ರಾಜ್ಯದಲ್ಲಿ ಮೊದಲ ಡೋಸ್ ಲಸಿಕೆಯಲ್ಲಿ ಶೇ.100ರ ಸಾಧನೆ
News

ರಾಜ್ಯದಲ್ಲಿ ಮೊದಲ ಡೋಸ್ ಲಸಿಕೆಯಲ್ಲಿ ಶೇ.100ರ ಸಾಧನೆ

January 24, 2022

ಬೆಂಗಳೂರು, ಜ.23-ರಾಜ್ಯದಲ್ಲಿ ಕೋವಿಡ್ ಲಸಿಕೆ ಮೊದಲ ಡೋಸ್ ಶೇ.100 ರಷ್ಟು ನೀಡಲಾಗಿದ್ದು, ಇದೊಂದು ಸಾಧನೆಯಾಗಿದೆ ಎಂದಿರುವ ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ಈ ಸಾಧನೆಗೆ ಕಾರಣಕರ್ತರಾದ ಆರೋಗ್ಯ ಕಾರ್ಯಕರ್ತರಿಗೆ ಅಭಿ ನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಇಂದಿಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಮತ್ತು ಸಚಿವರು ನೀಡಿದ ಸಹಕಾರದಿಂದಾಗಿ ಶೇ.100ರ ಗುರಿ ತಲುಪಲಾಗಿದೆ. 2ನೇ ಡೋಸ್ ಕೂಡ ಶೇ.85ರಷ್ಟು ನೀಡಲಾಗಿದ್ದು, ಒಟ್ಟಾರೆ ಕೊರೊನಾ ನಿಯಂತ್ರಣ ಮಾಡುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಕಳೆದ 2-3 ದಿನಗಳಿಂದ ಸೋಂಕು ಕಡಿಮೆಯಾಗಿದೆ. ಇನ್ನೆರಡು ದಿನ ಇದೇ ರೀತಿ ಮುಂದು ವರೆದರೆ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಹೇಳಬಹುದು. ಶೇ.24ರಿಂದ 25 ಪಾಸಿಟಿವಿಟಿ ರೇಟ್ ಇದ್ದ ಬೆಂಗಳೂರಿನಲ್ಲಿ ಇದೀಗ ಶೇ.17ರಿಂದ 19ರಷ್ಟು ಪಾಸಿಟಿವಿಟಿ ರೇಟ್ ಬರುತ್ತಿದೆ ಎಂದರು. ಆದರೆ ಬೆಂಗಳೂರು ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ನಿಧಾನವಾಗಿ ಏರಿಕೆಯಾಗು ತ್ತಿದೆ. ನಗರ ಪ್ರದೇಶದಿಂದ ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ಹೆಚ್ಚಳವಾಗುತ್ತಿರುವುದು ಸ್ವಾಭಾವಿಕ ಎಂದ ಸಚಿವರು, ನಾವು ಐದಾರು ರಾಜ್ಯಗಳ ಗಡಿ ಹಂಚಿಕೊಂಡಿದ್ದೇವೆ. ಅಲ್ಲಿಂದ ಬರುವವರನ್ನು ತಡೆಯಲು ಸಾಧ್ಯವಿಲ್ಲ. ಆದರೂ ಪಾಸಿಟಿವಿಟಿ ಇರುವವರು ಬರಬೇಡಿ ಎಂದು ಹೇಳಿದ್ದೇವೆ ಎಂದರು.

ದೇಶದಲ್ಲಿ ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಸೋಂಕು ಹೆಚ್ಚಾಗಿತ್ತು. ಆದರೆ ಕರ್ನಾಟಕದಲ್ಲಿ ಒಂದು ತಿಂಗಳ ಬಳಿಕ ಸೋಂಕು ಹೆಚ್ಚಾಯಿತು. ಇನ್ನು 2-3 ವಾರದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. ಜನರು ಇದೇ ರೀತಿ ಸಹಕಾರ ನೀಡಲಿ ಎಂದರು. ರಾಜ್ಯ ಸರ್ಕಾರ ವೈಜ್ಞಾನಿಕ ನೆಲೆಗಟ್ಟಿನಲ್ಲಿ ತೀರ್ಮಾನಗಳನ್ನು ಕೈಗೊಂಡಿದೆ. ಮೊದಲನೇ ಅಲೆಯಲ್ಲಿ ನೂರು ಕೋವಿಡ್ ಪ್ರಕರಣಗಳು ದೃಢಪಟ್ಟ ತಕ್ಷಣ ಲಾಕ್‍ಡೌನ್ ಮಾಡಲಾಗಿತ್ತು. 2ನೇ ಅಲೆಯಲ್ಲಿ ಮೂರು ಸಾವಿರ ಪ್ರಕರಣ ದಾಟಿದ ನಂತರ ಲಾಕ್‍ಡೌನ್ ಮಾಡಿದ್ದೆವು. ಮೂರನೇ ಅಲೆಯಲ್ಲಿ 2 ವಾರ ವೀಕೆಂಡ್ ಕಫ್ರ್ಯೂ ಮಾಡಿದ್ದೆವು. ಇವೆಲ್ಲವನ್ನೂ ವೈಜ್ಞಾನಿಕವಾಗಿ ಯೋಚನೆ ಮಾಡಿಯೇ ನಿರ್ಧಾರ ಮಾಡಲಾಗಿತ್ತು. ಇದೀಗ ಸೋಂಕಿನ ತೀವ್ರತೆ ಹೆಚ್ಚಾಗಿ ಇಲ್ಲ ಎಂಬ ಕಾರಣಕ್ಕಾಗಿ ವೀಕೆಂಡ್ ಕಫ್ರ್ಯೂ ವಾಪಸ್ ಪಡೆದಿದ್ದೇವೆ. ಒಂದು ವೇಳೆ ಸೋಂಕಿನ ತೀವ್ರತೆ ಹೆಚ್ಚಾದರೆ ಮತ್ತೆ ಕಠಿಣ ರೂಲ್ಸ್ ಜಾರಿ ಮಾಡುತ್ತೇವೆ ಎಂದು ಡಾ. ಸುಧಾಕರ್ ಹೇಳಿದರು.

Translate »