`ಭತ್ತದ ಮಹದೇವಪ್ಪ’ ಅವರು ಯುವ ಪೀಳಿಗೆಗೆ ಮಾದರಿ
ಮೈಸೂರು

`ಭತ್ತದ ಮಹದೇವಪ್ಪ’ ಅವರು ಯುವ ಪೀಳಿಗೆಗೆ ಮಾದರಿ

February 18, 2021

ಮೈಸೂರು ಫೆ.17- ಪದ್ಮಭೂಷಣ ಪುರಸ್ಕøತ ನಾಡಿನ ಖ್ಯಾತ ಕೃಷಿ ವಿಜ್ಞಾನಿ, ಜೆಎಸ್‍ಎಸ್ ಮಹಾವಿದ್ಯಾಪೀಠದ ಗ್ರಾಮೀಣಾಭಿವೃದ್ಧಿ ವಿಭಾಗದ ನಿರ್ದೇಶಕ ಡಾ.ಎಂ. ಮಹದೇವಪ್ಪನವರ ‘ಸಮಗ್ರ ಕೃಷಿ ಕಾವ್ಯ’ ಕೃತಿ ಬಿಡುಗಡೆ ನೆರವೇರಿತು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು, ಮಹದೇವಪ್ಪ ನವರು ರೈತ ಪರ ಕಾಳಜಿಯನ್ನು ಹೊಂದಿದ್ದು, ರೈತ ಸ್ವಾವಲಂಬಿಯಾಗಿ ಬದುಕಲು ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ ಎಂದು ಆಶೀರ್ವಚನದಲ್ಲಿ ತಿಳಿಸಿದರು.

ಅನೇಕ ಭತ್ತದ ತಳಿಗಳ ಸಂಶೋಧಕರಾದ ಮಹದೇವಪ್ಪ ನವರು ನಾಡಿನಲ್ಲಿ ‘ಪ್ಯಾಡಿ ಮಹದೇವಪ್ಪ’ ಎಂದೇ ಕರೆಯ ಲ್ಪಡುತ್ತಾರೆ. ಅವರ ಸೇವೆಗಾಗಿ ಪದ್ಮಶ್ರೀ ಹಾಗೂ ಪದ್ಮ ಭೂಷಣ ಪುರಸ್ಕಾರಗಳು ಸಂದಿವೆ. ಇಳಿವಯಸ್ಸಿನಲ್ಲಿಯೂ ಕ್ರಿಯಾಶೀಲರಾಗಿ ಇಂದಿನ ಯುವ ಸಮೂಹಕ್ಕೆ ಮಾದರಿ ಯಾಗಿದ್ದಾರೆ. ಅವರ ಕೃತಿಯು ರೈತರ ಕುರಿತಾಗಿ ಇರುವ ಅವರ ಅಪಾರ ಪ್ರೀತಿಗೆ ಸಾಕ್ಷಿಯಾಗಿದೆ. ಕರ್ನಾಟಕ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿಯು ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿರುವುದಕ್ಕೆ ಅಭಿನಂದಿಸಿದರು.

ಅಧ್ಯಕ್ಷತೆ ವಹಿಸಿದ್ದ ಖ್ಯಾತ ವಿದ್ವಾಂಸರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ ಗೊ.ರು.ಚನ್ನಬಸಪ್ಪ, ಕುವೆಂಪು ಅವರು ಋಷಿ ಕವಿಯಾದರೆ ಮಹದೇವಪ್ಪನವರು ಕೃಷಿ ಕವಿ ಎಂದು ಬಣ್ಣಿಸಿದರು.

ಕೃತಿ ಬಿಡುಗಡೆ ಮಾಡಿದ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಡಾ.ಎಸ್.ರಾಜೇಂದ್ರ ಪ್ರಸಾದ್, ಮಹದೇವಪ್ಪ ನವರು ದಕ್ಷ ಆಡಳಿತಗಾರರಾಗಿ ಖ್ಯಾತಿ ಹೊಂದಿದ್ದು, ಅವರು ಧಾರವಾಡ ಕೃಷಿ ವಿವಿ ಕುಲಪತಿಗಳಾಗಿದ್ದಾಗ ನೆನಪಿನಲ್ಲಿ ಉಳಿಯುವಂತಹ ಅನೇಕ ಅಮೂಲ್ಯ ಕಾರ್ಯ ಗಳನ್ನು ಮಾಡಿದ್ದಾರೆ. ಅನೇಕ ಪುಸ್ತಕಗಳನ್ನು ರಚಿಸುವ ಮೂಲಕ ಅವರು ಜನ ಮನ್ನಣೆ ಗಳಿಸಿದ್ದಾರೆ ಎಂದರು.

ಕೃತಿ ಪರಿಚಯ ಮಾಡಿದ ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ, ಮಹದೇವಪ್ಪನವರು ತಮ್ಮ ಕೃತಿಯನ್ನು ರೈತನಿಗೆ ಅರ್ಪಿಸಿರುವುದು ವಿಶೇಷ. ಕೃತಿಯಲ್ಲಿನ 69 ದೊಡ್ಡ ಪದ್ಯಗಳು, ಹಲವು ಚುಟುಕುಗಳಲ್ಲಿ ರೈತರ ಕುರಿ ತಾಗಿ ಇರುವ ವಾತ್ಸಲ್ಯ ಹಾಗೂ ಕಾಳಜಿಯನ್ನು ಮಹ ದೇವಪ್ಪನವರು ಬಿಂಬಿಸಿದ್ದಾರೆ. ರೈತನ ಮಗನಾಗಿ ಹುಟ್ಟಿ, ಕೃಷಿ ವಿಜ್ಞಾನಿಯಾಗಿ ರೈತರ ಪರವಾಗಿ ಸೇವೆ ಸಲ್ಲಿಸಿರುವುದು ವಿಶೇಷ. ಅವರು ಕೇವಲ ಕೃಷಿ ವಿಜ್ಞಾನಿಯಾಗಿ ಉಳಿ ಯಲಿಲ್ಲ, ಉತ್ತಮ ಆಡಳಿತಗಾರರಾಗಿ ಹಾಗೂ ಸಾಹಿತಿ ಗಳಾಗಿ ಖ್ಯಾತಿ ಪಡೆದಿದ್ದಾರೆ. ಎಷ್ಟೇ ಸಾಧನೆ ಮಾಡಿದರೂ ಅಹಂಕಾರ ಪಡಲಿಲ್ಲ, ಅವರ ಬದುಕು ಭ್ರಷ್ಟವಾಗಲಿಲ್ಲ. ಭತ್ತದ ತಳಿ ಸಂಶೋಧಕರಾದ ಅವರ ಉತ್ಸಾಹ ಇಂದಿಗೂ ಬತ್ತಿಲ್ಲ. ಇಳಿವಯಸ್ಸಿನಲ್ಲಿಯೂ ಯುವಕರು ನಾಚುವಂತೆ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಡಾ.ಮಹದೇವಪ್ಪನವರ ಪುತ್ರಿ ಡಾ.ಮಮತಾ ಚಂದ್ರ ಶೇಖರ್, ಅವರ ಜೀವನ ಸಾಧನೆ ತಿಳಿಸುವ ಮೂಲಕ ನುಡಿನಮನ ಸಲ್ಲಿಸಿದರು. ಶ್ರೀಮತಿ ಕಲ್ಪನಾ ಶಿವಣ್ಣ, ಮಹದೇವಪ್ಪನವರ ಗೀತೆಯೊಂದನ್ನು ಸುಶ್ರಾವ್ಯವಾಗಿ ಹಾಡಿದರು. ಈ ವೇಳೆ ಜೆಎಸ್‍ಎಸ್ ಮಹಾವಿದ್ಯಾಪೀಠದ ವತಿಯಿಂದ ಡಾ.ಎಂ.ಮಹದೇವಪ್ಪ ಮತ್ತು ಶ್ರೀಮತಿ ಸುಧಾ ಮಹದೇವಪ್ಪ ಅವರನ್ನು ಅಭಿನಂದಿಸಲಾಯಿತು. ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಶಿವ ಕುಮಾರಸ್ವಾಮಿ, ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ್, ನಿರ್ದೇಶಕರು, ಅಧಿಕಾರಿ ಗಳು, ಕೃಷಿ ವಿಜ್ಞಾನಿಗಳು, ಅಭಿಮಾನಿಗಳು ಹಾಜರಿದ್ದರು.

 

 

 

 

Translate »