ಅರಮನೆ ಅಂಗಳದಲ್ಲಿ ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಚಾಲನೆ
ಮೈಸೂರು

ಅರಮನೆ ಅಂಗಳದಲ್ಲಿ ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಚಾಲನೆ

September 27, 2022

ಮೈಸೂರು,ಸೆ.26(ಎಸ್‍ಬಿಡಿ)-ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮ ಗಳಿಗೆ ಅರಮನೆ ಅಂಗಳದ ಭವ್ಯ ವೇದಿಕೆಯಲ್ಲಿ ಸೋಮವಾರ ಸಂಜೆ ವಿಧ್ಯುಕ್ತ ಚಾಲನೆ ದೊರಕಿತು.

ತಾಯಿ ಚಾಮುಂಡೇಶ್ವರಿಯ ಶ್ರೀರಕ್ಷೆ ಬೇಡುವ `ಕಾಯೌ ಶ್ರೀ ಗೌರಿ ಕರುಣಾ ಲಹರಿ…’ ಕೃತಿಯ ಗಾಯನ ಹಾಗೂ ನಾಡಗೀತೆಯೊಂದಿಗೆ ಆರಂಭವಾದ ಸಮಾ ರಂಭದಲ್ಲಿ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗ್ಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾ ಪುರೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್, ಕನ್ನಡ ಮತ್ತು ಸಂಸ್ಕøತಿ ಸಚಿವ ಸುನಿಲ್ ಕುಮಾರ್, ಶಾಸಕ ಎಸ್.ಎ.ರಾಮದಾಸ್ ಇನ್ನಿತರ ಗಣ್ಯರು ದೀಪ ಬೆಳಗಿಸುವ ಮೂಲಕ ಅರಮನೆ ಸೇರಿ ದಂತೆ ವಿವಿಧ 8 ವೇದಿಕೆಗಳಲ್ಲಿ ನಡೆಯಲಿರುವ ವೈಭ ವದ ಸಾಂಸ್ಕøತಿಕ ಹಬ್ಬಕ್ಕೆ ಚಾಲನೆ ನೀಡಿದರು.
ಇದೇ ವೇಳೆ ಉಸ್ತಾದ್ ಫಯಾಜ್ ಖಾನ್ ಅವರ ಶಿಷ್ಯೆ, ಪ್ರಸಿದ್ಧ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸಾಧಕಿ ಲಲಿತ್ ಜೆ.ರಾವ್ ಅವರಿಗೆ ಮೈಸೂರು ಪೇಟ ತೊಡಿಸಿ, ಪ್ರಶಸ್ತಿ ಫಲಕ, 5 ಲಕ್ಷ ರೂ. ಗೌರವ ಧನ, ಸ್ಮರಣಿಕೆ ಮತ್ತು ಸರಸ್ವತಿ ಪ್ರತಿಮೆ ಸಹಿತ `ರಾಜ್ಯ ಸಂಗೀತ ವಿದ್ವಾನ್’ ಪ್ರಶಸ್ತಿ ಪ್ರದಾನ ಮಾಡಿ, ಸತ್ಕರಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿ, ಎಲ್ಲರಿಗೂ ದಸರಾ ಶುಭಾಶಯ ತಿಳಿಸಿದ ವಿದುಷಿ ಲಲಿತ್ ಜೆ.ರಾವ್, ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ನಮ್ಮ ಗುರುಗಳಾದ ಉಸ್ತಾದ್ ಫಯಾಜ್ ಖಾನ್ ಅವರು ಸಂಗೀತ ಕಚೇರಿ ನೀಡಿದ್ದರು. ಆ ವೇಳೆ ಮಹಾರಾಜರು `ಅಫ್ತಾಬ್-ಎ-ಮೌಸಿಕಿ(ಸಂಗೀತದ ಸೂರ್ಯ)’ ಬಿರುದು ನೀಡಿ ಅಭಿನಂದಿಸಿದ್ದರಂತೆ. ಆಗಿನಿಂದ ಗುರುಗಳನ್ನು ಆ ಬಿರುದಿನೊಂದಿಗೆ ಗುರುತಿಸಲಾಗಿತ್ತು. ಇದೀಗ ಅರಮನೆ ಅಂಗಳದಲ್ಲೇ ಕರ್ನಾಟಕ ಸರ್ಕಾರದಿಂದ ನಾನು ಪ್ರಶಸ್ತಿ ಸ್ವೀಕರಿಸಿದ್ದಕ್ಕೆ ಅತೀವ ಸಂತೋಷವಾಗಿದೆ. ಮಾತನಾಡುವುದಕ್ಕೂ ಆಗುತ್ತಿಲ್ಲ ಎಂದು ಬಾವುಕರಾಗಿ ನುಡಿದರು.

ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗ್ಡೆ ಕಾಗೇರಿ ಮಾತನಾಡಿ, ಸಂಗೀತ ಕ್ಷೇತ್ರದ ಸಾಧಕಿ, ಸಂಗೀತ ಮತ್ತು ಸಂಸ್ಕøತಿ ಬಗ್ಗೆ ಅಪಾರ ಒಲವಿರುವ ಹಿರಿಯರಾದ ಲಲಿತ್ ಜೆ.ರಾವ್ ಅವರಿಗೆ `ರಾಜ್ಯ ಸಂಗೀತ ವಿದ್ವಾನ್’ ಪ್ರಶಸ್ತಿ ನೀಡಿದ್ದು ಅತ್ಯಂತ ಹೆಮ್ಮೆಯ ಸಂಗತಿ. ಈ ಬಾರಿ ದಸರಾ ಮಹೋತ್ಸವ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದು. ಹಿಂದೆ ರಾಷ್ಟ್ರಪತಿಗಳು ದಸರಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರಬಹುದು. ಆದರೆ ರಾಷ್ಟ್ರಪತಿಯವರೇ ದಸರಾಗೆ ಚಾಲನೆ ನೀಡಿದ್ದು ಇದೇ ಮೊದಲು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿ, ದಸರಾ ಉದ್ಘಾಟಿಸುವ ಮೂಲಕ ಶ್ರೇಷ್ಠ ಪರಂಪರೆ ಜಗತ್ತಿನಲ್ಲಿ ಮತ್ತಷ್ಟು ಪಸರಿಸಲು ಕಾರಣವಾಗಿದೆ. ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಸಾಂಸ್ಕøತಿಕ ಕಾರ್ಯಕ್ರಮಗಳು ಸೂಕ್ತ ವಾತಾವರಣ ಸೃಷ್ಟಿಸುತ್ತವೆ. ನಮ್ಮ ನಾಡಿನ ಸಮೃದ್ಧ ಕಲೆ, ಸಾಹಿತ್ಯ, ಸಂಸ್ಕøತಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಈ ಸಂಕಲ್ಪ ಮನೆ ಮನೆಯಲ್ಲೂ ಅನುಷ್ಠಾನವಾಗಬೇಕು ಎಂದು ಆಶಿಸಿದರು.

ದುಷ್ಟಶಕ್ತಿ ಬಗ್ಗೆ ಎಚ್ಚರ: ಸ್ವಾತಂತ್ರ್ಯ ಅಮೃತಮಹೋತ್ಸವದ ಸಂದರ್ಭದಲ್ಲಿ ಹಿಂದಿರುಗಿ ನೋಡಿದರೆ ದೇಶದಲ್ಲಿ ಸಾಕಷ್ಟು ಸಾಧನೆಗಳಾಗಿದೆ. ಹಾಗೆಯೇ ಸಾಕಷ್ಟು ಸವಾಲುಗಳೂ ನಮ್ಮ ಮುಂದಿವೆ. ಶತ್ರು ರಾಷ್ಟ್ರಗಳ ದುಷ್ಟಶಕ್ತಿಯನ್ನು ಸಂಹರಿಸಲು ಗಡಿಗಳಲ್ಲಿ ಸೈನಿಕರಿದ್ದಾರೆ. ಆದರೆ ನಮ್ಮ ನಡುವೆಯೇ ಇರುವ ದುಷ್ಟಶಕ್ತಿಗಳ ಬಗ್ಗೆ ಎಚ್ಚರವಾಗಿರಬೇಕು. ಭಾರತೀಯ ಪಾರಂಪರಿಕ, ಸಾಂಸ್ಕøತಿಕ ವಿಚಾರಗಳ ವಿರುದ್ಧ, ಶ್ರೀರಾಮ, ಭಗವದ್ಗೀತೆ, ಗೋವು ಸೇರಿದಂತೆ ಹಿಂದೂಗಳ ನಂಬಿಕೆ ಹಾಗೂ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡುವ ದುಷ್ಟಶಕ್ತಿಗಳಿವೆ. ಉಗ್ರವಾದ, ನಕ್ಸಲ್ ವಾದ ಯಾವುದೋ ಸಂಘಟನೆಗಳ ಹೆಸರಿನಲ್ಲಿ ತಲೆ ಎತ್ತುತ್ತಿವೆ. ಈ ಬಗ್ಗೆ ನಿರ್ಲಕ್ಷ್ಯರಾದರೆ ಸ್ವಾತಂತ್ರ್ಯ ಸವಿಯನ್ನು ಮುಂದಿನ ಪೀಳಿಗೆಗೆ ಉಳಿಸುವುದು ಕಷ್ಟವಾಗುತ್ತದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗದಲ್ಲೂ ಮೌಲ್ಯ ಕುಸಿಯುತ್ತಿದೆ. ಈ ವಿಷವರ್ತುಲದಿಂದ ಹೊರ ಬಂದು ಪ್ರೀತಿ-ವಿಶ್ವಾಸದಿಂದ ಬದುಕುವ ವಾತಾವರಣ ಸೃಷ್ಟಿಯಾಗಬೇಕು. ಪಾಶ್ಚಿಮಾತ್ಯ ಸಂಸ್ಕøತಿಯಿಂದ ಹೊರಬಂದು ಭಾರತದ ಶ್ರೇಷ್ಠ ಪರಂಪರೆ ಮರುಕಳಿಸಬೇಕು. ಮಾನವ ಸಹಜ ದೋಷಗಳನ್ನು ನಿವಾರಿಸಿಕೊಂಡು, ದುಷ್ಟಶಕ್ತಿಗಳ ಬಗ್ಗೆ ಜಾಗೃತರಾಗಿ ಆದರ್ಶ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಬದ್ಧರಾಗಬೇಕು. ಇದಕ್ಕೆ ಈ ದಸರಾ ಮಹೋತ್ಸವ ಪ್ರೇರಣೆಯಾಗಲಿ ಎಂದು ನುಡಿದರು.

ಮಾದರಿ ರಾಜಪರಂಪರೆ: ವಿಧಾನಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಮಾತನಾಡಿ, ಸ್ವಾತಂತ್ರ್ಯಪೂರ್ವದಲ್ಲಿದ್ದ 500ಕ್ಕೂ ಹೆಚ್ಚು ರಾಜಮನೆತನಗಳಲ್ಲಿ ಮೈಸೂರು ರಾಜಪರಂಪರೆ ಮಾದರಿಯಾಗಿದೆ. ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ಪರಿಚಯಿಸಿದ್ದರು. ಹಾಗೆಯೇ ಮೈಸೂರಿನಲ್ಲಿ ರಾಜರ ಆಳ್ವಿಕೆಯಿದ್ದರೂ ಅದು ಪ್ರಜಾತಂತ್ರ ವ್ಯವಸ್ಥೆಯಂತೆ ನಡೆದಿತ್ತು ಎಂದು ಬಣ್ಣಿಸಿದರು.

ವೈವಿದ್ಯಮಯ ಕಾರ್ಯಕ್ರಮ: ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಈ ಬಾರಿ ವೈವಿದ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಅ.2ರಂದು ಅರಮನೆ ಮುಂಭಾಗ ಸೂರ್ಯೋದಯದಿಂದ ಸೂರ್ಯಾಸ್ತಮನದವರೆಗೆ ಸುದೀರ್ಘ ಸಂಗೀತ ಕಾರ್ಯಕ್ರಮದಲ್ಲಿ ಮೂರು ತಲೆಮಾರಿನ ಕಲಾವಿದರು ರಸದೌತಣ ನೀಡಲಿದ್ದಾರೆ. ಪ್ರಧಾನಿ ಮೋದಿ ಅವರು ಇಲ್ಲಿ ಯೋಗ ದಿನಾಚರಣೆಯಲ್ಲಿ ಭಾಗಿಯಾದ ನಂತರ ಅರಮನೆಗೆ ಭೇಟಿ ನೀಡುವವರ ಸಂಖ್ಯೆ ದ್ವಿಗುಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮಹಾತ್ಮರ ಸ್ಮರಣೆ: ಮೈಲ್ಯಾಕ್ ಅಧ್ಯಕ್ಷ ರಘು ಆರ್.ಕೌಟಿಲ್ಯ ಮಾತನಾಡಿ, ಮೈಸೂರು ರಾಜಪರಂಪರೆಯ 10ನೇ ಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್, ಮಹಾರಾಣಿ ವಾಣಿ ವಿಲಾಸ ಸನ್ನಿಧಿ ಹೀಗೆ ರಾಜಮನೆತನದವರ ಸ್ಮರಿಸಿಕೊಳ್ಳದಿದ್ದರೆ ದಸರಾ ಉತ್ಸವ ಅಪೂರ್ಣವಾಗುತ್ತದೆ. ಇವರೊಂದಿಗೆ ವೀಣೆ ಶೇಷಣ್ಣ, ಬಿಡಾರಂ ಕೃಷ್ಣಪ್ಪ, ಪಿಟೀಲು ಚೌಡಯ್ಯ ಅವರಂತಹ ಮಹಾನ್ ಸಂಗೀತ ಸಾಧಕರನ್ನೂ ನೆನಪಿಸಿಕೊಳ್ಳಬೇಕು. ಕನ್ನಡ ಇರುವುದೇ ಸಾಂಸ್ಕøತಿಕ ವೈಭವದಿಂದ, ಇದಕ್ಕೆ ದಸರಾ ಉತ್ಸವ ವೇದಿಕೆಯಾಗಿದೆ ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮದಲ್ಲಿ ಮೇಯರ್ ಎಂ.ಶಿವಕುಮಾರ್, ಉಪ ಮೇಯರ್ ಜಿ.ರೂಪಾ, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಪಂ ಸಿಇಓ ಬಿ.ಆರ್.ಪೂರ್ಣಿಮಾ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಮಣ್ಯ, ಸಾಂಸ್ಕøತಿಕ ಉಪ ಸಮಿತಿ ಅಧ್ಯಕ್ಷ ಸೋಮಸುಂದರ್ ಮತ್ತಿತರರು ಉಪಸ್ಥಿತರಿದ್ದರು.

Translate »