ಮೈಸೂರು, ಮೇ 7(ಪಿಎಂ)- ಕಳೆದ ವರ್ಷ ತಮ್ಮ ಪುತ್ರಿಯ ಹುಟ್ಟುಹಬ್ಬದಂದು ಭಾರತೀಯ ಸೇನೆಯ ರಕ್ಷಣಾ ನಿಧಿಗೆ 1 ಕೋಟಿ ರೂ. ದೇಣಿಗೆ ನೀಡಿ ಉದಾರತೆ ಮೆರೆದಿದ್ದ ಮೈಸೂರಿನ ಗೋಕುಲಂನ ಆದಿತ್ಯಾ ಅಧಿಕಾರಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇ ಶಕರೂ ಆದ ಹಿರಿಯ ವೈದ್ಯರಾದ ಡಾ.ಎನ್. ಚಂದ್ರಶೇಖರ್, ಈಗ ಕೊರೊನಾ ವಿರು ದ್ಧದ ಹೋರಾಟಕ್ಕೂ ಕೋಟಿ ರೂಪಾಯಿಗೂ ಅಧಿಕ ಮೊತ್ತದ ದೇಣಿಗೆ ನೀಡಿದ್ದಾರೆ.
ಡಾ.ಎನ್.ಚಂದ್ರಶೇಖರ್ ತಮ್ಮ ಪುತ್ರಿಯ ಈ ಬಾರಿಯ ಹುಟ್ಟುಹಬ್ಬ ದಿನವಾದ ಗುರುವಾರ `ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ (ಕೋವಿಡ್-19 ಹಿನ್ನೆಲೆ)’ 1 ಲಕ್ಷದ ಒಂದು ರೂಪಾಯಿ ಹಾಗೂ `ಪ್ರಧಾನ ಮಂತ್ರಿ ಕೇರ್ಸ್ ಫಂಡ್’ಗೆ 1 ಕೋಟಿ ಒಂದು ರೂಪಾಯಿ ದೇಣಿಗೆ ನೀಡಿದ್ದಾರೆ.
ಮೈಸೂರಿನ ಕೃಷ್ಣಮೂರ್ತಿಪುರಂನ ಮಕ್ಕಳ ಕೂಟ ಸ್ವಯಂ ಸೇವಾ ಸಂಸ್ಥೆ ಆವರಣದಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರಿಗೆ ಡಾ.ಎನ್.ಚಂದ್ರಶೇಖರ್ ತಮ್ಮ ಪುತ್ರಿ ಡಾ.ಅರ್ಚನಾ ಸಿ.ರಾವ್, ಪತ್ನಿ ರಾಣಿ ಚಂದ್ರಶೇಖರ್ ಜೊತೆಗೂಡಿ ದೇಣಿಗೆಯ ಚೆಕ್‍ಗಳನ್ನು ಹಸ್ತಾಂತರ ಮಾಡಿದರು.
ಕಳೆದ ವರ್ಷ ಡಾ.ಅರ್ಚನಾ ಸಿ.ರಾವ್ ಅವರ ಹುಟ್ಟುಹಬ್ಬದಂದು ಮೈಸೂರಿನಲ್ಲೇ ಅಂದಿನ ರಕ್ಷಣಾ ಸಚಿವೆ ನಿರ್ಮಲಾ ಸೀತಾ ರಾಮ್ ಅವರಿಗೆ ಭಾರತೀಯ ಸೇನೆಯ ರಕ್ಷಣಾ ನಿಧಿಗೆ ಕೋಟಿ ರೂ. ದೇಣಿಗೆ ಚೆಕ್ ಅನ್ನು ಡಾ.ಎನ್.ಚಂದ್ರಶೇಖರ್ ಸಲ್ಲಿಸಿದ್ದರು. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಇಡೀ ದೇಶವೇ ತತ್ತರಿಸಿರುವ ಸಂದರ್ಭದಲ್ಲಿ ಕೊರೊನಾ ಪರಿಹಾರಕ್ಕಾಗಿ 1.01 ಕೋಟಿ ರೂ. ಅನ್ನು ದೇಣಿಗೆಯಾಗಿ ನೀಡಿದ್ದಾರೆ.
ಗುರುವಾರ ಮಕ್ಕಳ ಕೂಟ ಸ್ವಯಂ ಸೇವಾ ಸಂಸ್ಥೆ ಆವರಣದಲ್ಲಿ ಆರಂಭಗೊಂಡಿರುವ ಫೀವರ್ ಕ್ಲಿನಿಕ್‍ನ ವೈದ್ಯರು, ಅರೆ ವೈದ್ಯ ಸಿಬ್ಬಂದಿ ಹಾಗೂ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಸಮ್ಮುಖ ದಲ್ಲಿ ದೇಣಿಗೆಯ ಚೆಕ್‍ಗಳನ್ನು ಜಿಲ್ಲಾಧಿ ಕಾರಿಗಳಿಗೆ ಹಸ್ತಾಂತರಿಸಲಾಯಿತು.
ಇದೇ ವೇಳೆ ಡಾ.ಅರ್ಚನಾ ಸಿ.ರಾವ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದ ಎಸ್.ಎ.ರಾಮದಾಸ್, ಬಳಿಕ ಹುಟ್ಟು ಹಬ್ಬದ ಶುಭಾಶಯ ಕೋರಿದರು. ಅಲ್ಲದೆ, ಈ ಸಂದರ್ಭದಲ್ಲಿ ಹಾಜರಿದ್ದ ಎಲ್ಲರೂ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಬಳಿಕ ಮಾತನಾಡಿದ ಎಸ್.ಎ.ರಾಮ ದಾಸ್, ಡಾ.ಎನ್.ಚಂದ್ರಶೇಖರ್ ವೈದ್ಯರಾಗಿ ನಿರಂತರವಾಗಿ ಸಮಾಜದ ಸೇವೆ ಮಾಡುತ್ತಿ ದ್ದಾರೆ. ತಾವು ಮಾಡಿದ ಸಂಪಾದನೆಯನ್ನು ಸಮಾಜ ಹಾಗೂ ದೇಶದ ಸೇವೆಗೂ ವಿನಿ ಯೋಗಿಸಬೇಕೆಂಬ ಸೇವಾ ಮನೋಭಾವ ಹೊಂದಿದ್ದಾರೆ. ಕಳೆದ ವರ್ಷವೂ ಸೇನೆಯ ರಕ್ಷಣಾ ನಿಧಿಗೆ ಕೋಟಿ ರೂ. ದೇಣಿಗೆ ನೀಡಿ ತಮ್ಮ ಸೇವಾ ಮನೋಭಾವ ಮೆರೆದಿ ದ್ದಾರೆ. ಡಾ.ಅರ್ಚನಾ ಸಿ.ರಾವ್ ಅವರೂ ತಮ್ಮ ತಂದೆ ಹಾದಿಯಲ್ಲಿ ಹೆಜ್ಜೆ ಇಡುತ್ತಿ ದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಡಾ.ಅರ್ಚನಾ ಸಿ.ರಾವ್ ಮತ್ತು ಅವರ ಕುಟುಂಬಕ್ಕೆ ತಾಯಿ ಚಾಮುಂಡೇಶ್ವರಿ ಆಯಸ್ಸು, ಆರೋಗ್ಯ ಹಾಗೂ ಐಶ್ವರ್ಯ ನೀಡುವ ಜೊತೆಗೆ ಸಮಾಜ ಮತ್ತು ದೇಶಕ್ಕೆ ಸೇವೆ ಸಲ್ಲಿಸುವ ಶಕ್ತಿಯನ್ನು ಇನ್ನಷ್ಟು ವೃದ್ಧಿಸಲಿ ಎಂದು ಹಾರೈಸಿದರು. ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಡಾ.ಎನ್.ಚಂದ್ರಶೇಖರ್ ಅವರು ದೇಣಿಗೆಗಾಗಿ ನೀಡಿರುವ ಚೆಕ್‍ಗಳನ್ನು ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲು ಕ್ರಮ ವಹಿಸಲಾಗುವುದು. ಈ ರೀತಿಯ ಸೇವೆ ಪ್ರಶಂಸನೀಯ. ಕೊರೊನಾ ಸಂಬಂಧ ನಮ್ಮ ಆಸ್ಪತ್ರೆಯಿಂದಲೂ ಅಗತ್ಯ ಸಹಕಾರ ನೀಡುವುದಾಗಿ ಡಾ.ಎನ್.ಚಂದ್ರಶೇಖರ್ ಅವರು ಹೇಳಿದ್ದಾರೆ. ಅವರ ಈ ಸೇವೆ ಒಂದು ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆಶಾಕಿರಣ ಆಸ್ಪತ್ರೆಯ ಸಂಸ್ಥಾಪಕ ಟ್ರಸ್ಟಿ ಡಾ.ಗುರುರಾಜ್, ಆದಿತ್ಯಾ ಅಧಿಕಾರಿ ಆಸ್ಪ ತ್ರೆಯ ವ್ಯವಸ್ಥಾಪಕ ಎಸ್. ಗೋಪಾಲ್ ನಾಯಕ್ ಮತ್ತಿತರರು ಹಾಜರಿದ್ದರು.