ಕೊಡವ ಕೌಟುಂಬಿಕ ಹಾಕಿ ನಮ್ಮೆ ಜನಕ ಪಾಂಡಂಡ ಕುಟ್ಟಪ್ಪ ಇನ್ನಿಲ್ಲ
ಮೈಸೂರು

ಕೊಡವ ಕೌಟುಂಬಿಕ ಹಾಕಿ ನಮ್ಮೆ ಜನಕ ಪಾಂಡಂಡ ಕುಟ್ಟಪ್ಪ ಇನ್ನಿಲ್ಲ

May 8, 2020

ಮಡಿಕೇರಿ, ಮೇ 7- ಕೊಡವ ಕೌಟುಂಬಿಕ ಹಾಕಿ ಉತ್ಸವದ ಪಿತಾಮಹ ಎಂದೇ ಜನಜನಿತರಾಗಿದ್ದ ಕೊಡಗಿನ ಪಾಂಡಂಡ ಕುಟ್ಟಪ್ಪ(86) ಅವರು ಗುರುವಾರ ಬೆಂಗ ಳೂರಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.

ಪಾಂಡಂಡ ಕುಟ್ಟಪ್ಪ ಅವರು ಕೊಡಗಿ ನಲ್ಲಿ ಹಾಕಿ ಪಂದ್ಯಾವಳಿಗೆ ಕಾಯಕಲ್ಪ ನೀಡುವ ಮೂಲಕ ಕೊಡವ ಕುಟುಂಬ ಗಳ ನಡುವೆ ಹಾಕಿ ಪಂದ್ಯಾವಳಿ ಆಯೋ ಜಿಸಿ, ನೂರಾರು ಹಾಕಿಪಟುಗಳು ರಾಜ್ಯ, ದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟ ದಲ್ಲಿ ತಮ್ಮ ಪ್ರತಿಭೆ ಮೆರೆಯಲು ವೇದಿಕೆ ಒದಗಿಸಿದ್ದರು. ಪಾಂಡಂಡ ಕುಟ್ಟಪ್ಪ ಕರಡ ಗ್ರಾಮದಲ್ಲಿ 1997ರಲ್ಲಿ ಕೊಡವ ಕುಟುಂಬ ಗಳ ಮೊದಲ
ಹಾಕಿ ಪಂದ್ಯಾವಳಿಯನ್ನು ಒಲಂಪಿಕ್ಸ್ ಮಾದರಿಯಲ್ಲಿಯೇ ಆಯೋಜಿಸುವ ಮೂಲಕ ದೇಶ-ವಿದೇಶಗಳ ಗಮನ ಸೆಳೆದಿದ್ದರು. ಕೊಡವ ಹಾಕಿ ಪಂದ್ಯಾವಳಿಗಾಗಿ ಪಾಂಡಂಡ ಕುಟ್ಟಪ್ಪ ಅವರು “ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್”ನಲ್ಲಿಯೂ ಸ್ಥಾನ ಪಡೆದಿದ್ದರು. 1997ರಲ್ಲಿ ಪ್ರಾರಂಭವಾದ “ಕೊಡವ ಕೌಟುಂಬಿಕ ಹಾಕಿ(ನಮ್ಮೆ)” ಉತ್ಸವದಲ್ಲಿ ಕೇವಲ 60 ಕೊಡವ ಕುಟುಂಬ ಗಳು ಭಾಗವಹಿಸಿದ್ದರೆ, 22ನೇ ವರ್ಷದ ಹಾಕಿ ಪಂದ್ಯಾವಳಿಯಲ್ಲಿ ಒಟ್ಟು 330ಕ್ಕೂ ಹೆಚ್ಚು ಕುಟುಂಬ ತಂಡಗಳು ಪಾಲ್ಗೊಂಡು ಕ್ರೀಡಾ ಸ್ಫೂರ್ತಿ ಮೆರೆದಿದ್ದವು. ವರ್ಷದಿಂದ ವರ್ಷಕ್ಕೆ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳ ಸಂಖ್ಯೆಯೂ ಏರಿಕೆ ಕಾಣು ವುದರೊಂದಿಗೆ ಈ ಹಾಕಿ ಉತ್ಸವ “ಗಿನ್ನಿಸ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್” ದಾಖಲೆಯ ಹಾದಿಯನ್ನೂ ತುಳಿಯುವ ಹಂತಕ್ಕೆ ತಲುಪಿತ್ತು ಎಂಬುದು ಗಮನಾರ್ಹ. ಕೊಡಗು ಜಿಲ್ಲೆಯಲ್ಲಿ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಪಂದ್ಯಾವಳಿ ಒಂದು ಉತ್ಸವದ ರೀತಿ ಪ್ರತೀ ವರ್ಷ 1 ತಿಂಗಳ ಕಾಲ ನಡೆಯುತ್ತಾ ಬರುತ್ತಿತ್ತು. ಕೊಡವ ಹಾಕಿ ಹಬ್ಬದ ಜನಕ ಕುಟ್ಟಪ್ಪನವರ ಆಶಯದಂತೆ 1997ರಿಂದ ನಿರಂತರವಾಗಿ ಹಾಕಿ ಹಬ್ಬ ಆಯೋಜಿಸಲ್ಪಡುತ್ತದೆ. ಸಹಸ್ರ ಸಹಸ್ರ ಸಂಖ್ಯೆಯ ಕ್ರೀಡಾಪಟುಗಳು ವಯಸು, ಲಿಂಗ ಭೇದವಿಲ್ಲದೇ ಈ ಕ್ರೀಡಾ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದರು. 2000 ಇಸವಿಯಲ್ಲಿ ಪೊನ್ನಂಪೇಟೆಯಲ್ಲಿ ನಡೆದ “ಚೆಪ್ಪುಡಿರ ಕಪ್ ಹಾಕಿ ನಮ್ಮೆ”ಯಲ್ಲಿ 30 ಮಂದಿ ಮಹಿಳಾ ಹಾಕಿ ಕ್ರೀಡಾಪಟುಗಳು ಪಾಲ್ಗೊಳ್ಳುವ ಮೂಲಕ ದಾಖಲೆ ಬರೆದಿದ್ದರು. ವಿಶ್ವದಲ್ಲಿಯೇ ಕೊಡಗು ಜಿಲ್ಲೆಯನ್ನು ಹೊರತುಪಡಿಸಿ ಬೇರೆಲ್ಲೂ ಕಂಡು ಬಾರದ ಹಾಕಿ ಉತ್ಸವವನ್ನು ಕಣ್ತಂಬಿಕೊಳ್ಳಲು ಗಣ್ಯಾತಿಗಣ್ಯರು ಮುಖ್ಯ ಅತಿಥಿಗಳಾಗಿ ಇದರಲ್ಲಿ ಭಾಗವಹಿಸುತ್ತಿದ್ದರು. ಪ್ರತಿ ವರ್ಷ ನಡೆಯುತ್ತಿದ್ದ ಹಾಕಿ ಉತ್ಸವವನ್ನು ಬೆಳ್ಳಿಯ ಹಾಕಿ ಸ್ಟಿಕ್‍ನಿಂದ ಸ್ವತಃ ಪಾಂಡಂಡ ಕುಟ್ಟಪ್ಪ ಅವರೇ ಉದ್ಘಾಟಿಸುತ್ತಿದ್ದುದು ಮತ್ತೊಂದು ವಿಶೇಷವಾಗಿತ್ತು. 2019ರ ಮಹಾಮಳೆ ಮತ್ತು ಈ ವರ್ಷ ಕೊರೊನಾ ಮಹಾಮಾರಿಯ ಕರಿ ನೆರಳಿನಿಂದಾಗಿ ಹಾಕಿ ಉತ್ಸವ ನಡೆಯಲಿಲ್ಲ ಎಂಬುದು ವಿಪರ್ಯಾಸ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಈ ಬಾರಿ ಏ.19ರಿಂದ ಇದೇ ಮೇ 17ರವರೆಗೆ “ಮುಕ್ಕಾಟಿರ(ಬೆಳ್ಳೂರು ಹರಿಹರ) ಕಪ್ ಹಾಕಿ ನಮ್ಮೆ” ನಡೆಯಬೇಕಿತ್ತು.

ಕಳೆದ 22 ವರ್ಷಗಳ ಕಾಲ ಹಾಕಿ ಹಬ್ಬಕ್ಕೆ ಸಂಪೂರ್ಣ ಮಾರ್ಗದರ್ಶನ ಮತ್ತು ಸಲಹೆ ನೀಡುತ್ತಿದ್ದ ಕುಟ್ಟಪ್ಪ, ಓರ್ವ ಹಾಕಿಪಟುವಾಗಿ, ಹಾಕಿ ಕ್ರೀಡೆಯ ಪ್ರಥಮ ದರ್ಜೆ ತೀರ್ಪುಗಾರರೂ ಆಗಿದ್ದ ಕುಟ್ಟಪ್ಪ, ಎಸ್‍ಬಿಐನಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಇದೀಗ ಕೊಡವ ಹಾಕಿ ಉತ್ಸವದ ಜನಕನ ಅಗಲಿಕೆಯ ನೋವು ಹಾಕಿ ಪ್ರೇಮಿಗಳನ್ನು ಕಾಡಲಿದೆ. ಸಹಸ್ರ ಸಂಖ್ಯೆಯ ಹಾಕಿ ಕ್ರೀಡಾಪಟುಗಳ, ಅದಕ್ಕಿಂತ ದುಪ್ಪಟ್ಟು ಸಂಖ್ಯೆಯ ಹಾಕಿ ಕ್ರೀಡಾಭಿಮಾನಿಗಳ ಪಾಲಿನ “ಮೇರುವ್ಯಕ್ತಿ” ಪಾಂಡಂಡ ಕುಟ್ಟಪ್ಪ ಅವರ ಅಂತ್ಯಕ್ರಿಯೆ ಕೊಡವ ಸಮುದಾಯದ ವಿಧಿವಿಧಾನಗಳೊಂದಿಗೆ ಗುರುವಾರ ಸಂಜೆ ಬೆಂಗಳೂರಿನ ಶ್ರೀರಾಂಪುರದಲ್ಲಿರುವ ರುದ್ರಭೂಮಿಯಲ್ಲಿ ನೆರವೇರಿತು.

Translate »