದಿಕೆಗೆ ಆಗಮಿಸಿದ ರಾಷ್ಟ್ರಪತಿಗಳು, ಅಲಂಕೃತ ಬೆಳ್ಳಿರಥದಲ್ಲಿ ಆಸೀನಳಾಗಿದ್ದ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಬೆಳಗ್ಗೆ 10.08 ಗಂಟೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಮುರ್ಮು ಅವರು ಅಗ್ರಪೂಜೆ ನೆರವೇರಿಸುವ ಮೂಲಕ 2022ರ ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.

ಮೈಸೂರು ಸಿಲ್ಕ್ ಸೀರೆ ಧರಿಸಿದ್ದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರು ಪೇಟ ತೊಡಿಸಿ, ತಾಯಿ ಚಾಮುಂಡೇಶ್ವರಿಯ ಬೆಳ್ಳಿ ವಿಗ್ರಹ ನೀಡಿ ಆತ್ಮೀಯವಾಗಿ ಗೌರವ ಸಮರ್ಪಣೆ ಮಾಡಿದರು.
ವೇದಿಕೆ ಏರುತ್ತಿದ್ದಂತೆಯೇ ಸಭಿಕರಿಗೆ ಕೈಮುಗಿದು ತಮ್ಮ ಆಸನದತ್ತ ಸಾಗಿ ರಾಷ್ಟ್ರಪತಿಗಳು ನಿಲ್ಲುತ್ತಿದ್ದಂತೆಯೇ ರಾಷ್ಟ್ರಗೀತೆ ಮೊಳಗಿತು. ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದ ಬಳಿಕ ಮುರ್ಮು ಅವರು ವೇದಿಕೆ ಎಡಭಾಗಕ್ಕೆ ತೆರಳಿ ಬೆಳ್ಳಿರಥದಲ್ಲಿ ವಿರಾಜಮಾನಳಾಗಿದ್ದ ತಾಯಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುತ್ತಿದ್ದಂತೆಯೇ ನೆರೆದಿದ್ದ ಜನರಿಂದ ಹರ್ಷೋದ್ಘಾರ ಕೇಳಿಬಂದಿತು.

ನಂತರ ಅವರು ನಾಡಿನ ಜನತೆಗೆ ದಸರಾ ಮಹೋತ್ಸವಕ್ಕೆ ಶುಭ ಸಂದೇಶ ನೀಡಿದರು. “ತಾಯಿ ಚಾಮುಂಡೇಶ್ವರಿಗೆ ನನ್ನ ನಮಸ್ಕಾರಗಳು. ಎಲ್ಲಾ ಸಹೋದರ-ಸಹೋದರಿಯರಿಗೆ ನನ್ನ ನಮಸ್ಕಾರಗಳು” ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಮುರ್ಮು ಅವರಿಗೆ ಸಭಿಕರು ಭಾರೀ ಕರತಾಡನದೊಂದಿಗೆ ಪ್ರೀತಿಯ ಗೌರವ ಸಮರ್ಪಿಸಿದರು.

ಅದೇ ವೇಳೆ ಉಪಸ್ಥಿತರಿದ್ದ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಮಾತನಾಡಿದರು. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವ ವಿ. ಸುನೀಲ್‍ಕುಮಾರ್ ಸಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ರಾಷ್ಟ್ರಪತಿ ಸೇರಿದಂತೆ ಗಣ್ಯರನ್ನು ಸ್ವಾಗತಿಸಿದರಲ್ಲದೆ, ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಅಭಿನಂದಿಸಿದರು.
ರಾಷ್ಟ್ರಪತಿಗಳ ಕಚೇರಿಯ ನಿರ್ದೇಶನದಂತೆ ರಾಷ್ಟ್ರಪತಿಗಳು ಪಾಲ್ಗೊಳ್ಳುವ ಸಮಾರಂಭದಲ್ಲಿ ಸೀಮಿತ ಸಂಖ್ಯೆಯ ಗಣ್ಯಾತಿಗಣ್ಯರು ಮಾತ್ರ ವೇದಿಕೆಯಲ್ಲಿ ಹಾಜರಿರಬೇಕೆಂಬ ಶಿಷ್ಟಾಚಾರ ಪಾಲಿಸುವ ಸಲುವಾಗಿ ಮೈಸೂರಿನ ಪ್ರಥಮ ಪ್ರಜೆ, ಮೇಯರ್ ಶಿವಕುಮಾರ್, ಅಧ್ಯಕ್ಷತೆ ವಹಿಸಬೇಕಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ, ಸಂಸದ ಪ್ರತಾಪ್ ಸಿಂಹ, ಉಪ ಮೇಯರ್ ಡಾ.ರೂಪ, ಶಾಸಕರು, ವಿಧಾನಪರಿಷತ್ ಸದಸ್ಯರು, ವಿವಿಧ ನಿಗಮ-ಮಂಡಳಿ ಅಧ್ಯಕ್ಷರುಗಳು, ವೇದಿಕೆ ಮುಂಭಾಗ ವ್ಯವಸ್ಥೆ ಮಾಡಿದ್ದ ಪ್ರತ್ಯೇಕ ಎನ್‍ಕ್ಲೋಸರ್‍ನಲ್ಲಿ ಆಸೀನರಾಗಬೇಕಾಯಿತು.

ರಾಷ್ಟ್ರಪತಿಗಳ ಆಗಮನದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿ ಆದಿವಾಸಿ ಮತ್ತು ಗಿರಿಜನ ಕಲಾವಿದರಿಗೆ ಜಾನಪದ ನೃತ್ಯ ಪ್ರದರ್ಶನಕ್ಕೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತಲ್ಲದೆ, ದ್ರೌಪದಿ ಮುರ್ಮು, ಸಮಾರಂಭದ ಬಳಿಕ ವೇದಿಕೆ ಬಳಿ ಮೈಸೂರು ಜಿಲ್ಲೆಯ ಆಯ್ದ 14 ಆದಿವಾಸಿಗಳೊಂದಿಗೆ 5 ನಿಮಿಷ ಸಂವಾದ ನಡೆಸಿದರು. ನಂತರ ಆದಿವಾಸಿ ಬುಡಕಟ್ಟು ಸಮುದಾಯದ ಪ್ರತಿನಿಧಿಗಳು ರಾಷ್ಟ್ರಪತಿಗಳೊಂದಿಗೆ ಫೋಟೋ ತೆಗೆಸಿಕೊಂಡು ಛಾಯಾ ಮಿಲನದಲ್ಲಿ ಪಾಲ್ಗೊಂಡರು.

ನಂತರ ರಾಷ್ಟ್ರಪತಿಗಳು ರಾಜ್ಯಪಾಲ, ಮುಖ್ಯಮಂತ್ರಿ, ಕೇಂದ್ರ ಸಚಿವರೊಂದಿಗೆ ಬೆಳಗ್ಗೆ 11.05 ಗಂಟೆಗೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದರು.

ರಾಜ್ಯ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ಎಡಿಸಿ ಡಾ. ಬಿ.ಎಸ್. ಮಂಜುನಾಥಸ್ವಾಮಿ, ಪಾಲಿಕೆ ಆಯುಕ್ತ ಲಕ್ಷ್ಮೀಕಾಂತರೆಡ್ಡಿ, ಮುಡಾ ಆಯುಕ್ತ ಎನ್.ಕೆ. ದಿನೇಶ್‍ಕುಮಾರ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

ಡಿಸಿಪಿಗಳಾದ ಪ್ರದೀಪ್ ಗುಂಟಿ, ಎಂ.ಎಸ್. ಗೀತಾ ಪ್ರಸನ್ನ ಮೇಲ್ವಿಚಾರಣೆಯಲ್ಲಿ ನಾಡಹಬ್ಬದ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ ಇನ್ನಿಲ್ಲದ ಬಂದೋಬಸ್ತ್ ವ್ಯವಸ್ಥೆ ಮಾಡಿ, ಕಟ್ಟೆಚ್ಚರ ವಹಿಸಲಾಗಿತ್ತು.

Translate »