ಮುಂದಿನ ಐದು ವರ್ಷದಲ್ಲಿ 10 ದಶಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿ ಡಿಸಿಎಂ ಡಾ. ಅಶ್ವತ್ಥನಾರಾಯಣ ವಿಶ್ವಾಸ
ಮೈಸೂರು

ಮುಂದಿನ ಐದು ವರ್ಷದಲ್ಲಿ 10 ದಶಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿ ಡಿಸಿಎಂ ಡಾ. ಅಶ್ವತ್ಥನಾರಾಯಣ ವಿಶ್ವಾಸ

January 13, 2021

ಬೆಂಗಳೂರು, ಜ.12(ಕೆಎಂಶಿ)-ಸ್ವಾಮಿ ವಿವೇಕಾನಂದರ ಪ್ರೇರಣೆಯಿಂದ ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣದ ಜೊತೆಗೆ ಮುಂದಿನ 5 ವರ್ಷಗಳಲ್ಲಿ 10 ದಶಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಖಾತೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಸ್ವಾಮಿ ವಿವೇಕಾನಂದರ 158ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 10 ದಶಲಕ್ಷ ಉದ್ಯೋಗ ಸೃಷ್ಟಿ ಕುರಿತು ನಡೆದ ಉನ್ನತಮಟ್ಟದ ಚರ್ಚಾಗೋಷ್ಠಿ ಯಲ್ಲಿ ಅನೇಕ ಮೌಲಿಕ ಅಭಿಪ್ರಾಯಗಳು ವ್ಯಕ್ತವಾಗಿವೆ, ವಿವಿಧ ಕ್ಷೇತ್ರಗಳ ಸಾಧಕರು ನೀಡಿರುವ ಸಲಹೆಗಳನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಲಿದೆ ಎಂದರು.

ಕೌಶಲ್ಯಾಭಿವೃದ್ಧಿ, ಕೃಷಿ, ತೋಟಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ಉದ್ಯೋಗ ಸೃಷ್ಟಿಯಾಗುವ ಅನೇಕ ಕ್ಷೇತ್ರಗಳನ್ನು ಪ್ರತಿನಿಧಿಸುವ ತಜ್ಞರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಕೃಷಿ, ಕೃಷಿ ಮಾರುಕಟ್ಟೆ, ಉನ್ನತ ಶಿಕ್ಷಣ, ಪ್ರಾಥಮಿಕ ಶಿಕ್ಷಣ ಸೇರಿದಂತೆ ಅನೇಕ ಇಲಾಖೆ ಗಳಲ್ಲಿ ಗಮನಾರ್ಹ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗ ಮಾರುಕಟ್ಟೆಗೆ ತಕ್ಕಂತೆ ತರಬೇತಿ ನೀಡಿ ಕೌಶಲ್ಯಭರಿತ ಮಾನವ ಸಂಪನ್ಮೂಲ ತಯಾರು ಮಾಡುವ ಕೆಲಸ ಯುದ್ಧೋಪಾದಿಯಲ್ಲಿ ನಡೆಯುತ್ತಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ, ಸಮಗ್ರ ಕಲಿಕಾ ನಿರ್ವಹಣಾ ವ್ಯವಸ್ಥೆ, ಡಿಜಿಟಲ್ ಕಲಿಕೆ ಉತ್ತೇಜಿಸಲು ಉನ್ನತ ಶಿಕ್ಷಣ ಪಡೆಯುತ್ತಿರುವ ಸುಮಾರು 1.55 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಉಚಿತ ಟ್ಯಾಬ್ಲೇಟ್ ಪಿಸಿ ನೀಡಲು ನಿರ್ಧರಿಸಲಾಗಿದೆ. ಏಕೀಕೃತ ವಿಶ್ವವಿದ್ಯಾಲಯ ಹಾಗೂ ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಸ್), ಡಿಪ್ಲೊಮೋ ಪಠ್ಯದ ಆಮೂಲಾಗ್ರ ಬದಲಾವಣೆ, ನಾಲ್ಕು ಹಂತಗಳಲ್ಲಿ ಯುವಜನರ ಸಬಲೀಕರಣ ಜೊತೆಗೆ ಶೇ.34.6 ರಷ್ಟಿರುವ ಯುವಜನರ ಕೌಶಲ್ಯಾಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

2025ರ ವೇಳೆಗೆ 15 ಲಕ್ಷ ಯುವಜನತೆ ಸಂಪೂರ್ಣವಾಗಿ ಕೌಶಲ್ಯಭರಿತರಾಗಿ ಹೊರಹೊಮ್ಮಲಿದ್ದಾರೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು. ಇದಕ್ಕೂ ಮುನ್ನ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ, ಸ್ವಾಮಿ ವಿವೇಕಾನಂದರ ಚಿಂತನೆ ಮತ್ತು ಸಂದೇಶಗಳ ಪ್ರೇರಣೆಯೊಂದಿಗೆ ತಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಶಿಕ್ಷಣವೂ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಅವರ ಸ್ಫೂರ್ತಿಯೊಂದಿಗೆ ಕೆಲಸ ಮಾಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಹನ್ನೆರಡು ಮಂದಿ ಯುವ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು.

 

Translate »