ಪಠ್ಯಕ್ರಮ ಶೇ.30ರಷ್ಟು ಕಡಿತ
ಮೈಸೂರು

ಪಠ್ಯಕ್ರಮ ಶೇ.30ರಷ್ಟು ಕಡಿತ

May 8, 2020

ಬೆಂಗಳೂರು, ಮೇ 7(ಕೆಎಂಶಿ)- ಕೋವಿಡ್ ಲಾಕ್ ಡೌನ್‍ನಿಂದ ಏರುಪೇರಾಗಿರುವ ಪ್ರಸಕ್ತ ಶೈಕ್ಷಣಿಕ ವರ್ಷದ ಅವಧಿ ಪೂರ್ಣಗೊಳಿಸಲು ಶೇ.30ರಷ್ಟು ಪಠ್ಯಕ್ರಮ (ಸಿಲಬಸ್) ಕಡಿತಗೊಳಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.

ರಾಜ್ಯ, ರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಮುಂದಿನ ಆಗಸ್ಟ್, ಸೆಪ್ಟೆಂಬರ್‍ವರೆಗೂ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ಪ್ರಸಕ್ತ ಸಾಲಿನ 2020-21 ಶೈಕ್ಷಣಿಕ ವರ್ಷ ನಿಗದಿತ ಮಾರ್ಚ್- ಏಪ್ರಿಲ್ ಮೇ ತಿಂಗಳಲ್ಲೇ ಪೂರ್ಣಗೊಳ್ಳಬೇಕು. ಇದರಲ್ಲಿ ಯಾವುದೇ ವ್ಯತ್ಯಾಸಗಳಾಗಬಾರದೆಂಬ ಉದ್ದೇಶದಿಂದ ಪಠ್ಯಕ್ರಮವನ್ನೇ ಕಡಿತಗೊಳಿಸಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳು ಶೇ.70ರಷ್ಟು ಪಠ್ಯಗಳನ್ನಷ್ಟೇ ಕಲಿಕೆ ಮಾಡಿ, ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗುತ್ತಿದೆ. ಸಿಬಿಎಸ್‍ಇ ಸೇರಿದಂತೆ ಕೇಂದ್ರ ಶಿಕ್ಷಣದಡಿ ಬರುವ ಪಠ್ಯ ಕ್ರಮಗಳಲ್ಲಿ ಶೇ.40ರಷ್ಟು ಕಡಿತಗೊಳ್ಳಲಿದೆ. ಕಡಿತಗೊಂಡ ಪಠ್ಯವನ್ನು ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಸೇರಿಸಲು ಸಾಧ್ಯವೇ ಎಂಬ ಬಗ್ಗೆ ಚಿಂತನೆ ನಡೆದಿದೆ. ಒಂದೆಡೆ ಪಠ್ಯಕ್ರಮ ಕಡಿತಗೊಳಿಸುವುದು ಮತ್ತೊಂದೆಡೆ ಆನ್‍ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕಾರ್ಯದ ಬಗ್ಗೆಯು ತರಬೇತಿ ನಡೆದಿದೆ. ಲಾಕ್‍ಡೌನ್ ಇದ್ದರೂ, ಬೋಧಕ ಸಿಬ್ಬಂದಿ ತಮ್ಮ ಕಾಲೇಜುಗಳಿಗೆ ಹಾಜರಾಗಿ ಸರ್ಕಾರ ಸೂಚಿಸಿರುವ ಮಾರ್ಗಸೂಚಿ ಅನ್ವಯ ಪಠ್ಯಕ್ರಮಕ್ಕೆ ಸಿದ್ಧಗೊಳ್ಳಬೇಕಾಗಿದೆ. ಇದರ ಜೊತೆಯಲ್ಲೇ ವಿದ್ಯಾರ್ಥಿಗಳಿಗೆ ಆನ್‍ಲೈನ್ ಶಿಕ್ಷಣ ಕೊಡುವ ಸಂಬಂಧ ತರಬೇತಿ ಪಡೆದುಕೊಳ್ಳಬೇಕು ಮತ್ತು ಪಠ್ಯಕ್ರಮ ಕಡಿತಗೊಂಡರೆ, ವಿದ್ಯಾರ್ಥಿಗಳಿಗೆ ಇರುವ ಅಲ್ಪಾವಧಿ ಯಲ್ಲೇ ಉಳಿದ ಅಲ್ಪಾವಧಿಯಲ್ಲಿ ಪೂರ್ಣಗೊಳಿಸಲು ತಯಾರಿ ನಡೆಸಿಕೊಳ್ಳಬೇಕು. ಲಾಕ್‍ಡೌನ್ ಮುಗಿಯುವವ ರೆಗೂ ಕಾಲೇಜುಗಳನ್ನು ತೆರೆಯುವುದು ಬೇಡ ಎಂದು ಬೋಧಕ ಸಿಬ್ಬಂದಿ ಎಷ್ಟೇ ಬೇಡಿಕೊಂಡರೂ ಇದಕ್ಕೆ ಆಸ್ಪದ ಕೊಡದ ಸರ್ಕಾರ, ಕಡ್ಡಾಯವಾಗಿ ಹಾಜರಾತಿಗೆ ಸೂಚಿಸಿದೆ. ಅಷ್ಟೇ ಅಲ್ಲದೆ ರಾಜ್ಯದ 400 ಪದವಿ ಕಾಲೇಜುಗಳ ಶೈಕ್ಷಣಿಕ ಗುಣ ಮಟ್ಟ ಹೆಚ್ಚಿಸಲು ಕೆಲವು ಹೊಸ ಪ್ರಯೋಗಗಳನ್ನು ಕೈಗೊಂಡಿದೆ. ಇದಕ್ಕೂ ಬೋಧಕರು ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಒಂದು ವೇಳೆ ಕೊರೊನಾ ಸೋಂಕು ಹಿಡಿತಕ್ಕೆ ಬಾರದಿ ದ್ದರೆ, ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಆನ್‍ಲೈನ್ ಮೂಲಕ ಕಲಿಕೆ ಮಾಡಬೇಕಾಗಿದೆ. ಈಗಾಗಲೇ ಖಾಸಗಿ ಇಂಜಿನಿಯರಿಂಗ್ ಮತ್ತು ಇತರೆ ಶಿಕ್ಷಣ ಸಂಸ್ಥೆಗಳು ಇಂತಹ ಕ್ರಮವನ್ನು ಅನುಸರಿಸುತ್ತಿವೆ. ಅದನ್ನೇ ಸರ್ಕಾರಿ ಕಾಲೇಜುಗಳು ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆದಿದೆ. ಇದು ಕೇವಲ ಉನ್ನತ ಶಿಕ್ಷಣಕ್ಕೆ ಅಲ್ಲದೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲೂ ಶೇ.30ರಿಂದ 40ರಷ್ಟು ಪಠ್ಯ ಕಡಿತಗೊಳ್ಳಲಿದೆ ಎನ್ನಲಾಗಿದೆ.

Translate »