ಮೈಮುಲ್ ಚುನಾವಣೆಯಲ್ಲೂ ಜೆಡಿಎಸ್‍ನೊಂದಿಗೆ ಮೈತ್ರಿ ಇಲ್ಲ
ಮೈಸೂರು

ಮೈಮುಲ್ ಚುನಾವಣೆಯಲ್ಲೂ ಜೆಡಿಎಸ್‍ನೊಂದಿಗೆ ಮೈತ್ರಿ ಇಲ್ಲ

March 15, 2021

ಮೈಸೂರು, ಮಾ.14(ಎಸ್‍ಪಿಎನ್)- ಮೈಮುಲ್ ಚುನಾವಣೆ ಸೇರಿದಂತೆ ಯಾವುದೇ ಚುನಾವಣೆಯಲ್ಲೂ ಜೆಡಿಎಸ್‍ನೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವು ದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದರು.

ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಮುಲ್ ವಿಚಾರವಾಗಲಿ, ಬೇರೆ ಯಾವುದೇ ರಾಜಕೀಯ ವಿಚಾರ ವಾಗಲಿ ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸ್ಥಳೀಯ ಚುನಾವಣೆಗಳು ಯಾವುದೇ ಪಕ್ಷದ ಚಿಹ್ನೆ ಮೇಲೆ ನಡೆಯುವುದಿಲ್ಲ. ಸ್ಥಳೀಯ ಹೊಂದಾಣಿಕೆ ಮೇಲೆ ಈ ಚುನಾವಣೆ ಗಳು ನಡೆಯಲಿವೆ. ಹಾಗಿದ್ದರೂ ನಮ್ಮ ಕಡೆಯಿಂದ ಜೆಡಿಎಸ್‍ಗೆ ಯಾವುದೇ ಬೆಂಬಲ ನೀಡುವುದಿಲ್ಲ. ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಚುನಾ ವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಇಲ್ಲ. ಎಲ್ಲರೂ ಸ್ವತಂತ್ರ ವಾಗಿ ಸ್ಪರ್ಧಿಸಲಿದ್ದಾರೆ ಎಂದು ಸ್ಪಷ್ಟಪಡಿಸಿ ದರು. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮೈಮುಲ್ ಚುನಾವಣೆ ಹಿನ್ನೆಲೆ ಮೈಸೂರಲ್ಲೇ ವಾಸ್ತವ್ಯ ಹೂಡಿ, ಕಾಂಗ್ರೆಸ್‍ನೊಂದಿಗೆ ಜೆಡಿಎಸ್ ಮೈತ್ರಿ ಮಾಡಿ ಕೊಂಡಿದೆ ಎಂದು ಹೇಳುತ್ತಾ,

ಮೈತ್ರಿ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಮನವಿ ಮಾಡುತ್ತಿರುವ ಬೆನ್ನಲ್ಲೇ ಮೈಮುಲ್ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಇಲ್ಲ ಎಂದು ಸಿದ್ದರಾಮಯ್ಯ ಘೋಷಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ನನ್ನ ಸರ್ಕಾರದ ಅವಧಿಯಲ್ಲಿ ಜಾತಿ ಗಣತಿ ನಡೆಸಲಾಗಿತ್ತು. ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಅರಿಯಲು ಈ ಸಮೀಕ್ಷೆ ನಡೆಸಿ ವರದಿ ಸಿದ್ದಪಡಿಸಲಾಗಿತ್ತು. ಮೈತ್ರಿ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಸಚಿವರಾಗಿದ್ದ ಸಿ.ಪುಟ್ಟರಂಗ ಶೆಟ್ಟಿ ಮತ್ತು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ್ ನೇತೃತ್ವದಲ್ಲಿ ವರದಿ ಯನ್ನು ಸರ್ಕಾರಕ್ಕೆ ಸಲ್ಲಿಸಲು ಸಿದ್ದರಾಗಿದ್ದರು. ಆದರೂ ಹಿಂದಿನ ಸಿಎಂ ಎಚ್.ಡಿ. ಕುಮಾರಸ್ವಾಮಿ ಜಾತಿ ಗಣತಿಯ ಮಾಹಿತಿಯನ್ನು ಬಹಿರಂಗಗೊಳಿಸಬೇಕಾಗುತ್ತದೆ ಎಂಬ ಉದ್ದೇಶದಿಂದಲೇ ವರದಿ ಬಿಡುಗಡೆ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಮುಂದಿನ ಸಿಎಂ ಘೋಷಣೆ ಮೊಳಗಿತು: ಕಾರ್ಯಕ್ರಮ ನಿಮಿತ್ತ ಮೈಸೂರು ಮಂಡಕ ಹಳ್ಳಿ ವಿಮಾನ ನಿಲ್ದಾಣಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗಮಿಸಿದಾಗ ಅವರ ಬೆಂಬಲಿಗರಿಂದ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಘೋಷಣೆ ಮೊಳಗಿಸಿದರು. ನಂತರ ಮೈಸೂರು ಪೇಟ, ಶಾಲು ಹೊಂದಿಸಿ ಸನ್ಮಾನಿಸಿದರಲ್ಲದೆ, ತಮ್ಮ ಮೊಬೈಲ್ ಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ಮೈಸೂರು ಮೇಯರ್-ಉಪಮೇಯರ್ ಚುನಾವಣೆ ನಂತರ ಮೊದಲ ಬಾರಿಗೆ ಮಾಜಿ ಸಿಎಂ ಸಿದ್ದು ಮೈಸೂರಿಗೆ ಆಗಮಿಸಿದರು.

Translate »