ರಾಜ್ಯದಲ್ಲಿ 10,000 ಆರ್.ಟಿ.ಐ ಪ್ರಕರಣ ವಿಚಾರಣೆ ಬಾಕಿ
ಮೈಸೂರು

ರಾಜ್ಯದಲ್ಲಿ 10,000 ಆರ್.ಟಿ.ಐ ಪ್ರಕರಣ ವಿಚಾರಣೆ ಬಾಕಿ

July 7, 2018

ಮೈಸೂರು: ರಾಜ್ಯ ಮಾಹಿತಿ ಆಯೋಗದಲ್ಲಿ 10 ಸಾವಿರ ಆರ್.ಟಿ.ಐ ಮೇಲ್ಮನವಿ ಅರ್ಜಿ ವಿಚಾರಣೆಗೆ ಬಾಕಿ ಇವೆ ಎಂದು ರಾಜ್ಯ ಮಾಹಿತಿ ಆಯುಕ್ತ ಕೆ.ಎಂ.ಚಂದ್ರೇಗೌಡ ತಿಳಿಸಿದ್ದಾರೆ. ಮೈಸೂರಿನ ಜಿಪಂ ಕಚೇರಿಯ ಮಿನಿ ಸಭಾಂಗಣದಲ್ಲಿ ಇಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಮಾಹಿತಿ ಹಕ್ಕು ಅಧಿನಿಯಮದಡಿ ಬಾಕಿ ಉಳಿದಿದ್ದ ಪ್ರಕರಣಗಳ ಮೇಲ್ಮನವಿಗಳ ವಿಚಾರಣೆ ನಡೆಸಿದ ಬಳಿಕ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಆಯೋಗಕ್ಕೆ ಈ ಭಾಗದಿಂದ 30 ಅರ್ಜಿಗಳು ಬಂದಿದ್ದವು. ಆ ಪೈಕಿ 16 ಇತ್ಯರ್ಥಗೊಂಡಿದ್ದು, ಸ್ಥಳದಲ್ಲೇ ಮಾಹಿತಿ ಕೊಡಿಸಲಾಗಿದೆ. ಮೂವರು ಅಧಿಕಾರಿಗಳಿಗೆ ದಂಡ ವಿಧಿಸಲಾಗಿದೆ. ಉಳಿದವರಿಗೆ ನೋಟಿಸ್ ನೀಡಲು ಸೂಚಿಸಲಾಗಿದೆ ಎಂದರು.
ಬಾಕಿ ಉಳಿದಿರುವ ಪ್ರಕರಣಗಳ ವಿಚಾರಣೆ ಜುಲೈ 17ಕ್ಕೆ ಮುಂದೂಡಿದ್ದು, ಬೆಂಗಳೂರಿನಲ್ಲಿ ನಡೆಯುವ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ ಎಂದ ಅವರು, ಗ್ರಾಮ ಪಂಚಾಯ್ತಿಗೆ ಮಂಜೂರಾದ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳು, ಎಸ್‍ಸಿ, ಎಸ್‍ಟಿ ಸರ್ಟಿಫಿಕೇಟ್ ನೀಡಿರುವ ಬಗ್ಗೆ, ಕೆಆರ್ ಆಸ್ಪತ್ರೆಯಲ್ಲಿ ಗಾಯದ ಪ್ರಮಾಣಪತ್ರ ಸೇರಿದಂತೆ ಹಲವು ಮಾಹಿತಿಗಳನ್ನು ಕೋರಿ ಸಲ್ಲಿಸಿದ್ದ ಆರ್.ಟಿ.ಐ ಅರ್ಜಿಗೆ ಮಾಹಿತಿ ನೀಡಿಲ್ಲ ಎಂದು ಆಯೋಗಕ್ಕೆ ದೂರುಗಳು ಬಂದಿದ್ದವು ಎಂದು ಚಂದ್ರೇಗೌಡರು ತಿಳಿಸಿದರು.

ಮೈಸೂರಿನ ಶಾರದಾ ವಿಲಾಸ ಕಾನೂನು ಕಾಲೇಜಿಗೆ (ಅನುದಾನಿತ) ಸರ್ಕಾರದಿಂದ ಮಂಜೂರಾದ ಅನುದಾನ, ಬಳಕೆ, ಕಾನೂನು ಕಾಲೇಜು ಪ್ರವೇಶಾತಿಗೆ ಅನುಸರಿಸುವ ನಿಯಮಗಳ ಕುರಿತಂತೆ ಮಾಹಿತಿಗಾಗಿ ವಕೀಲ ಬಂಗಾರ ನಾಯ್ಕ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನೂ ವಿಚಾರಣೆ ನಡೆಸಿದ ಅವರು, ನಿಗಧಿತ ಅವಧಿಯೊಳಗೆ ಮಾಹಿತಿ ನೀಡದ ಕಾರಣ ಮಾಹಿತಿ ಹಕ್ಕು ಕಾಯ್ದೆಯಡಿ ನೋಟೀಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಮಾಹಿತಿ ಆಯುಕ್ತರ ನೇಮಕ ವಿಳಂಬವಾಗಿದ್ದ ಕಾರಣ ಆಯೋಗದಲ್ಲಿ 30 ಸಾವಿರದಷ್ಟು ಅರ್ಜಿಗಳು ಬಾಕಿ ಉಳಿದಿದ್ದವು. ತಾವು ಬಂದ ಮೇಲೆ ಎರಡು ವರ್ಷಗಳಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ವಿಚಾರಣೆ ನಡೆಸಿದ್ದೇನೆ. ಈಗ ಕೇವಲ 10,000 ಪ್ರಕರಣಗಳು ಮಾತ್ರ ಬಾಕಿ ಉಳಿದಿವೆ. ಪ್ರತಿನಿತ್ಯ ಬೆಂಗಳೂರಲ್ಲಿ ವಿಚಾರಣೆ ನಡೆಸುತ್ತಿರುವುದರಿಂದ ಶೀಘ್ರ ಇತ್ಯರ್ಥಗೊಳಿಸುತ್ತೇವೆಂದು ಚಂದ್ರೇಗೌಡರು ತಿಳಿಸಿದರು.

ಈ ಅಧಿನಿಯಮದಡಿ ನೋಟೀಸ್ ಜಾರಿ ಮಾಡಿ, ಮಾಹಿತಿ ನೀಡದೇ ಸತಾಯಿಸುವ ಅಧಿಕಾರಿಗಳಿಗೆ 25,000 ರೂ.ವರೆಗೂ ದಂಡ ವಿಧಿಸಬಹುದೇ ಹೊರತು ಜೈಲು ಶಿಕ್ಷೆಗೆ ಅವಕಾಶವಿಲ್ಲ ಎಂದು ನುಡಿದರು.

‘ಸರ್ಕಾರ ಕೈತುಂಬ ಸಂಬಳ ಕೊಡುತ್ತದೆ. ಹಲವು ಸೌಲಭ್ಯ ನೀಡಿ ಅನುಕೂಲ ಮಾಡಿದೆ. ಜನರಿಗೆ ಸೇವೆ ಮಾಡಲೆಂದು ನೇಮಿಸಿದ ನೀವು ಸರಿಯಾಗಿ ಕೆಲಸ ಮಾಡದಿದ್ದರೆ ಹೇಗೆ? ಸಾರ್ವಜನಿಕರು ಕೋರಿದ ಮಾಹಿತಿಯನ್ನು ಕೊಡದೆ ಸತಾಯಿಸಿದರೆ ದಂಡ ತೆರಬೇಕಾಗುತ್ತದೆ. ನಿಮ್ಮ ಮುಂಬಡ್ತಿ ಮತ್ತು ಇತರ ಸೌಲಭ್ಯಕ್ಕೂ ತೊಂದರೆಯಾಗುತ್ತದೆ. -ಕೆ.ಎಂ.ಚಂದ್ರೇಗೌಡ, ರಾಜ್ಯ ಮಾಹಿತಿ ಆಯುಕ್ತ.

Translate »