‘ನೈಟ್ ಕಫ್ರ್ಯೂ’ಗೆ ಮೈಸೂರು  ಜಿಲ್ಲಾ ಪೊಲೀಸರು ಸಜ್ಜು
ಮೈಸೂರು

‘ನೈಟ್ ಕಫ್ರ್ಯೂ’ಗೆ ಮೈಸೂರು ಜಿಲ್ಲಾ ಪೊಲೀಸರು ಸಜ್ಜು

December 28, 2021

ಮೈಸೂರು, ಡಿ. 27(ಆರ್‍ಕೆ)- ನಾಳೆ (ಡಿ. 28)ಯಿಂದ 2022ರ ಜನವರಿ 7ರವರೆಗೆ ಪ್ರತೀದಿನ ರಾತ್ರಿ 10ರಿಂದ ಮುಂಜಾನೆ 5 ಗಂಟೆವರೆಗೆ ರಾತ್ರಿ ಕಫ್ರ್ಯೂ ಆದೇಶವನ್ನು ಪರಿಣಾಮ ಕಾರಿಯಾಗಿ ಜಾರಿಗೊಳಿಸಲು ಮೈಸೂರು ನಗರ ಮತ್ತು ಜಿಲ್ಲಾ ಪೊಲೀಸರು ಸರ್ವ ರೀತಿಯಲ್ಲಿ ಸಜ್ಜುಗೊಂಡಿದ್ದಾರೆ.
ಭಾನುವಾರವಷ್ಟೇ ರಾಜ್ಯ ಸರ್ಕಾ ರವು, ಹೊಸ ವರ್ಷಾಚರಣೆಯನ್ನು ಗಮನದಲ್ಲಿರಿಸಿಕೊಂಡು ಸಂಭವ ನೀಯ ಒಮಿಕ್ರಾನ್ ಸೋಂಕು ಹರಡ ದಂತೆ ತಡೆಯಲು 10 ದಿನಗಳ ನೈಟ್ ಕಫ್ರ್ಯೂವನ್ನು ಜಾರಿಗೊಳಿಸಲು ಕೆಲ ನಿರ್ಬಂಧದೊಂದಿಗೆ ಆದೇಶ ಹೊರಡಿ ಸುತ್ತಿದ್ದಂತೆಯೇ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಆರ್. ಚೇತನ್, ಸಿಬ್ಬಂದಿ ಸಜ್ಜಾಗು ವಂತೆ ಸೂಚನೆ ನೀಡಿದ್ದಾರೆ.

ಸರ್ಕಾರದ ಆದೇಶದನ್ವಯ ಮಂಗಳ ವಾರದಿಂದ 2022ರ ಜನವರಿ 7ರವರೆಗೆ ಪ್ರತೀದಿನ ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆವರೆಗೆ ತುರ್ತು ಸೇವೆ ಮತ್ತು ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ವ್ಯಾಪಾರ-ವಹಿವಾಟು, ಹೋಟೆಲ್, ಬಾರ್,
ರೆಸ್ಟೋರೆಂಟ್, ಕ್ಲಬ್, ಪಬ್ ಹಾಗೂ ಸಂಚಾರವನ್ನು ನಿರ್ಬಂಧಿ ಸಲಾಗಿದೆ. ಅಂಗಡಿ-ಮುಂಗಟ್ಟು, ಚಿತ್ರಮಂದಿರ, ಮಾಲ್, ವಾಣಿಜ್ಯ ಕೇಂದ್ರ, ಸಭೆ-ಸಮಾರಂಭಗಳು ಸೇರಿದಂತೆ ಎಲ್ಲಾ ರೀತಿಯ ಚಟುವಟಿಕೆಗಳನ್ನು ರಾತ್ರಿ 10 ಗಂಟೆಗೆ ಕಡ್ಡಾಯವಾಗಿ ಬಂದ್ ಮಾಡಬೇಕು. ಆನ್‍ಲೈನ್ ಮೂಲಕ ಆರ್ಡರ್ ಮಾಡಿದ ಗ್ರಾಹಕರಿಗೆ ಆಹಾರ ಮತ್ತು ಔಷಧಿಗಳನ್ನು ಮನೆ-ಮನೆಗೆ ತಲುಪಿಸಲು ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ತಿಳಿಸಿದ್ದಾರೆ. ರಾತ್ರಿ 9.30 ಗಂಟೆಯಿಂದಲೇ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಪಬ್ಲಿಕ್ ಅಡ್ರೆಸಿಂಗ್ ಸಿಸ್ಟಂ ಮೂಲಕ ಅಂಗಡಿಗಳನ್ನು ಮುಚ್ಚುವಂತೆ ಪ್ರಕಟಿ ಸಲಾಗುವುದು. ರಾತ್ರಿ 10 ಗಂಟೆ ನಂತರ ವಾಣಿಜ್ಯ ವಹಿವಾಟು ಮುಂದುವರಿಸು ವುದು, ಅನಗತ್ಯವಾಗಿ ಓಡಾಡುವುದು, ವಾಹನ ಸಂಚಾರ ಕಂಡುಬಂದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಪೊಲೀಸ್ ಸಿಬ್ಬಂದಿ ಸನ್ನದ್ಧರಾಗಿದ್ದಾರೆ ಎಂದು ಅವರು ತಿಳಿಸಿದರು.

ಮೈಸೂರು ನಗರದಾದ್ಯಂತ ಪ್ರಮುಖ ರಸ್ತೆ, ಸರ್ಕಲ್, ಜಂಕ್ಷನ್‍ಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ತಪಾಸಣೆ ನಡೆಸಲಾಗುವುದು. ಪಬ್, ಕ್ಲಬ್, ಬಾರ್, ರೆಸ್ಟೋರೆಂಟ್, ಸಿನೆಮಾ ಮಂದಿರ, ಹೋಟೆಲ್‍ಗಳನ್ನು ರಾತ್ರಿ 10 ಗಂಟೆಗೆ ಸರಿಯಾಗಿ ಮುಚ್ಚುವಂತೆ ಇಂದು ಪೊಲೀಸ್ ಸಿಬ್ಬಂದಿ ಮನವರಿಕೆ ಮಾಡುತ್ತಾರೆ. ಒಂದು ವೇಳೆ ನಿಯಮ ಉಲ್ಲಂಘಿಸಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ರೀತಿಯ ಕ್ರಮ ವಹಿಸಲಾಗುವುದು ಎಂದು ಡಾ. ಚಂದ್ರಗುಪ್ತ ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ. ರಾತ್ರಿ 10ರ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಜನರು ಗುಂಪು ಕಟ್ಟಿಕೊಂಡಿರುವುದು, ಸಕಾರಣ ಇಲ್ಲದೆ ಓಡಾಡುವುದು, ಕುಡಿದು ವಾಹನ ಚಾಲನೆ ಮಾಡುವುದು ನಿಯಮ ಬಾಹಿರವಾಗಿದ್ದು, ಅಂತಹವರನ್ನು ವಿಚಾರಣೆಗೊಳಪಡಿಸುವ ಪೊಲೀಸರು, ಕಾನೂನು ರೀತಿಯ ಕ್ರಮ ವಹಿಸಲಿದ್ದಾರೆ ಎಂದಿರುವ ಅವರು, ಕೊರೊನಾ ನಿಯಂತ್ರಿಸಲು ಜನರು ರಾತ್ರಿ ಕಫ್ರ್ಯೂ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ. ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿರುವ ಮೈಸೂರು ನಗರ ಕಾನೂನು-ಸುವ್ಯವಸ್ಥೆ ವಿಭಾಗದ ಡಿಸಿಪಿ ಪ್ರದೀಪ್ ಗುಂಟಿ, ನೈಟ್ ಕಫ್ರ್ಯೂ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೈಸೂರು ನಗರದಾದ್ಯಂತ ಸಿಬ್ಬಂದಿಗಳನ್ನು ನಿಯೋಜಿಸಿ ಕಾರ್ಯಾಚರಣೆ ನಡೆಸಲಾಗುವುದು ಎಂದರು. ಕಫ್ರ್ಯೂ ಆದೇಶ ಜಾರಿಯಾದ ನಂತರ ಸಿನೆಮಾ ಮಂದಿರ, ಮಾಲ್, ಹೋಟೆಲ್, ಕ್ಲಬ್, ಬಾರ್ ಅಂಡ್ ರೆಸ್ಟೋರೆಂಟ್‍ಗಳನ್ನು ರಾತ್ರಿ 10 ಗಂಟೆಯೊಳಗೆ ಬಂದ್ ಮಾಡಬೇಕು, ಸಂಚಾರ ಸ್ಥಗಿತಗೊಳಿಸಬೇಕಾಗಿದೆ. ಒಮಿಕ್ರಾನ್ ಸೋಂಕು ನಿಯಂತ್ರಿಸಲೆಂದು ಸರ್ಕಾರ ಕೈಗೊಂಡಿರುವ ಕ್ರಮಕ್ಕೆ ಸರ್ವರೂ ಗೌರವ ನೀಡಬೇಕು ಎಂದು ಅವರು ತಿಳಿಸಿದರು.

ಡಿಸೆಂಬರ್ 31ರಂದು ಹೊಸ ವರ್ಷಾಚರಣೆಗೆ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ಕ್ಲಬ್‍ಗಳಲ್ಲಿ ಶೇ. 50ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ಕಲ್ಪಿಸಿ ರಾತ್ರಿ 10 ಗಂಟೆಯೊಳಗೆ ಬಂದ್ ಮಾಡಬೇಕು, ಪಾರ್ಟಿ, ಡಿಜೆ, ಡ್ಯಾನ್ಸ್, ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಅವಕಾಶವಿರುವುದಿಲ್ಲ. ನಮ್ಮ ಪೊಲೀಸರು ಎಲ್ಲೆಡೆ ಕಾರ್ಯಾಚರಣೆ ನಡೆಸಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಪ್ರದೀಪ್ ಗುಂಟಿ ತಿಳಿಸಿದ್ದಾರೆ.

ಮನೆಯೊಳಗೆ ಹೊಸ ವರ್ಷಾಚರಣೆ ಮಾಡಿಕೊಳ್ಳಲು ನಿರ್ಬಂಧವಿರುವುದಿಲ್ಲ. ಆದರೆ ರಾತ್ರಿ 10 ಗಂಟೆ ನಂತರ ಹೊರಗಡೆ ಓಡಾಡಬಾರದು, ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಲ್ಲಿ ಅಂತಹವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಎಸ್ಪಿ ಆರ್. ಚೇತನ್ ಅವರು ಮಾಹಿತಿ ನೀಡಿ, ಕಫ್ರ್ಯೂ ಆದೇಶವನ್ನು ಜಿಲ್ಲೆಯಾದ್ಯಂತ ಪರಿಣಾಮಕಾರಿ ಯಾಗಿ ಜಾರಿಗೊಳಿಸಬೇಕಾಗಿರುವುದರಿಂದ ಈಗಾಗಲೇ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ. ಅದೇ ರೀತಿ ಹೊಸ ವರ್ಷಾಚರಣೆ ನಿಯಮಗಳನ್ನೂ ಜಾರಿಗೊಳಿಸಲು ಸಕಲ ಸಿದ್ಧತೆ ಮಾಡಲಾಗಿದೆ ಎಂದರು.

Translate »