`ಟೂಲ್‍ಕಿಟ್’ ಸಿದ್ಧಪಡಿಸಿದ ಆರೋಪದ ಮೇಲೆ ಬಂಧಿತರಾದ ದಿಶಾರವಿ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ
ಮೈಸೂರು

`ಟೂಲ್‍ಕಿಟ್’ ಸಿದ್ಧಪಡಿಸಿದ ಆರೋಪದ ಮೇಲೆ ಬಂಧಿತರಾದ ದಿಶಾರವಿ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ

February 18, 2021

ಮೈಸೂರು,ಫೆ.17(ಪಿಎಂ)- ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸುವ ಸಂಬಂಧ `ಟೂಲ್‍ಕಿಟ್’ ಸಿದ್ಧಪಡಿಸಿದ ಆರೋಪದ ಮೇಲೆ ಬಂಧಿಸಿರುವ ಫ್ರೈಡೇ ಫಾರ್ ಫ್ಯೂಚರ್ ಸಂಘಟನೆ ಸಹ ಸಂಸ್ಥಾಪಕಿ ದಿಶಾರವಿ ಬಿಡುಗಡೆಗೊಳಿಸಲು ಒತ್ತಾಯಿಸಿ ಸಂವಿಧಾನ ರಕ್ಷಣಾ ವೇದಿಕೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಪುರಭವನ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ರೈತರ ಪರ ಧ್ವನಿ ಎತ್ತಿದ ಕಾರಣಕ್ಕೆ ದಿಶಾರವಿ ಅವರನ್ನು ಬಂಧಿಸಿರುವುದು ಖಂಡನಾರ್ಹ. ಇದು ಪ್ರಜಾಪ್ರಭುತ್ವ ದೇಶದಲ್ಲಿ ಪ್ರಜಾ ಸತ್ತಾತ್ಮಕ ಹಕ್ಕುಗಳ ಮೇಲಿನ ಕ್ರೂರ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಹೋರಾಟವನ್ನು ಜನತೆ ಬೆಂಬಲಿಸುವುದನ್ನು ಸರ್ಕಾರ ಅಪರಾಧವಾಗಿ ಪರಿ ಗಣಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಅಭಿವ್ಯಕ್ತಿ ಸ್ವಾತಂತ್ರ್ಯ, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಫ್ಯಾಸಿಸ್ಟ್ ನೀತಿ ಅನುಸರಿಸುತ್ತಿದೆ. ಜನತೆ ಧ್ವನಿಯನ್ನು ಅಡಗಿಸಲು ಸರ್ಕಾರ ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದರು.

ರಾಜ್ಯದ ಪೊಲೀಸರಿಗೆ ಮಾಹಿತಿ ನೀಡದೇ ದಿಶಾರವಿ ಅವರನ್ನು ದೆಹಲಿ ಪೊಲೀಸರು ಭಯೋತ್ಪಾದಕರನ್ನು ಹಿಡಿಯುವಂತೆ ಹೊಂಚು ಹಾಕಿ ಬಂಧಿಸಿದ್ದು, ಇದು ಒಕ್ಕೂಟ ವ್ಯವಸ್ಥೆಯ ಅಣಕ. ಕೇಂದ್ರ ಸರ್ಕಾರ ಕಾರ್ಪೋರೇಟ್ ಪರವಾದ ಮತ್ತು ಜನವಿರೋಧಿ ನೀತಿಗಳನ್ನು ವಿರೋಧಿಸುವವರನ್ನು ಬೆದರಿಸುವ, ಅಕ್ರಮವಾಗಿ ಬಂಧಿಸುವ ಮೂಲಕ ಜನದನಿ ಹತ್ತಿಕ್ಕಲು ಮುಂದಾಗಿದೆ ಎಂದು ದೂರಿದರು. ಪ್ರಗತಿಪರ ಚಿಂತಕರಾದ ಡಾ.ರತಿರಾವ್, ಡಾ.ಪಂಡಿತಾ ರಾಧ್ಯ, ನಾ.ದಿವಾಕರ್, ಜಗದೀಶ್ ಸೂರ್ಯ, ಗೋಪಾಲಕೃಷ್ಣ, ಕುಮಾರ್, ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ, ಸೇನಾನಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

 

 

Translate »