ಹೆಚ್.ಡಿ.ಕೋಟೆ ಬಳಿ ಕಾರು ಉರುಳಿ ಮೈಸೂರು ವಕೀಲರ 5 ವರ್ಷದ ಪುತ್ರಿ ಸಾವು
ಮೈಸೂರು

ಹೆಚ್.ಡಿ.ಕೋಟೆ ಬಳಿ ಕಾರು ಉರುಳಿ ಮೈಸೂರು ವಕೀಲರ 5 ವರ್ಷದ ಪುತ್ರಿ ಸಾವು

May 26, 2020

ಮೈಸೂರು, ಮೇ 25 (ಆರ್‍ಕೆ)-ಹೆಚ್.ಡಿ.ಕೋಟೆ ಬಳಿ ಕಾರೊಂದು ಉರುಳಿ ಬಿದ್ದ ಪರಿಣಾಮ ಮೈಸೂರು ವಕೀಲರೊಬ್ಬರ 5 ವರ್ಷದ ಪುತ್ರಿ ಪೋಷಕರೆದುರೇ ದಾರುಣವಾಗಿ ಸಾವನ್ನಪ್ಪಿದ ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ.

ಮೈಸೂರಿನ ರಾಜರಾಜೇಶ್ವರಿನಗರ ನಿವಾಸಿಯಾದ ವಕೀಲ ಧನಂಜಯ ಅವರ ಪುತ್ರಿ ಹಿಮಾನಿ (5) ದುರ್ಮ ರಣಕ್ಕೀಡಾದ ಬಾಲಕಿ. ಹೆಚ್.ಡಿ. ಕೋಟೆಯಿಂದ ಕುಟುಂಬದ ನಾಲ್ವರು ಸದಸ್ಯರೊಂದಿಗೆ ಧನಂಜಯ ಅವರು ತಮ್ಮ ಮಹೀಂದ್ರ ಕ್ಲೈಲೋ (ಕೆಎ45, ಎಂ 1041) ಕಾರು ಚಾಲನೆ ಮಾಡಿ ಕೊಂಡು ಮೈಸೂರಿಗೆ ಬರುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ಕರಿಗಾಲ ಸಮೀಪ ಉರುಳಿ ಬಿದ್ದಿದೆ. ಘಟನೆಯಿಂದ ತೀವ್ರವಾಗಿ ಗಾಯ ಗೊಂಡಿದ್ದ ಹಿಮಾನಿಯನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮಧ್ಯಾಹ್ನ ಸಾವನ್ನಪ್ಪಿದಳು ಎಂದು ಪ್ರಕರಣ ದಾಖಲಿಸಿಕೊಂಡಿರುವ ಹೆಚ್.ಡಿ. ಕೋಟೆ ಠಾಣೆ ಪೊಲೀಸರು, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋ ತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಪೋಷಕರಿಗೆ ಒಪ್ಪಿಸಿದ್ದಾರೆ.

ಕಾರಿನಲ್ಲಿ ಧನಂಜಯ ಸೇರಿ ಐವರು ಪ್ರಯಾಣಿಸುತ್ತಿದ್ದರಾದರೂ ಹಿಮಾನಿ ಹೊರತು ಪಡಿಸಿ ಉಳಿದ ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಯಾಗಿರುವ ತಂದೆ ಹೆಚ್.ಡಿ.ಕೋಟೆ ಪಟ್ಟಣದಲ್ಲಿ ವಾಸಿಸುತ್ತಿರುವುದರಿಂದ ಧನಂ ಜಯ ಅವರು ಹೆಚ್.ಡಿ.ಕೋಟೆಗೆ ಹೋಗಿ ಮೈಸೂರಿಗೆ ವಾಪಸ್ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.

Translate »