ರಾಜ್ಯದಲ್ಲಿ ನಾಳೆಯಿಂದ 10 ದಿನ  ನೈಟ್ ಕಫ್ರ್ಯೂ
News

ರಾಜ್ಯದಲ್ಲಿ ನಾಳೆಯಿಂದ 10 ದಿನ ನೈಟ್ ಕಫ್ರ್ಯೂ

December 27, 2021

ಬೆಂಗಳೂರು, ಡಿ.26-ಒಮಿಕ್ರಾನ್ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಡಿ.28ರಿಂದ ಜ.7ರವರೆಗೆ 10 ದಿನಗಳ ಕಾಲ ರಾತ್ರಿ 10ರಿಂದ ಮುಂಜಾನೆ 5 ಗಂಟೆವರೆಗೆ ನೈಟ್ ಕಫ್ರ್ಯೂ ಜಾರಿ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಒಮಿಕ್ರಾನ್ ನಿಯಂತ್ರಣ ಸಂಬಂಧ ಭಾನು ವಾರ ತಜ್ಞರ ಸಲಹಾ ಸಮಿತಿ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಡಿ.28ರಿಂದ ಜ.7ರ ಮುಂಜಾನೆ 5 ಗಂಟೆವರೆಗೆ ಪ್ರತೀದಿನ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕಫ್ರ್ಯೂ ಜಾರಿಗೊಳಿಸಲಾಗಿದೆ. ಡಿ.30ರಿಂದ ಜ.2ರವರೆಗೆ ಹೋಟೆಲ್, ರೆಸ್ಟೋರೆಂಟ್, ಪಬ್, ಕ್ಲಬ್‍ಗಳಲ್ಲಿ ಶೇ.50ರಷ್ಟು ಗ್ರಾಹಕರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗಿದೆ. ಈ ಸ್ಥಳಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯು ಆರ್‍ಟಿ-ಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು. ಕೋವಿಡ್ ಲಸಿಕೆ ಎರಡು ಡೋಸ್ ಕಡ್ಡಾಯವಾಗಿ ಪಡೆದಿರಬೇಕು ಎಂದು ಹೇಳಿದರು.

ಮದುವೆ ಸಮಾರಂಭಗಳೂ ಸೇರಿದಂತೆ ಎಲ್ಲಾ ರೀತಿಯ ಸಭೆ- ಸಮಾರಂಭಗಳಲ್ಲಿ ಡಿ.28ರಿಂದ ಜ.7ರವರೆಗೆ 300 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದ ಅವರು, ಚಲನಚಿತ್ರ ಪ್ರದ ರ್ಶನಗಳನ್ನು ರಾತ್ರಿ 10 ಗಂಟೆಯ ಒಳಗೆ ಮುಕ್ತಾಯಗೊಳಿಸ ಬೇಕೆಂದು ತಿಳಿಸಿದ್ದಾರೆ. ಆದರೆ ಸಿನಿಮಾ ಮಂದಿರಗಳಿಗೆ ಶೇ.50ರಷ್ಟು ಪ್ರವೇಶಾವಕಾಶದ ನಿರ್ಬಂಧ ವಿಧಿಸಿಲ್ಲ. ನೈಟ್ ಕಫ್ರ್ಯೂ ವೇಳೆ ಎಲ್ಲಾ ರೀತಿಯ ಸರಕು ಸಾಗಾಣಿಕೆ, ವಾಹನಗಳ ಸಂಚಾರಕ್ಕೆ ಅನುಮತಿ ನೀಡ ಲಾಗಿದೆ. ಬಸ್, ರೈಲು ಹಾಗೂ ವಿಮಾನ ಹಾರಾಟಕ್ಕೆ ಯಾವುದೇ ರೀತಿಯ ಅಡ್ಡಿ ಇಲ್ಲ. ಆದರೆ ಪ್ರಯಾಣಿಕರು ಟಿಕೆಟ್ ಅನ್ನು ತೋರಿಸಿ ರಾತ್ರಿ ವೇಳೆ ಸಂಚರಿಸ ಬಹುದಾಗಿದೆ. ನೈಟ್ ಕಫ್ರ್ಯೂ ವೇಳೆ ಹೋಂ ಡೆಲಿವರಿಗೆ ಯಾವುದೇ ಅಡ್ಡಿ ಇಲ್ಲ. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿನಾಯಿತಿ ನೀಡಲಾಗಿದ್ದು, ಆಸ್ಪತ್ರೆಗೆ ತೆರಳುವ ರೋಗಿಗಳು ಹಾಗೂ ಅವರ ಸಂಬಂಧಿಕರ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ರಾತ್ರಿ ವೇಳೆ ಕೈಗಾರಿಕೆಗಳು ಕಾರ್ಯ ನಿರ್ವಹಿಸಲು ಯಾವುದೇ ಅಡ್ಡಿ ಇಲ್ಲ. ಆದರೆ ರಾತ್ರಿ ಪಾಳಿ ಕೆಲಸ ಮಾಡುವ ಕಾರ್ಮಿಕರು ಗುರುತಿನ ಚೀಟಿ ತೋರಿಸಿ ಸಂಚರಿಸ ಬಹುದಾಗಿದೆ ಎಂದು ಅವರು ಹೇಳಿದರು. ಖಾಸಗಿ ವಾಹನಗಳು ಹಾಗೂ ಟ್ಯಾಕ್ಸಿಗಳು ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗೂ ವಿಮಾನ ನಿಲ್ದಾಣಕ್ಕೆ ಸಂಚರಿಸಬಹುದು. ಆದರೆ ಈ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಟಿಕೆಟ್ ಹೊಂದಿರಬೇಕು. ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆದೊಯ್ಯುವ ಎಲ್ಲಾ ರೀತಿಯ ವಾಹನಗಳಿಗೆ ನೈಟ್ ಕಫ್ರ್ಯೂ ವೇಳೆ ಅನುಮತಿ ಇದೆ. ಮಹಾರಾಷ್ಟ್ರ ಮತ್ತು ಕೇರಳ ಗಡಿಯಲ್ಲಿ ಕಟ್ಟಿನಿಟ್ಟಿನ ತಪಾಸಣೆ ಮಾಡಲಾಗುತ್ತಿದ್ದು, ಪ್ರತಿಯೊಬ್ಬರ ಆರ್‍ಟಿ-ಪಿಸಿಆರ್ ವರದಿಯನ್ನು ಪರಿಶೀಲಿಸಲಾಗು ತ್ತದೆ. ನೆಗೆಟಿವ್ ಇದ್ದರೆ ಮಾತ್ರ ರಾಜ್ಯದೊಳಗೆ ಪ್ರವೇಶಿಸಲು ಅವರಿಗೆ ಅವಕಾಶ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು. ಒಮಿಕ್ರಾನ್ ಕಂಡು ಬಂದಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮಯೋಚಿತ ನಿರ್ಧಾರ ಸೋಂಕು ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ ಎಂದ ಸಚಿವರು, ಜ.3 ರಿಂದ 15-18 ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಕೋವಿಡ್ ಫ್ರಂಟ್‍ಲೈನ್ ವಾರಿಯರ್ಸ್ ಹಾಗೂ 60 ವರ್ಷ ಮೇಲ್ಪಟ್ಟ ಅಸ್ವಸ್ಥತೆ ಉಳ್ಳವರಿಗೆ ಜ.10 ರಿಂದ ಬೂಸ್ಟರ್ ಡೋಸ್ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

Translate »