ಮೈಸೂರು, ನ.30(ಎಸ್‍ಪಿಎನ್)- ಇತ್ತೀಚಿನ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಕನ್ನಡ ಭಾಷೆ ಮತ್ತು ಕನ್ನಡಿಗರು ಬಲಿಪಶುಗಳಾಗುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಬೇಸರ ವ್ಯಕ್ತಪಡಿಸಿದರು.
ಮೈವಿವಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಕರವೇ ಆಯೋಜಿಸಿದ್ದ ರಾಜ್ಯೋ ತ್ಸವ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತ ನಾಡಿ, ಬಿಜೆಪಿ ಸರ್ಕಾರ ರಾಜಕೀಯ ಓಲೈಕೆಗಾಗಿ ಮರಾಠ ಅಭಿವೃದ್ಧಿ ನಿಗಮ ಘೋಷಿಸಿ ಕನ್ನಡಿಗರು ಮತ್ತು ಮರಾಠಿಗರ ನಡುವೆ ಜಗಳ ತಂದಿಟ್ಟಿದೆ. ಬಸವ ಕಲ್ಯಾಣ ಮತ್ತು ಮಸ್ಕಿ ಕ್ಷೇತ್ರದ ಉಪ ಚುನಾವಣೆ ಗೆಲ್ಲುವುದಕ್ಕಾಗಿ ಬಿಜೆಪಿ ಸರ್ಕಾರ ಮರಾಠಿ ಅಭಿವೃದ್ಧಿ ನಿಗಮ ಸ್ಥಾಪಿಸುತ್ತಿದೆ. ಇಂದಿನ ಜನಪ್ರತಿನಿಧಿಗಳಿಗೂ ಕನ್ನಡ ಬೇಕಾಗಿಲ್ಲ. ಚುನಾವಣೇ ಗೆಲ್ಲುವುದೇ ಮುಖ್ಯವಾಗಿದೆ. ಕನ್ನಡ ಚಳಿವಳಿಗಾರರ ವಿರುದ್ಧ ಅಸಭ್ಯ ಟೀಕೆ ಮಾಡುತ್ತಿರುವ ಜನಪ್ರತಿನಿಧಿಗಳ ನಡೆ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಂದ್‍ಗೆ ಬೆಂಬಲ: ಡಿಸೆಂಬರ್ 5ರಂದು ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಕರವೇ ಪೂರ್ಣ ಬೆಂಬಲ ನೀಡುತ್ತದೆ. ಸರ್ಕಾರ ಮರಾಠಿ ಅಭಿವೃದ್ಧಿ ನಿಗಮ ಆದೇಶ ವಾಪಸ್ ಪಡೆದರೆ ಬಂದ್ ಕರೆಯನ್ನೂ ವಾಪಸ್ ಪಡೆಯಲಾಗುವುದು ಎಂದರು.
ಕರವೇ ಮೈಸೂರು ನಗರಾಧ್ಯಕ್ಷ ಜಿ.ಲೋಕೇಶ್‍ಕುಮಾರ್, ಯುವ ಘಟಕ ಜಿಲ್ಲಾಧ್ಯಕ್ಷ ಹೇಮಂತ್‍ಕುಮಾರ್, ವಿದ್ಯಾರ್ಥಿ ಘಟಕ ಜಿಲ್ಲಾಧ್ಯಕ್ಷ ಎಸ್.ಕೆ.ಕುಮಾರ್, ರಸ್ತೆಬದಿ ವ್ಯಾಪಾರಿ ಸಂಘದ ಜಿಲ್ಲಾಧ್ಯಕ್ಷ ಸುನಂದ ಪ್ರಸಾದ್, ಕ್ರೀಡಾ ವಿಭಾಗದ ಜಿಲ್ಲಾಧ್ಯಕ್ಷ ಸಂದೇಶ್, ನಗರ ಪ್ರಧಾನ ಕಾರ್ಯದರ್ಶಿ ರಘು, ವಿವಿಧ ವಿಭಾಗಗಳ ಪದಾಧಿಕಾರಿಗಳು ಸೇರಿದಂತೆ 52 ಮಂದಿಯನ್ನು ಸನ್ಮಾನಿಸಲಾಯಿತು. ಈ ವೇಳೆ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್, ಪದಾಧಿಕಾರಿ ಸಣ್ಣ ಈರಪ್ಪ, ಗಾಯಿತ್ರಿ ವಿಜಯೇಂದ್ರ ಮತ್ತಿತರರಿದ್ದರು.