ಮೈಸೂರು,ಫೆ.17(ಪಿಎಂ)- ಪಾಶ್ಚಿಮಾತ್ಯ ದೇಶ ಗಳಲ್ಲಿ ಬುದ್ಧಿವಂತಿಕೆ ಹಾಗೂ ಜ್ಞಾನಕ್ಕೆ ಬೆಲೆಯಿದೆ. ಆದರೆ ನಮ್ಮಲ್ಲಿ ಆ ರೀತಿಯ ಸನ್ನಿವೇಶವಿಲ್ಲ. ನಮ್ಮ ದೇಶದಲ್ಲಿಯೂ ಅಂತಹ ವಾತಾವರಣ ಸೃಷ್ಟಿಸುವ ಶಕ್ತಿ ನಮ್ಮಲ್ಲಿನ ಯುವ ಜನತೆಗೆ ಇದೆ ಎಂದು ಮುಕ್ತ ವಿವಿ ಹಾಗೂ ಮೈಸೂರು ವಿವಿ ವಿಶ್ರಾಂತ ಕುಲಪತಿಗಳೂ ಆದ ವಿಶ್ವ ಶ್ರೇಷ್ಠ ವಿಜ್ಞಾನಿ ಪ್ರೊ. ಕೆ.ಎಸ್.ರಂಗಪ್ಪ ಅಭಿಪ್ರಾಯಪಟ್ಟರು.
ಮೈಸೂರು ಮಾನಸಗಂಗೋತ್ರಿಯ ಮೈಸೂರು ವಿವಿ ವಿಜ್ಞಾನ ಭವನದಲ್ಲಿ ಪ್ರೊ.ಕೆ.ಎಸ್.ರಂಗಪ್ಪ ಅಭಿ ಮಾನಿ ಬಳಗ, ಮೈಸೂರು ವಿವಿ ಶಿಕ್ಷಣಶಾಸ್ತ್ರ ಅಧ್ಯ ಯನ ವಿಭಾಗ, ಕರುನಾಡು ಸಾಹಿತ್ಯ ಪರಿಷತ್ತಿನ ಮೈಸೂರು ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಒಂದು ದಿನದ ಸ್ಪರ್ಧಾ ತ್ಮಕ ಪರೀಕ್ಷೆಗಳ ವಿಶೇಷ ಕಾರ್ಯಾಗಾರದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಜ್ಞಾನವಂತರು ಮತ್ತು ಬುದ್ಧಿವಂತರಿಂದ ಮಾತ್ರ ನಮ್ಮ ದೇಶ ಮುಂದುವರೆಯಲು ಸಾಧ್ಯ. ಆದರೆ ನಮ್ಮಲ್ಲಿ ಅವರಿಗೆ ಗೌರವ-ಬೆಲೆ ಇಲ್ಲ. ಶ್ರೇಷ್ಠ ಅರ್ಥಶಾಸ್ತ್ರ ಜ್ಞರು, ವಿಜ್ಞಾನಿಗಳು, ವೈದ್ಯರು ಹಾಗೂ ಇಂಜಿನಿಯರ್ ಗಳು ನೀಡುವ ಸಲಹೆಗಳನ್ನು ಪಾಶ್ಚಿಮಾತ್ಯ ದೇಶದಲ್ಲಿ ಆಡಳಿತ ನಡೆಸುವವರು ಸ್ವೀಕರಿಸುತ್ತಾರೆ. ಆದರೆ ನಮ್ಮಲ್ಲಿ ಆ ರೀತಿಯ ವಾತಾವರಣ ಇಲ್ಲ. ಇದನ್ನು ಬದಲಾಯಿಸಲು ನಮ್ಮ ಯುವ ಜನತೆಯಿಂದ ಮಾತ್ರವೇ ಸಾಧ್ಯ ಎಂದು ಪ್ರತಿಪಾದಿಸಿದರು.
ಯುವ ಜನತೆ ಕಾರ್ಯ ವೈಖರಿ ಆಧಾರದ ಮೇಲೆ ನಮ್ಮ ದೇಶದ ಅಭಿವೃದ್ಧಿ ನಿಂತಿದೆ. ಯುವ ಸಮುದಾಯ ಸಾಗುವ ದಿಕ್ಕಿನಲ್ಲಿ ನಮ್ಮ ದೇಶ ಸಾಗಲಿದ್ದು, ಇದರ ಪರಿಣಾಮ ಇಡೀ ಪ್ರಪಂಚದ ಮೇಲೂ ಉಂಟಾಗಲಿದೆ. ಹೀಗಾಗಿ ದೇಶ ಕಟ್ಟುವ ಯುವ ಸಮುದಾಯ ಒಳ್ಳೆಯದ್ದು ಮತ್ತು ಕೆಟ್ಟದ್ದು ಯಾವುದೆಂದು ನಿರ್ಧರಿಸುವ ಬೌದ್ಧಿಕ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜಕಾರಣಿಗಳು ಹಾಗೂ ಅಧಿಕಾರಿಗಳಿಂದ ನಮ್ಮ ದೇಶಕ್ಕೆ ಭವಿಷ್ಯವಿಲ್ಲ. ಈ ದೇಶದ ವಿದ್ಯಾರ್ಥಿಗಳು ಹಾಗೂ ಯುವ ಜನತೆ ಮಾತ್ರವೇ ಈ ದೇಶ ಭವಿಷ್ಯ ಉತ್ತಮಗೊಳಿಸಬಲ್ಲರು. ಈ ನಿಟ್ಟಿನಲ್ಲಿ ಯುವ ಸಮು ದಾಯ ವಿದ್ಯೆ ಮತ್ತು ಬುದ್ಧಿ ವೃದ್ಧಿಸಿಕೊಳ್ಳುವುದು ಬಹಳ ಮುಖ್ಯ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ದೇಶಕ್ಕೆ ಇವರು ಒಳ್ಳೆಯದು ಮಾಡುತ್ತಾರೆಯೇ ಎಂದು ಆಲೋಚಿಸಬೇಕು. ಆಗಲೇ ನಮ್ಮ ದೇಶ ಇಡೀ ವಿಶ್ವ ದಲ್ಲಿ ಮೊದಲ ಸ್ಥಾನ ಅಲಂಕರಿಸಲು ಸಾಧ್ಯ. ನಮ್ಮ ದೇಶಕ್ಕಿಂತ ಶ್ರೀಮಂತ ರಾಷ್ಟ್ರಗಳು ಇವೆಯಾದರೂ ನಮ್ಮಲ್ಲಿರುವಷ್ಟು ಸಾಂಸ್ಕøತಿಕ ಶ್ರೀಮಂತಿಕೆ ಅಲ್ಲಿಲ್ಲ ಎಂದು ತಿಳಿಸಿದರು.
ನಿಮ್ಮ ಆಸಕ್ತಿ ವಿಚಾರದಲ್ಲಿ ಶ್ರೇಷ್ಠತೆ ಸಾಧಿಸಿ. ಯಾವುದೇ ವಿದ್ಯಾ ಭ್ಯಾಸ ಮತ್ತು ವೃತ್ತಿಯನ್ನು ಮತ್ತೊ ಬ್ಬರ ಒತ್ತಾಯಕ್ಕೆ ಆಯ್ಕೆ ಮಾಡಿ ಕೊಳ್ಳಬೇಡಿ. ಯಾವುದೇ ಸಂದರ್ಭದಲ್ಲಿ ನಕಾರಾತ್ಮಕ ಚಿಂತನೆ ಮಾಡದೇ ಧನಾತ್ಮಕ ಚಿಂತನೆ ಹೊಂದಬೇಕು. ಆರೋಗ್ಯಕರ ಸ್ಪರ್ಧೆ ಸಮಾಜದಲ್ಲಿ ಇರುವುದು ಒಳ್ಳೆಯದು. ಒಳ್ಳೆಯತನ ಬೆಳೆಸಿಕೊಂಡು ನಿಮ್ಮ ಕುಟುಂಬ, ಸಮಾ ಜಕ್ಕೆ ಒಳ್ಳೆಯ ಕೊಡುಗೆ ನೀಡಿ. ವಿಜ್ಞಾನ ವೇಗವಾಗಿ ಬೆಳೆಯುತ್ತಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ಪ್ರೊ.ಕೆ.ಎಸ್.ರಂಗಪ್ಪ ದೊಡ್ಡ ಚೈತನ್ಯ ಹಾಗೂ ಪ್ರೇರಕಶಕ್ತಿಯಾಗಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿಯವರು ಎಂದೂ ತಂದೆ ಪ್ರಭಾವ ಬಳಸಿ ಕೊಂಡವರಲ್ಲ. ತಂದೆಯ ತಾತ್ವಿಕ ಪ್ರಭಾವವಿದ್ದರೂ ತೇಜಸ್ವಿ ಸ್ವತಃ ತಮ್ಮ ಮೇರು ವ್ಯಕ್ತಿತ್ವ ರೂಪಿಸಿಕೊಂಡರು. ಅಂತೆಯೇ ಪ್ರೊ.ಕೆ.ಎಸ್.ರಂಗಪ್ಪ ಅವರ ಪುತ್ರ ಡಾ. ಶೋಭಿತ್ ಯುವ ವಿಜ್ಞಾನಿಯಾಗಿ ಬೆಳೆಯುತ್ತಿದ್ದಾರೆ ಎಂದು ಪ್ರಶಂಸಿಸಿದರಲ್ಲದೆ, ನಮ್ಮ ಯುವ ಜನತೆ ಮಹತ್ವಾಕಾಂಕ್ಷೆ ಹೊಂದಿ ಮುನ್ನಡೆಯಬೇಕು. ಬುದ್ಧಿ ವಂತಿಕೆ ಮತ್ತು ಉತ್ಸಾಹದ ಮನೋಭಾವ ಬೆಳೆಸಿಕೊಂಡು ಯಶಸ್ಸಿನ ಹಾದಿ ಕ್ರಮಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಮೈಸೂರು ವಿವಿ ವಸ್ತು ವಿಜ್ಞಾನ ವಿಭಾಗದ ಸಂಯೋಜಕ ಪ್ರೊ.ಎಸ್.ಶ್ರೀಕಂಠಸ್ವಾಮಿ, ಪ್ರೊ.ಕೆ.ಎಸ್.ರಂಗಪ್ಪ ಅವರ ಪುತ್ರರೂ ಆದ ನಾಗ ಮಂಗಲದ ಬಿಜಿಎಸ್ ಮಹಾಸಂಸ್ಥಾನದ ನಿರ್ದೇ ಶಕ ಡಾ.ಶೋಭಿತ್ ಹಾಗೂ ಪ್ರೊ.ಕೆ.ಎಸ್.ರಂಗಪ್ಪ ಅಭಿಮಾನಿ ಬಳಗದ ಅಧ್ಯಕ್ಷ ಡಾ.ಎಸ್.ಕೆ.ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಪ್ರೊ.ಕೆ.ಎಸ್.ರಂಗಪ್ಪ ಅವರು ಅನ್ಯ ಕಾರ್ಯನಿಮಿತ್ತ ತಡವಾಗಿ ಬಂದ ಹಿನ್ನೆಲೆ ಯಲ್ಲಿ ಅವರನ್ನು ಪ್ರತ್ಯೇಕವಾಗಿ ಸನ್ಮಾನಿಸಲಾಯಿತು. ಅಲ್ಲದೆ, ಬಳಗದ 13ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಕಾಲೇಜು ಶಿಕ್ಷಣ ಇಲಾಖೆ ವಿಶೇಷ ಅಧಿಕಾರಿ ಹಾಗೂ ಸಾಧನಾ ಅಕಾಡೆಮಿ ಎಜುಕೇಟರ್ ಬಿ.ಮಂಜು ನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ಮೈಸೂರು ವಿವಿ ಶಿಕ್ಷಣಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ. ಕೆ.ಬಿ.ಪ್ರವೀಣ್ ಮತ್ತಿತರರು ಹಾಜರಿದ್ದರು.