ಮೈಸೂರು, ಮೇ 7(ಆರ್‍ಕೆ)-ಕೋವಿಡ್-19 ಲಾಕ್‍ಡೌನ್ ಇರುವುದರಿಂದ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲಿನ ಆಸ್ತಿ ಕಂದಾಯ ಪಾವತಿಗೆ ಮೂರು ತಿಂಗಳ ಕಾಲಾ ವಕಾಶ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಇಂದಿಲ್ಲಿ ತಿಳಿಸಿದ್ದಾರೆ. ಮೈಸೂರು ಮಹಾ ನಗರ ಪಾಲಿಕೆ ಹಳೇ ಕೌನ್ಸಿಲ್ ಹಾಲ್‍ನಲ್ಲಿ ಕೋವಿಡ್-19 ಸೋಂಕು ನಿಯಂತ್ರಣ, ಕುಡಿಯುವ ನೀರು, ಅಭಿವೃದ್ಧಿ ಯೋಜ ನೆಗಳ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮ ದಾಸ, ಎಲ್.ನಾಗೇಂದ್ರ, ಜಿ.ಟಿ.ದೇವೇಗೌಡ, ಮೇಯರ್ ತಸ್ನೀಂ, ಉಪ ಮೇಯರ್ ಶ್ರೀಧರ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಅವರು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು. ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್ ಡೌನ್ ನಿರ್ಬಂಧ ಇರುವ ಕಾರಣ ಎಲ್ಲಾ ಚಟುವಟಿಕೆಗಳು ಸ್ತಬ್ಧಗೊಂಡಿರುವುದ ರಿಂದ ಜನರಿಗೆ ಆದಾಯದ ಮೂಲಗಳಿ ಲ್ಲದೆ ಸಂಕಷ್ಟದಲ್ಲಿದ್ದಾರೆ. ಅದರಿಂದಾಗಿ ಮೈಸೂರು ಮಹಾನಗರ ಪಾಲಿಕೆಗೆ ಕುಡಿ ಯುವ ನೀರಿನ ಬಿಲ್, ಆಸ್ತಿ ತೆರಿಗೆ, ಉದ್ದಿಮೆ ರಹದಾರಿ ಶುಲ್ಕ ಸೇರಿದಂತೆ ಎಲ್ಲಾ ಬಗೆಯ ತೆರಿಗೆ ಪಾವತಿಸಲು 3 ತಿಂಗಳ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದರು.
ಮೈಸೂರು ಜನರು ಕಂದಾಯ ಪಾವತಿಸಲು ನಿರಾಕರಿಸುವುದಿಲ್ಲ. ತೆರಿಗೆ ಇಲ್ಲದೆ ಪಾಲಿಕೆಯು ಮೂಲ ಸೌಕರ್ಯ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ ಎಂಬುದನ್ನು ಮೈಸೂರಿಗರು ಅರ್ಥ ಮಾಡಿ ಕೊಂಡಿರುವುದರಿಂದ ಲಾಕ್‍ಡೌನ್ ಮುಗಿದು ಸಂಕಷ್ಟದಿಂದ ಹೊರ ಬಂದ ನಂತರ ಕಂದಾಯ ಪಾವತಿಸುತ್ತಾರೆಂಬ ನಂಬಿಕೆ ಇದೆ ಎಂದೂ ಬಸವರಾಜು ತಿಳಿಸಿದರು.
ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳ ಕುರಿತು ಸಂಸದರು, ಶಾಸಕರು ಮೇಯರ್ ಅವರು ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ಮುಖ್ಯಮಂತ್ರಿ ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ಒಂದು ನಿರ್ಣಯ ಕೈಗೊಳ್ಳಲಿದ್ದೇವೆ. ಮತ್ತೆ ನಾನು ಮೈಸೂರಿಗೆ ಬಂದು ಕೂಲಂಕುಷ ವಾಗಿ ಪರಿಶೀಲನೆ
ನಡೆಸಿ ಯಾವ ಯಾವ ಯೋಜನೆಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬೇಕೆಂಬುದರ ಕುರಿತು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ನುಡಿದರು. ಮುಡಾ ವ್ಯಾಪ್ತಿಯಲ್ಲಿರುವ ವಸತಿ ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸಿ ಮಹಾನಗರಕ್ಕೆ ಹಸ್ತಾಂತರಿಸುವುದು, ರಿಂಗ್ ರಸ್ತೆ ನಿರ್ವಹಣೆ ಸಂಬಂಧವೂ ಜಿಲ್ಲಾ ಮಂತ್ರಿ, ಜನಪ್ರತಿನಿಧಿಗಳು ಪ್ರಸ್ತಾಪಿಸಿದ್ದಾರೆ. ಈಗಾಗಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಕಾನ್‍ಫರೆನ್ಸ್ ಮೂಲಕ ಆಯ-ವ್ಯಯವನ್ನು ವೀಡಿಯೋನಲ್ಲೇ ಅನುಮೋದನೆ ಪಡೆಯಲಾಗಿದೆ. ಅದೇ ರೀತಿ ಮೈಸೂರು ಮಹಾನಗರ ಪಾಲಿಕೆ ಬಜೆಟ್ ಅನ್ನು ಮಂಡಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದೂ ಸಚಿವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಈಗಾಗಲೇ ಸರ್ಕಾರ ಅಕ್ರಮ-ಸಕ್ರಮ ಯೋಜನೆಯನ್ನು ಪ್ರಕಟಿಸಿದೆ. ಅದರ ಅನುಷ್ಠಾನದ ಬಗ್ಗೆ ಮುಖ್ಯಮಂತ್ರಿಗಳು, ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.