ಮುಡಾದಿಂದ ಶೀಘ್ರ 6 ನೂತನ ಬಡಾವಣೆ ನಿರ್ಮಾಣ
ಮೈಸೂರು

ಮುಡಾದಿಂದ ಶೀಘ್ರ 6 ನೂತನ ಬಡಾವಣೆ ನಿರ್ಮಾಣ

May 8, 2020

ಮೈಸೂರು,ಮೇ 7(ವೈಡಿಎಸ್)-ಮುಡಾದಿಂದ 6 ನೂತನ ಬಡಾವಣೆಗಳ ನಿರ್ಮಾಣ ಸಂಬಂಧ ಶೀಘ್ರ ದಲ್ಲಿಯೇ ನಿರ್ಧಾರ ಕೈಗೊಳ್ಳುವುದಾಗಿ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಭರವಸೆ ನೀಡಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಜೊತೆಗೂಡಿ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಮುಡಾದಿಂದ ಕೈಗೆತ್ತಿಕೊಳ್ಳು ತ್ತಿರುವ ಯೋಜನೆಗಳು, ಆರ್ಥಿಕ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಸಂಸದ ಪ್ರತಾಪ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ. ರಾಮ ದಾಸ್ ಹಾಗೂ ಎಲ್.ನಾಗೇಂದ್ರ ಅವರು, ಅಧಿಕಾರಿ ಗಳು ಬಡಾವಣೆಗಳ ಅನುಮೋದನೆಗೆ ಕ್ರಮ ವಹಿಸಿಲ್ಲ. ಜನರು ನಿವೇಶನಕ್ಕಾಗಿ ಸಲ್ಲಿಸಿದ 88 ಸಾವಿರ ಅರ್ಜಿ ಗಳು ಬಾಕಿ ಇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್ ಪ್ರತಿ ಕ್ರಿಯಿಸಿ, ಇಲಾಖೆಯ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಮಾಹಿತಿ ನೀಡಿದರು. ಸಚಿವ ಬಸವರಾಜ್ ಅವರು, ಆರ್ಥಿಕವಾಗಿ ದುರ್ಬಲರಾಗಿರುವವರಿಗಾಗಿ ನಿವೇಶನ ಯೋಜನೆ ಅನುಮೋದನೆಗಾಗಿ ಮುಡಾ ಅಧಿಕಾರಿಗಳು ಸರ್ಕಾರಕ್ಕೆ ವರದಿ ಅಥವಾ ಪ್ರಸ್ತಾವನೆ ಸಲ್ಲಿಸಿ ಸುಮ್ಮನೆ ಕುಳಿತರೆ ಸಾಲದು. ಫಾಲೋಅಪ್ ಮಾಡುತ್ತಿರಬೇಕು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಸರ್ಕಾರದ ಗಮನವನ್ನೂ ಸೆಳೆಯುತ್ತಿರ ಬೇಕು ಎಂದು ಕಿವಿಮಾತು ಹೇಳಿದರು. ಅಧಿಕಾರಿ ಗಳು ವೇತನ ಪಡೆದು ಮನೆಯಲ್ಲಿ ಕೂರದೆ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಮುಂದಿನ ದಿನಗಳಲ್ಲಿ ಪರಿಶೀಲನೆ ಮಾಡುತ್ತೇನೆ. ತಪ್ಪು ಕಂಡರೆ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳು ವುದಾಗಿ ಎಚ್ಚರಿಕೆ ನೀಡಿದರು. ಶಾಸಕ ಜಿ.ಟಿ.ದೇವೇ ಗೌಡ ಮಾತನಾಡಿ, ಖಾಸಗಿ ಬಡಾವಣೆಗಳಲ್ಲಿನ ಬೀದಿ ದೀಪಗಳ ವಿದ್ಯುತ್ ಶುಲ್ಕವನ್ನು ಮುಡಾ ಪಾವತಿ ಸಬೇಕು. ಏಕೆಂದರೆ ಮುಡಾ ಅಲ್ಲಿನ ನಿವಾಸಿಗಳಿಂದ ತೆರಿಗೆ ಪಡೆಯುತ್ತಿದೆ.

ಬಡಾವಣೆಗಳಲ್ಲಿನ ಕ್ಷೇಮಾಭಿ ವೃದ್ಧಿ ಸಂಘಗಳೇ ಬೀದಿದೀಪದ ವಿದ್ಯುತ್ ಶುಲ್ಕ ಪಾವತಿಸುತ್ತಿವೆ. ಹಾಗಾಗಿ ಮುಡಾ ಅಥವಾ ಬಡಾವಣೆ ಅಭಿವೃದ್ಧಿಪಡಿಸಿದವರೇ ವಿದ್ಯುತ್ ಶುಲ್ಕ ಪಾವತಿಸಬೇಕು ಎಂದರು. ಇದಕ್ಕೂ ಮುನ್ನ ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್, ಆರ್ಥಿಕ ವಾಗಿ ಹಿಂದುಳಿದ ವರ್ಗದವರಿಗೆ ವಸತಿ ಸಮುಚ್ಛಯ ನಿರ್ಮಾಣಕ್ಕೆ ಮುಡಾ ವ್ಯಾಪ್ತಿಯ ವಿವಿಧ ಬಡಾವಣೆ ಗಳಲ್ಲಿ 28 ಎಕರೆ ಮೀಸಲಿಡಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ನಗರ, ಸ್ವರ್ಣ ಜಯಂತಿ ನಗರ, ಲಾಲ್ ಬಹದ್ದೂರ್ ಶಾಸ್ತ್ರಿ ನಗರ, ಲಲಿತಾದ್ರಿ ನಗರ, ಶಾಂತವೇರಿ ಗೋಪಾಲಗೌಡ ನಗರ, ಆರ್.ಟಿ.ನಗರದಲ್ಲಿ ಬಡಾವಣೆ ನಿರ್ಮಾಣಕ್ಕೆ ಅನುಮೋದನೆ ಸಿಗಬೇಕಿದೆ ಎಂದು ವಿವರ ನೀಡಿದರು. ಮೈಸೂರು ನಗರದ ಸುತ್ತಲಿನ ರಿಂಗ್‍ರೋಡ್‍ನ ಬೀದಿದೀಪಗಳ ವಿದ್ಯುತ್ ಬಿಲ್ ಹೆಚ್ಚಿನ ಪ್ರಮಾಣದ್ದಾಗಿದೆ. ಈ ಮೊತ್ತವನ್ನು ಮುಡಾ ಒಂದೇ ಭರಿಸಲು ಸಾಧ್ಯವಿಲ್ಲ. ಪಾಲಿಕೆಯೂ ಭರಿಸುವಂತೆ ಸರ್ಕಾರ ಸೂಚಿಸಬೇಕು. ಇಲ್ಲದಿದ್ದರೆ ಮುಡಾದ ಮೇಲೆ ಆರ್ಥಿಕ ಹೊರೆ ಹೆಚ್ಚಲಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು.

Translate »